
ತೆಲುಗು ಚಿತ್ರರಂಗದಲ್ಲಿ ಇದೀಗ ಹೊಸದೊಂದು ಕುತೂಹಲಕಾರಿ ವದಂತಿ ಭಾರೀ ಸದ್ದು ಮಾಡುತ್ತಿದೆ. ಟಾಲಿವುಡ್ ಮೆಗಾಪವರ್ ಸ್ಟಾರ್ ರಾಮ್ ಚರಣ್ ಅವರು ಬೆಳ್ಳಿಪರದೆಯ ಮೇಲೆ ಶ್ರೀಕೃಷ್ಣನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಗುಜರಾತಿ ಚಿತ್ರರಂಗದ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿ 120 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ ಬ್ಲಾಕ್ ಬಸ್ಟರ್ ‘ಲಾಲೋ: ಕೃಷ್ಣ ಸದಾ ಸಹಾಯತೆ’ ಸಿನಿಮಾದ ತೆಲುಗು ರಿಮೇಕ್ ಹಕ್ಕುಗಳು ಮಾರಾಟವಾಗಿದ್ದು, ಈ ಸಿನಿಮಾದಲ್ಲಿ ಶ್ರೀಕೃಷ್ಣನ ಪಾತ್ರಕ್ಕಾಗಿ ರಾಮ್ ಚರಣ್ ಅವರನ್ನು ಸಂಪರ್ಕಿಸಲಾಗಿದೆ ಎಂದು ವರದಿಯಾಗಿದೆ.
ಸಣ್ಣ ಬಜೆಟ್‌ನಲ್ಲಿ ನಿರ್ಮಾಣಗೊಂಡು ದಾಖಲೆ ಬರೆದ ‘ಲಾಲೋ’ ಸಿನಿಮಾದಲ್ಲಿ ಶ್ರೀಕೃಷ್ಣನ ಪಾತ್ರವು ಪೂರ್ಣ ಪ್ರಮಾಣದ ನಾಯಕನ ಪಾತ್ರವಲ್ಲದೆ, ವಿಶೇಷ ಪಾತ್ರವಾಗಿ ಬರಲಿದೆ. ಪ್ರಸ್ತುತ ಕಾಲಘಟ್ಟಕ್ಕೆ ತಕ್ಕಂತೆ ಶ್ರೀಕೃಷ್ಣನ ಪಾತ್ರವನ್ನು ಆಧುನಿಕ ಶೈಲಿಯಲ್ಲಿ ಪ್ರಸ್ತುತಪಡಿಸಲು ಚಿತ್ರತಂಡ ಯೋಜನೆ ರೂಪಿಸಿದೆ. ಈ ಹಿಂದೆ ಈ ಪಾತ್ರಕ್ಕೆ ವಿಜಯ್ ದೇವರಕೊಂಡ ಹೆಸರು ಕೇಳಿಬಂದಿತ್ತಾದರೂ, ಈಗ ನಿರ್ಮಾಪಕರು ರಾಮ್ ಚರಣ್ ಅವರನ್ನು ನಟಿಸಲು ವಿನಂತಿಸಿದ್ದಾರೆ ಎನ್ನಲಾಗಿದೆ.
ಈ ಮಹತ್ವಾಕಾಂಕ್ಷೆಯ ತೆಲುಗು ರಿಮೇಕ್ ಚಿತ್ರವನ್ನು ನಿರ್ದೇಶಿಸಲು ತಮಿಳಿನ ಖ್ಯಾತ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಅವರ ಹೆಸರು ಮುಂಚೂಣಿಯಲ್ಲಿದೆ. ‘ಜಿಗರ್‌ಥಂಡ’, ‘ಪೆಟ್ಟಾ’ ಮತ್ತು ‘ಮಹಾನ್’ ನಂತಹ ವಿಭಿನ್ನ ಸಿನಿಮಾಗಳನ್ನು ನೀಡಿದ ಕಾರ್ತಿಕ್ ಸುಬ್ಬರಾಜ್ ಅವರ ಸ್ಪರ್ಶ ಈ ಸಿನಿಮಾಗೆ ಸಿಕ್ಕಿದರೆ, ಮೂಲ ಚಿತ್ರದ ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಅಂಶಗಳನ್ನು ಉಳಿಸಿಕೊಂಡು ತೆಲುಗು ಪ್ರೇಕ್ಷಕರಿಗೆ ಹೊಸ ಅನುಭವ ನೀಡಬಹುದು ಎಂಬುದು ಸಿನಿಮಾ ಪ್ರಿಯರ ಲೆಕ್ಕಾಚಾರವಾಗಿದೆ.
ಇದನ್ನೂ ಓದಿ: ಶಸ್ತ್ರಚಿಕಿತ್ಸೆ ಬೆನ್ನಲ್ಲೇ ಕೊಯಮತ್ತೂರು ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ರಾಮ್ ಚರಣ್ ಭೇಟಿ
ಸದ್ಯ ರಾಮ್ ಚರಣ್ ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ವಿಶ್ರಾಂತಿಯಲ್ಲಿದ್ದಾರೆ. ಚೇತರಿಸಿಕೊಂಡ ನಂತರ ತಮ್ಮ ಮುಂಬರುವ ಚಿತ್ರಗಳ ಮೇಲೆ ಗಮನ ಹರಿಸಲಿದ್ದಾರೆ. ಸುಕುಮಾರ್ ನಿರ್ದೇಶನದ ‘RC 17’ ಸಿನಿಮಾದ ಮುಹೂರ್ತ ಸಮಾರಂಭವು ಈ ವರ್ಷದ ನವೆಂಬರ್‌ನಲ್ಲಿ ನಡೆಯಲಿದ್ದು, 2027ರ ಜನವರಿಯಿಂದ ಶೂಟಿಂಗ್ ಆರಂಭವಾಗುವ ಸಾಧ್ಯತೆಯಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.