
ಟಾಲಿವುಡ್ ನಟ ರಾಮ್ ಚರಣ್ (Ram Charan) ಅವರು ನಟಿಸುತ್ತಿರುವ ಬಹುನಿರೀಕ್ಷಿತ ‘ಪೆದ್ದಿ’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಕೇವಲ ಟೀಸರ್ನಿಂದಲೇ ಈ ಚಿತ್ರ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದೆ. ಮೈಸೂರಿನಲ್ಲಿ ‘ಪೆದ್ದಿ’ ಸಿನಿಮಾ (Peddi Movie) ಶೂಟಿಂಗ್ ಆಗುತ್ತಿರುವುದು ವಿಶೇಷ. ಗೌರಿ-ಗಣೇಶ ಹಬ್ಬದ ನಡುವೆಯೂ ಕೂಡ ಶೂಟಿಂಗ್ ಮಾಡಲಾಗುತ್ತಿದೆ. ಶೂಟಿಂಗ್ ಸೆಟ್ನಿಂದಲೇ ರಾಮ್ ಚರಣ್ ಮತ್ತು ಅವರ ತಂಡದವರು ಅಭಿಮಾನಿಗಳಿಗೆ ಗಣೇಶ ಚತುರ್ಥಿ (Ganesh Chaturthi) ಶುಭಾಶಯಗಳನ್ನು ತಿಳಿಸಿದ್ದಾರೆ.
‘ಪೆದ್ದಿ’ ಸಿನಿಮಾಗಾಗಿ ಮೈಸೂರಿನಲ್ಲಿ ಬೃಹತ್ ಸೆಟ್ ಹಾಕಲಾಗಿದೆ. ಅದರಲ್ಲಿ ಒಂದು ಮಾಸ್ ಸಾಂಗ್ ಚಿತ್ರೀಕರಣ ಮಾಡಲಾಗುತ್ತಿದೆ. ಬರೋಬ್ಬರಿ ಒಂದು ಸಾವಿರ ಡ್ಯಾನ್ಸರ್ಸ್ ಜೊತೆಯಲ್ಲಿ ರಾಮ್ ಚರಣ್ ಅವರು ಈ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ. ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಅವರು ಈ ಹಾಡಿಗೆ ಕೊರಿಯೋಗ್ರಫಿ ಮಾಡುತ್ತಿದ್ದಾರೆ. ಅದ್ದೂರಿ ಬಜೆಟ್ನಲ್ಲಿ ಹಾಡಿನ ಶೂಟಿಂಗ್ ಮಾಡಲಾಗುತ್ತಿದೆ.
ಹಲವು ಕಾರಣಗಳಿಂದ ‘ಪೆದ್ದಿ’ ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ. ‘ಉಪ್ಪೇನ’ ಖ್ಯಾತಿಯ ನಿರ್ದೇಶಕ ಬುಚ್ಚಿ ಬಾಬು ಸನಾ ಅವರು ‘ಪೆದ್ದಿ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಸ್ಪೋರ್ಟ್ ಆ್ಯಕ್ಷನ್ ಡ್ರಾಮಾ ಈ ಸಿನಿಮಾದಲ್ಲಿ ಇರಲಿದೆ. ರಾಮ್ ಚರಣ್ ಅವರಿಗೆ ಜೋಡಿಯಾಗಿ ಜಾನ್ವಿ ಕಪೂರ್ ಅವರು ನಟಿಸುತ್ತಿದ್ದಾರೆ. ನಟ ಶಿವರಾಜ್ಕುಮಾರ್ ಅವರು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ರಾಮ್ ಚರಣ್ ಜೊತೆ ಜಗಪತಿ ಬಾಬು, ದಿವೇಂದು ಶರ್ಮಾ ಮುಂತಾದವರು ಕೂಡ ‘ಪೆದ್ದಿ’ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಈ ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ನೀಡುತ್ತಿದ್ದಾರೆ. ‘ವೃದ್ಧಿ ಸಿನಿಮಾಸ್’ ಬ್ಯಾನರ್ ಮೂಲಕ ವೆಂಕಟ ಸತೀಶ್ ಕಿಲಾರು ಅವರು ಬಂಡವಾಳ ಹೂಡಿದ್ದಾರೆ. ‘ಮೈತ್ರಿ ಮೂವೀ ಮೇಕರ್ಸ್’ ಹಾಗೂ ‘ಸುಕುಮಾರ್ ರೈಟಿಂಗ್ಸ್’ ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿವೆ.
ಇದನ್ನೂ ಓದಿ: 200 ಬಾರಿ ಮೊಬೈಲ್ ನಂಬರ್ ಬದಲಿಸಿರುವ ನಟ ರಾಮ್ ಚರಣ್
‘ಪೆದ್ದಿ’ ಪ್ಯಾನ್ ಇಂಡಿಯಾ ಸಿನಿಮಾ. 2026ರ ಮಾರ್ಚ್ 27ಕ್ಕೆ ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಆರ್. ರತ್ನವೇಲು ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ನವೀನ್ ನೂಲಿ ಅವರು ಸಂಕಲನ ಮಾಡುತ್ತಿದ್ದಾರೆ. ಟೀಸರ್ನಲ್ಲಿ ರಾಮ್ ಚರಣ್ ಅವರ ಗೆಟಪ್ ಗಮನ ಸೆಳೆದಿದೆ. ಅವರ ಅಭಿಮಾನಿಗಳು ಈ ಸಿನಿಮಾದ ಮೇಲೆ ಸಖತ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.