AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರಿಗೆ ಬರಲಿರುವ ರಾಮ್ ಚರಣ್-ಜಾನ್ಹವಿ, ಶಿವಣ್ಣನೂ ಜೊತೆಗೆ

Ram Charan: ನಟರಾದ ರಾಮ್ ಚರಣ್ ಹಾಗೂ ಜಾನ್ಹವಿ ಕಪೂರ್ ಅವರುಗಳು ಇನ್ನೆರಡು ದಿನದಲ್ಲಿ ಮೈಸೂರಿಗೆ ಆಗಮಿಸಲಿದ್ದಾರೆ. ನಟ ಶಿವರಾಜ್ ಕುಮಾರ್ ಸಹ ಈ ಜೋಡಿಯನ್ನು ಸೇರಿಕೊಳ್ಳಲಿದ್ದಾರೆ.

ಮೈಸೂರಿಗೆ ಬರಲಿರುವ ರಾಮ್ ಚರಣ್-ಜಾನ್ಹವಿ, ಶಿವಣ್ಣನೂ ಜೊತೆಗೆ
ಮಂಜುನಾಥ ಸಿ.
|

Updated on: Nov 20, 2024 | 12:31 PM

Share

ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿದೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಜಾರಿಯಲ್ಲಿದೆ. ಸಿನಿಮಾದ ಪ್ರಚಾರಕ್ಕೂ ಯೋಜನೆ ಹಾಕಿಕೊಂಡಿದ್ದಾರೆ. ಇದರ ನಡುವೆ ರಾಮ್ ಚರಣ್ ಮೈಸೂರಿಗೆ ಬರುತ್ತಿದ್ದಾರೆ. ಅದೂ ರಾಮ್ ಚರಣ್ ಮಾತ್ರವೇ ಅಲ್ಲ ಅವರೊಡನೆ ಬಾಲಿವುಡ್ ಸ್ಟಾರ್ ನಟಿ ಜಾನ್ಹವಿ ಕಪೂರ್ ಸಹ ಮೈಸೂರಿಗೆ ಬರುತ್ತಿದ್ದಾರೆ. ಮೈಸೂರಿನಲ್ಲಿ ನಟ ಶಿವಣ್ಣ, ರಾಮ್ ಚರಣ್ ಹಾಗೂ ಜಾನ್ಹವಿ ಕಪೂರ್ ಅವರನ್ನು ಸ್ವಾಗತ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಇವರು ಮೈಸೂರಿಗೆ ಬರುತ್ತಿರುವುದು ಏಕೆ?

ರಾಮ್ ಚರಣ್ ಹಾಗೂ ಜಾನ್ಹವಿ ಕಪೂರ್ ಮೈಸೂರಿಗೆ ಬರುತ್ತಿರುವುದು ಸಿನಿಮಾ ಶೂಟಿಂಗ್​ಗೆ. ರಾಮ್ ಚರಣ್ ಹಾಗೂ ಜಾನ್ಹವಿ ಕಪೂರ್ ಅವರುಗಳು ಹೊಸ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲಿ ನಡೆಯಲಿದೆ. ಇದು ಈ ಸಿನಿಮಾದ ಮೊದಲ ಶೆಡ್ಯೂಲ್ ಆಗಿದ್ದು, ಶಿವರಾಜ್ ಕುಮಾರ್ ಅವರು ಸಹ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಮೈಸೂರಿನ ಕೆಲವು ಪುರಾತನ ಕಟ್ಟಡಗಳು ಹಾಗೂ ಮೈಸೂರಿನ ಹೊರವಲಯದ ಅರಣ್ಯ ಪ್ರದೇಶಗಳಲ್ಲಿ ಸಿನಿಮಾದ ಶೂಟಿಂಗ್ ನಡೆಯಲಿದೆ.

ರಾಮ್ ಚರಣ್-ಜಾನ್ಹವಿ ಹಾಗೂ ಶಿವರಾಜ್ ಕುಮಾರ್ ನಟಿಸುತ್ತಿರುವ ಈ ಸಿನಿಮಾವನ್ನು ತೆಲುಗಿನ ಬುಚ್ಚಿಬಾಬು ಸನಾ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಇವರು ‘ಉಪ್ಪೆನ’ ಸಿನಿಮಾ ನಿರ್ದೇಶನ ಮಾಡಿದ್ದರು. ಆ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ‘ಪುಷ್ಪ 2’ ಸಿನಿಮಾದ ಕತೆ, ಚಿತ್ರಕತೆಯಲ್ಲಿಯೂ ಸಹ ಬುಚ್ಚಿಬಾಬು ಸನಾ ಕೆಲಸ ಮಾಡಿದ್ದಾರೆ. ಸುಕುಮಾರ್ ಅವರ ಅಸಿಸ್ಟೆಂಟ್, ಅಸೋಸಿಯೇಟ್ ಆಗಿ ಬಹಳ ಸಮಯ ಇವರು ಕೆಲಸ ಮಾಡಿದ್ದರು.

ಇದನ್ನೂ ಓದಿ:ರಾಮ್ ಚರಣ್​ ಅದೆಷ್ಟು ಕಡಿಮೆ ಮೊಬೈಲ್ ಬಳಕೆ ಮಾಡುತ್ತಾರೆ? ಈ ಘಟನೆಯೇ ಸಾಕ್ಷಿ

ಶಿವರಾಜ್ ಕುಮಾರ್ ಅವರು ಮೈಸೂರಿನಲ್ಲಿ ಸಿನಿಮಾದ ಶೂಟಿಂಗ್ ಮುಗಿಸಿ ನಂತರ ತಮ್ಮ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಲಿದ್ದಾರೆ. ಶಿವಣ್ಣನ ಆರೋಗ್ಯ ಸಮಸ್ಯೆಯ ಕಾರಣಕ್ಕೆ ಈ ಸಿನಿಮಾದ ಚಿತ್ರೀಕರಣವನ್ನು ಬೇಗನೆ ಇರಿಸಿಕೊಳ್ಳಲಾಗಿದೆ ಎಂಬ ಮಾತುಗಳು ಸಹ ಕೇಳಿ ಬಂದಿವೆ. ನವೆಂಬರ್ 22 ರಂದು ರಾಮ್ ಚರಣ್-ಜಾನ್ಹವಿ ಮೈಸೂರಿಗೆ ಬರಲಿದ್ದು, ಅದೇ ದಿನ ಶೂಟಿಂಗ್ ಪ್ರಾರಂಭ ಆಗಲಿದೆ. ಸುಮಾರು ಎರಡು ವಾರಗಳ ಕಾಲ ಚಿತ್ರೀಕರಣ ಮೈಸೂರು ಹಾಗೂ ಸುತ್ತ-ಮುತ್ತಲಿನ ಭಾಗಗಳಲ್ಲಿ ನಡೆಯಲಿದೆ.

ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಇನ್ನು ಜಾನ್ಹವಿ ಕಪೂರ್ ಗೆ ಇದು ಎರಡನೇ ತೆಲುಗು ಸಿನಿಮಾ. ಅವರ ನಟನೆಯ ‘ದೇವರ’ ಸಿನಿಮಾ ಯಶಸ್ಸು ಗಳಿಸಿದೆ. ಇನ್ನು ಶಿವರಾಜ್ ಕುಮಾರ್ ಹಾಗೂ ರಾಮ್ ಚರಣ್ ಇದೇ ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ