ಪೌರಾಣಿಕ ಪಾತ್ರದಲ್ಲಿ ಮಿಂಚಲಿದ್ದಾರೆ ರಾಮ್ ಚರಣ್, ಬಾಲಿವುಡ್ ನಿರ್ದೇಶಕನಿಂದ ಆಕನ್-ಕಟ್
Ram Charan: RRR ಸಿನಿಮಾದ ಭಾರಿ ಯಶಸ್ಸಿನ ಬಳಿಕ ರಾಮ್ ಚರಣ್ ನಟಿಸಿರುವ ಎರಡು ಸಿನಿಮಾಗಳು ಪ್ಲಾಪ್ ಆಗಿವೆ. ಹಾಗಿದ್ದರೂ ಸಹ ರಾಮ್ ಚರಣ್ಗೆ ಕೆಲ ಒಳ್ಳೆ ಸಿನಿಮಾ ಅವಕಾಶಗಳು ಅರಸಿ ಬರುತ್ತಲೇ ಇವೆ. ಇದೀಗ ರಾಮ್ ಚರಣ್ಗೆ ಪೌರಾಣಿಕ ಹಿನ್ನೆಲೆಯುಳ್ಳ ಕತೆಯೊಂದನ್ನು ಯುವ ಬಾಲಿವುಡ್ ನಿರ್ದೇಶಕ ಹೇಳಿದ್ದಾರೆ. ಸಿನಿಮಾದ ಕತೆ ರಾಮ್ ಚರಣ್ಗೆ ಬಹುವಾಗಿ ಮೆಚ್ಚುಗೆಯಾಗಿದ್ದು ಸಿನಿಮಾ ಶೀಘ್ರವೇ ಪ್ರಾರಂಭ ಆಗಲಿದೆ.

‘RRR’ ಸಿನಿಮಾದ ಬಳಿಕ ರಾಮ್ ಚರಣ್ ನಟಿಸಿದ ಎರಡು ಸಿನಿಮಾಗಳು ಫ್ಲಾಪ್ ಆಗಿವೆ. ‘ಆಚಾರ್ಯ’ ಮತ್ತು ‘ಗೇಮ್ ಚೇಂಜರ್’ ಎರಡೂ ಸಿನಿಮಾಗಳು ಮಕಾಡೆ ಮಲಗಿವೆ. ಇದೀಗ ರಾಮ್ ಚರಣ್ ಬುಚ್ಚಿಬಾಬು ಸನಾ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಜಾನ್ಹವಿ ಕಪೂರ್ ನಾಯಕಿ. ಸತತ ಎರಡು ಫ್ಲಾಪ್ ನೀಡಿದರೂ ಸಹ ರಾಮ್ ಚರಣ್ಗೆ ಸಿನಿಮಾ ಅವಕಾಶಗಳೇನೂ ಕಡಿಮೆ ಆಗಿಲ್ಲ ಬದಲಿಗೆ ಬಹಳ ಒಳ್ಳೆಯ ಆಫರ್ಗಳೇ ಬರುತ್ತಿವೆ. ಇದೀಗ ಪೌರಾಣಿಕ ಸಿನಿಮಾದ ಆಫರ್ ಒಂದು ರಾಮ್ ಚರಣ್ ಅವರನ್ನು ಅರಸಿ ಬಂದಿದೆ.
ಕಳೆದ ವರ್ಷ ಜುಲೈ ತಿಂಗಳಲ್ಲಿ ಬಿಡುಗಡೆ ಆಗಿ ಹವಾ ಎಬ್ಬಿಸಿದ್ದ ಹಿಂದಿಯ ‘ಕಿಲ್’ ಸಿನಿಮಾದ ನಿರ್ದೇಶಕ ನಿಖಿಲ್ ನಾಗೇಶ್ ಭಟ್, ರಾಮ್ ಚರಣ್ಗೆ ಪೌರಾಣಿಕ ಜಾನರ್ನ ಕತೆಯೊಂದನ್ನು ಹೇಳಿದ್ದು, ರಾಮ್ ಚರಣ್ ಸಹ ಕತೆ ಒಪ್ಪಿದ್ದಾರಂತೆ. ಇದೊಂದು ಪೌರಾಣಿಕ ಥ್ರಿಲ್ಲರ್ ಕತೆಯಾಗಿದ್ದು, ಒಂದು ಪ್ರಮುಖ ಘಟನೆಯ ಕುರಿತಾದ ಕತೆಯನ್ನು ಈ ಸಿನಿಮಾ ಒಳಗೊಂಡಿರಲಿದೆ. ಪೂರ್ಣ ರಾಮಾಯಣ ಅಥವಾ ಮಹಾಭಾರತದ ಕತೆಯ ಬದಲಿಗೆ ಕೇವಲ ಒಂದು ಪ್ರಮುಖ ಘಟನೆಯನ್ನು ಮಾತ್ರವೇ ಸಿನಿಮಾ ಮಾಡುತ್ತಿದ್ದಾರೆ ನಿಖಿಲ್ ನಾಗೇಶ್ ಭಟ್.
ಇದನ್ನೂ ಓದಿ:ತಪ್ಪು ಮಾತಾಡಿದೆ, ಕ್ಷಮಿಸಿ: ರಾಮ್ ಚರಣ್ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಅಲ್ಲು ಅರವಿಂದ್
ಈ ಸಿನಿಮಾ ಮಾಡುವುದು ನಿಖಿಲ್ ನಾಗೇಶ್ ಭಟ್ರ ಬಹುವರ್ಷದ ಕನಸಾಗಿತ್ತಂತೆ. ಸಿನಿಮಾದ ಪ್ರೀ ವಿಶ್ಯುವಲ್ಸ್ ಕೆಲಸಗಳೆಲ್ಲ ಈಗಾಗಲೇ ಮುಗಿದು ಹೋಗಿದ್ದು, ಸಿನಿಮಾದ ಪ್ರೀ ಪ್ರೊಡಕ್ಷನ್ ಕಾರ್ಯ ಈಗಾಗಲೇ ಪ್ರಾರಂಭವಾಗಿದೆ. ನಿಖಿಲ್ ನಾಗೇಶ್ ಭಟ್, ಪ್ರಸ್ತುತ ‘ಅಪೂರ್ವ’ ಹೆಸರಿನ ಸಿನಿಮಾದಲ್ಲಿ ಬ್ಯುಸಿಯಾಗಿದ್ದು ಆ ಸಿನಿಮಾ ಬಹುತೇಕ ಕೊನೆಯ ಹಂತದಲ್ಲಿದೆ. ಈ ಥ್ರಿಲ್ಲರ್ ಸಿನಿಮಾ ಬಿಡುಗಡೆ ಆದ ಬಳಿಕ ಸಂಪೂರ್ಣವಾಗಿ ತಮ್ಮನ್ನು ತಾವು ಪೌರಾಣಿಕ ಸಿನಿಮಾದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
‘RRR’ ಸಿನಿಮಾದ ಕೆಲ ದೃಶ್ಯಗಳಲ್ಲಿ ಅದಕ್ಕೂ ಮುಂಚೆ ‘ಮಗಧೀರ’ ಸಿನಿಮಾಗಳಲ್ಲಿ ರಾಮ್ ಚರಣ್ ಪೌರಾಣಿಕ ಎನ್ನಬಹುದಾದ ಪಾತ್ರಗಳಲ್ಲಿ ನಟಿಸಿದ್ದರು. ಆದರೆ ಇದೇ ಮೊದಲ ಬಾರಿಗೆ ಪೂರ್ಣವಾಗಿ ಪೌರಾಣಿಕ ಕತೆ ಹೊಂದಿರುವ ಸಿನಿಮಾದಲ್ಲಿ ನಟಿಸಲಿದ್ದಾರೆ. ಇದೀಗ ಬುಚ್ಚಿಬಾಬು ಸನಾ ನಿರ್ದೇಶನದ ಸಿನಿಮಾದಲ್ಲಿ ಬ್ಯುಸಿಯಾಗಿರುವ ರಾಮ್ ಚರಣ್, ಆ ಸಿನಿಮಾದ ಬಳಿಕ ನಿಖಿಲ್ ನಾಗೇಶ್ ಭಟ್ ರ ಸಿನಿಮಾದಲ್ಲಿ ನಟಿಸಲಿದ್ದಾರೆ. ಅದರ ಬಳಿಕ ಸುಕುಮಾರ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ