
ಉಪಾಸನಾ ಕೋನಿಡೇಲ, ಸ್ಟಾರ್ ನಟ ರಾಮ್ ಚರಣ್ ಪತ್ನಿ. ಯಶಸ್ವಿ ಉದ್ಯಮಿಯೂ ಆಗಿರುವ ಉಪಾಸನಾ, ಸಾಮಾಜಿಕ ಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸದಾ ಪತಿಗೆ ಬೆನ್ನೆಲುಬಾಗಿ ನಿಂತಿರುವ ಉಪಾಸನಾ, ರಾಮ್ ಯಶಸ್ಸಿಗೆ ಯೋಗದಾನ ನೀಡಿದ್ದಾರೆ. ಸಿನಿಮಾ ಇನ್ನಿತರೆ ಕಾರ್ಯಕ್ರಗಳಲ್ಲಿ ರಾಮ್ ಜೊತೆಗೆ ಕಾಣಿಸಿಕೊಳ್ಳುವ ಉಪಾಸನಾ, ಪತಿಯ ಒಳ್ಳೆಯ ಕಾರ್ಯಗಳಿಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಆದರೆ ಇತ್ತೀಚೆಗೆ ರಾಮ್ ಚರಣ್, ಸದುದ್ದೇಶದಿಂದ ಮಾಡಿದ ಕಾರ್ಯವೊಂದರ ಬಗ್ಗೆ ಟೀಕೆ ವ್ಯಕ್ತವಾಗಿತ್ತು. ಪತಿಯ ಬಗ್ಗೆ ಟೀಕೆ ವ್ಯಕ್ತವಾಗುತ್ತಿದ್ದಂತೆ ಸಕ್ರಿಯವಾದ ಉಪಾಸನಾ ಟೀಕಿಸಿದವರಿಗೆ ಪಾಠ ಮಾಡಿದ್ದಾರೆ.
ರಾಮ್ ಚರಣ್ ಕಾಲ ಕಾಲಕ್ಕೆ ಅಯ್ಯಪ್ಪ ಮಾಲೆ ಧರಿಸುತ್ತಿರುತ್ತಾರೆ. ಮಾಲೆ ಧರಿಸಿದಾಗ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುತ್ತಾರೆ. ಬರಿಗಾಲಲ್ಲಿ ಓಡಾಡುವುದು, ಕಪ್ಪು ಬಟ್ಟೆಗಳನ್ನು ಧರಿಸುವುದು, ಆಹಾರ, ಮಾತು ಎಲ್ಲದರಲ್ಲೂ ಹಿತ-ಮಿತ. ಇದೀಗ ರಾಮ್ ಚರಣ್ ಮಾಲೆ ಧರಿಸಿದ್ದು, ಕೆಲ ದಿನದ ಹಿಂದೆಯಷ್ಟೆ ರಾಮ್ ಚರಣ್, ಕಡಪದ ಅಮೀನ್ ಪೀರ್ ದರ್ಗಾಗೆ ಭೇಟಿ ನೀಡಿದ್ದರು. ಅದಕ್ಕೆ ಮುನ್ನ ಅವರು ಕಡಪದ ದುರ್ಗಾ ದೇವಿ ದೇವಾಲಯಕ್ಕೂ ಭೇಟಿ ನೀಡಿದ್ದರು. ಆದರೆ ರಾಮ್ ಚರಣ್, ಅಯ್ಯಪ್ಪ ಮಾಲೆ ಧರಿಸಿ ದರ್ಗಾಗೆ ಭೇಟಿ ನೀಡಿದ್ದನ್ನು ಹಲವರು ಟೀಕೆ ಮಾಡಿದ್ದರು.
ದರ್ಗಾಗೆ ಭೇಟಿ ನೀಡಿದ ರಾಮ್ ಚರಣ್ ಅನ್ನು ಟೀಕಿಸಿದವರಿಗೆ ಟ್ವೀಟ್ ಮೂಲಕ ಪ್ರತ್ಯುತ್ತರ ನೀಡಿದ್ದ ಉಪಾಸನಾ, ‘ನಂಬಿಕೆ ಎನ್ನುವುದು ಯಾವಾಗಲೂ ಒಗ್ಗೂಡಿಸುತ್ತದೆಯೇ ಹೊರತು ಬೇರ್ಪಡಿಸುವುದಿಲ್ಲ. ನಾವು ಭಾರತೀಯರು, ಆಧ್ಯಾತ್ಮದ ಕಡೆಗೆ ಸಾಗುವ ಎಲ್ಲ ದಾರಿಯನ್ನೂ ಗೌರವಿಸುತ್ತೇವೆ. ನಮ್ಮ ಶಕ್ತಿ ಇರುವುದೇ ಒಗ್ಗಟ್ಟಿನಲ್ಲಿ. ರಾಮ್ ಚರಣ್ ತಮ್ಮ ಧರ್ಮವನ್ನು ಪಾಲಿಸುವ ಜೊತೆಗೆ ಇತರೆ ಧರ್ಮವನ್ನು ಗೌರವಿಸುವ ವ್ಯಕ್ತಿ. ‘ಒಂದು ದೇಶ ಒಂದೇ ಸ್ಪೂರ್ತಿ’ ಎಂದಿದ್ದರು. ಉಪಾಸನಾರ ಟ್ವೀಟ್ಗೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಅದಕ್ಕೆ ಮತ್ತೆ ಟ್ವೀಟ್ ಮಾಡಿದ್ದ ಉಪಾಸನಾ, ಅಯ್ಯಪ್ಪ ಮಾಲಧಾರಿಗಳು ಅಯ್ಯಪ್ಪನ ಮಲೆ ಏರುವ ಮುಂಚೆ ವಾವರ್ನ ದರ್ಗಾಕ್ಕೆ ಭೇಟಿ ನೀಡುವ ಸಂಪ್ರದಾಯ ಪಾಲಿಸುತ್ತಾರೆ ಎಂಬ ಸುದ್ದಿಯನ್ನು ಹಂಚಿಕೊಂಡಿದ್ದರು.
ಇದನ್ನೂ ಓದಿ:ಮೈಸೂರಿಗೆ ಬರಲಿರುವ ರಾಮ್ ಚರಣ್-ಜಾನ್ಹವಿ, ಶಿವಣ್ಣನೂ ಜೊತೆಗೆ
ಅಸಲಿಗೆ ರಾಮ್ ಚರಣ್, ಕಡಪಕ್ಕೆ ಭೇಟಿ ನೀಡಿದ್ದಿದ್ದು ಎಆರ್ ರೆಹಮಾನ್ಗೆ ಅವರು ನೀಡಿದ್ದ ಮಾತನ್ನು ಉಳಿಸಿಕೊಳ್ಳಲು. ಅಮೀನ್ ಪೀರ್ ದರ್ಗಾಕ್ಕೆ ಒಮ್ಮೆ ಭೇಟಿ ನೀಡುವಂತೆ ಎಆರ್ ರೆಹಮಾನ್ ಹೇಳಿದ್ದರಂತೆ. ಅದಕ್ಕಾಗಿ ರಾಮ್ ಚರಣ್ ದರ್ಗಾಗೆ ಭೇಟಿ ನೀಡಿ ಚದ್ದರ್ ಅನ್ನು ಸಮರ್ಪಿಸಿದರು. ಅಮೀನ್ ಪೀರ್ ದರ್ಗಾ ವತಿಯಿಂದ ಏರ್ಪಿಸಿದ್ದ 80ನೇ ರಾಷ್ಟ್ರೀಯ ಮುಷಹೀರ್ ಗಜಲ್ ಕಾರ್ಯಕ್ರಮದ ಅತಿಥಿಯೂ ಆಗಿದ್ದರು ರಾಮ್ ಚರಣ್.
ರಾಮ್ ಚರಣ್ ‘ಗೇಮ್ ಚೇಂಜರ್’ ಸಿನಿಮಾದಲ್ಲಿ ನಟಿಸಿದ್ದು, ತಮಿಳಿನ ಸ್ಟಾರ್ ನಿರ್ದೇಶಕ ಎಸ್ ಶಂಕರ್ ಈ ಸಿನಿಮಾ ನಿರ್ದೇಶಿಸಿದ್ದಾರೆ. ದಿಲ್ ರಾಜು ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಕಿಯಾರಾ ಅಡ್ವಾಣಿ, ನಟ ಸುನಿಲ್ ಇನ್ನಿತರರು ಸಿನಿಮಾದಲ್ಲಿದ್ದಾರೆ. ‘ಗೇಮ್ ಚೇಂಜರ್’ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ತೆಲುಗಿನ ಬುಚ್ಚಿಬಾಬು ಸನಾ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಸಹ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ಜಾನ್ಹವಿ ಕಪೂರ್ ನಾಯಕಿ. ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲಿ ಕೆಲ ದಿನಗಳ ಕಾಲ ನಡೆಯಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ