200 ಬಾರಿ ಮೊಬೈಲ್ ನಂಬರ್ ಬದಲಿಸಿರುವ ನಟ ರಾಮ್ ಚರಣ್
ಸೆಲೆಬ್ರಿಟಿಗಳು ಪದೇ ಪದೇ ಫೋನ್ ನಂಬರ್ ಬದಲಿಸುತ್ತಾರೆ. ರಾಮ್ ಚರಣ್ ಕೂಡ ಈ ಮಾತಿಗೆ ಹೊರತಲ್ಲ. ಈಗಾಗಲೇ ಅವರು ನೂರಾರು ಬಾರಿ ತಮ್ಮ ಫೋನ್ ನಂಬರ್ ಬದಲಾಯಿಸಿದ್ದಾರೆ. ಆ ಬಗ್ಗೆ ಅವರ ಪತ್ನಿ ಉಪಾಸನಾ ಅವರು ಮಾತಾಡಿದ್ದಾರೆ. ಇಲ್ಲಿದೆ ಆ ಬಗ್ಗೆ ಇನ್ನಷ್ಟು ಮಾಹಿತಿ..

ನಟ ರಾಮ್ ಚರಣ್ ಅವರು ಈಗ ‘ಪೆದ್ದಿ’ ಸಿನಿಮಾ (Peddi Movie) ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಕೆಲಸದಲ್ಲಿ ಎಷ್ಟೇ ಬ್ಯುಸಿ ಆಗಿದ್ದರೂ ಕೂಡ ಅವರು ಫ್ಯಾಮಿಲಿಗೆ ಸಮಯ ನೀಡುತ್ತಾರೆ. ಹಾಗಾಗಿ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್. ರಾಮ್ ಚರಣ್ ಪತ್ನಿ ಉಪಾಸನಾ (Upasana) ಅವರು ಉದ್ಯಮಿಯಾಗಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಅವರು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಪತಿಯ ಕುರಿತಾದ ಒಂದು ಇಂಟರೆಸ್ಟಿಂಗ್ ವಿಷಯವನ್ನು ಅವರು ತಿಳಿಸಿದ್ದಾರೆ. ಉಪಾಸನಾ ಮೊಬೈಲ್ನಲ್ಲಿ ರಾಮ್ ಚರಣ್ (Ram Charan) ನಂಬರ್ ಯಾವ ರೀತಿ ಸೇವ್ ಆಗಿದೆ ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.
‘ರಾಮ್ ಚರಣ್ 200’ ಈ ರೀತಿಯಾಗಿ ಉಪಾಸನಾ ಅವರು ಪತಿಯ ಮೊಬೈಲ್ ನಂಬರ್ ಸೇವ್ ಮಾಡಿಕೊಂಡಿದ್ದಾರೆ. ಯಾಕೆ ಎಂದು ಕೇಳಿದ್ದರೆ, ‘ಅವರು ಸರಿಯಾಗಿ 200 ಬಾರಿ ತಮ್ಮ ಮೊಬೈಲ್ ನಂಬರ್ ಬದಲಾಯಿಸಿದ್ದಾರೆ’ ಎಂದು ಉಪಾಸನಾ ಹೇಳಿದ್ದಾರೆ. ಈ ವಿಷಯ ಕೇಳಿ ಅಭಿಮಾನಿಗಳಿಗೆ ನಿಜಕ್ಕೂ ಅಚ್ಚರಿ ಆಗಿದೆ. ಇದೇ ಸಂದರ್ಶನದಲ್ಲಿ ಹಲವು ವಿಷಯಗಳ ಬಗ್ಗೆ ಉಪಾಸನಾ ಮಾತನಾಡಿದ್ದಾರೆ.
2007ರಿಂದಲೂ ರಾಮ್ ಚರಣ್ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಅವರು ನೀಡಿದ್ದಾರೆ. ಆ ಪೈಕಿ ಉಪಾಸನಾ ಅವರಿಗೆ ಯಾವ ಸಿನಿಮಾ ಹೆಚ್ಚು ಇಷ್ಟ ಎಂದು ಪ್ರಶ್ನೆ ಕೇಳಲಾಗಿದೆ. ‘ಆರ್ಆರ್ಆರ್’ ಎಂದು ಉಪಾಸನಾ ಉತ್ತರಿಸಿದ್ದಾರೆ. ‘ಈ ಚಿತ್ರಕ್ಕಾಗಿಯೇ ಅವರು ತಮ್ಮ ವೃತ್ತಿಜೀವನದಲ್ಲಿ ಹೆಚ್ಚು ಶ್ರಮಪಟ್ಟಿದ್ದು’ ಎಂದು ಉಪಾಸನಾ ಕಾರಣ ನೀಡಿದ್ದಾರೆ.
2012ರಲ್ಲಿ ರಾಮ್ ಚರಣ್ ಮತ್ತು ಉಪಾಸನಾ ಅವರು ಮದುವೆ ಆದರು. ಶಾಲಾ ದಿನಗಳಿಂದಲೂ ಕೂಡ ಅವರಿಬ್ಬರು ಸ್ನೇಹಿತರಾಗಿದ್ದರು. 2023ರ ಜೂನ್ 20ರಂದು ಈ ದಂಪತಿಗೆ ಹೆಣ್ಣು ಮಗು ಜನಿಸಿತು. ಮಗಳಿಗೆ ಕ್ಲಿನ್ ಕಾರಾ ಕೊನಿಡೆಲಾ ಎಂದು ಹೆಸರು ಇಟ್ಟಿದ್ದಾರೆ.
ಇದನ್ನೂ ಓದಿ: ರಾಮ್ ಚರಣ್ ಜಿಮ್ ಫೋಟೋ ವೈರಲ್; ‘ಪೆದ್ದಿ’ ಸಿನಿಮಾಗಾಗಿ ಇಷ್ಟೆಲ್ಲ ವರ್ಕೌಟ್
ಬಹುನಿರೀಕ್ಷಿತ ‘ಪೆದ್ದಿ’ ಸಿನಿಮಾದಲ್ಲಿ ರಾಮ್ ಚರಣ್ ಅವರು ನಟಿಸುತ್ತಿದ್ದಾರೆ. ಬುಚ್ಚಿ ಬಾಬು ಸನಾ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಟೀಸರ್ ಬಿಡುಗಡೆಯಾಗಿ ಗಮನ ಸೆಳೆದಿದೆ. ‘ಪೆದ್ದಿ’ ಚಿತ್ರಕ್ಕೆ ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರು ನಾಯಕಿ ಆಗಿದ್ದಾರೆ. 2026ರ ಮಾರ್ಚ್ 27ರಂದು ರಾಮ್ ಚರಣ್ ಜನ್ಮದಿನದ ಪ್ರಯುಕ್ತ ‘ಪೆದ್ದಿ’ ಸಿನಿಮಾ ಬಿಡುಗಡೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








