‘ವ್ಯೂಹಂ’ ಸಿನಿಮಾ ವಿರುದ್ಧ ಅರ್ಜಿ, ಟಿಡಿಪಿ ನಾಯಕರಿಗೆ ವರ್ಮಾ ಸವಾಲು

|

Updated on: Nov 03, 2023 | 3:49 PM

Ram Gopal Varma: ರಾಮ್ ಗೋಪಾಲ್ ವರ್ಮಾರ 'ವ್ಯೂಹಂ' ಸಿನಿಮಾ ಬಿಡುಗಡೆಗೆ ಅನುಮತಿ ನೀಡಬಾರದೆಂದು ಟಿಡಿಪಿ ಮುಖಂಡರು ಮನವಿ ಮಾಡಿದ್ದಾರೆ. ಟಿಡಿಪಿ ವಿರುದ್ಧ ರಾಮ್ ಗೋಪಾಲ್ ವರ್ಮಾ ಆಕ್ರೋಶ ಹೊರಹಾಕಿದ್ದಾರೆ.

ವ್ಯೂಹಂ ಸಿನಿಮಾ ವಿರುದ್ಧ ಅರ್ಜಿ, ಟಿಡಿಪಿ ನಾಯಕರಿಗೆ ವರ್ಮಾ ಸವಾಲು
Follow us on

ಒಂದು ಕಾಲದಲ್ಲಿ ಒಂದರ ಹಿಂದೊಂದು ಅತ್ಯುತ್ತಮ ಸಿನಿಮಾಗಳನ್ನು ಮಾಡಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ಇತ್ತೀಚೆಗೆ ಸಾಫ್ಟ್ ಪೋರ್ನ್, ಪೂರ್ವಾಗ್ರಹ ಪೀಡಿತ ರಾಜಕೀಯ ಸಟೈರಿಕ್ ಸಿನಿಮಾಗಳನ್ನು ಮಾತ್ರವೇ ನಿರ್ದೇಶಿಸುತ್ತಿದ್ದಾರೆ. ಚಂದ್ರಬಾಬು ನಾಯ್ಡು ವಿರುದ್ಧ ಮೊದಲಿನಿಂದಲೂ ವಿರೋಧಿ ನಿಲುವನ್ನೇ ಇಟ್ಟುಕೊಂಡು ಬಂದಿರುವ ರಾಮ್ ಗೋಪಾಲ್ ವರ್ಮಾ ಚಂದ್ರಬಾಬು ನಾಯ್ಡುವನ್ನು ವಿಲನ್ ಆಗಿಟ್ಟುಕೊಂಡು ಸಿನಿಮಾಗಳನ್ನು ಈ ಹಿಂದೆಯೂ ಮಾಡಿದ್ದಾರೆ. ಇದೀಗ ಆಂಧ್ರ ಚುನಾವಣೆ ಹತ್ತಿರ ಬಂದಿರುವ ಹಿನ್ನೆಲೆಯಲ್ಲಿ ಈಗ ಮತ್ತೊಂದು ಸಿನಿಮಾವನ್ನು ನಿರ್ದೇಶಿಸಿ ಅದರ ಬಿಡುಗಡೆಗೆ ಸಜ್ಜಾಗಿದ್ದಾರೆ. ಅದರೆ ಆ ಸಿನಿಮಾದ ಬಿಡುಗಡೆಗೆ ಟಿಡಿಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.

ರಾಮ್ ಗೋಪಾಲ್ ವರ್ಮಾ ಪ್ರಸ್ತುತ ‘ವ್ಯೂಹಂ’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಆಂಧ್ರದ ಪ್ರಸ್ತುತ ಸಿಎಂ ಜಗನ್ ಮೋಹನ್ ರೆಡ್ಡಿ ಜೀವನ ಆಧರಿಸಿದ ಕತೆಯನ್ನು ಸಿನಿಮಾ ಒಳಗೊಂಡಿದ್ದು, ಚಂದ್ರಬಾಬು ನಾಯ್ಡು ಪಾತ್ರವನ್ನು ಸಂಪೂರ್ಣ ಡಾರ್ಕ್ ಶೇಡ್​ನಲ್ಲಿ ತೋರಿಸಲಾಗಿದೆ. ಇತ್ತೀಚೆಗಷ್ಟೆ ಭ್ರಷ್ಟಾಚಾರ ಹಗರಣದಲ್ಲಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದಿದ್ದು, ಈ ಭ್ರಷ್ಟಾಚಾರದ ದೃಶ್ಯಗಳನ್ನು ಸಹ ಸಿನಿಮಾ ಒಳಗೊಂಡಿದೆ.\

ಇದನ್ನೂ ಓದಿ:RGV: ‘ಗರುಡ ಗಮನ ವೃಷಭ ವಾಹನ’ ನೋಡಿ ಫಿದಾ ಆದ ರಾಮ್ ಗೋಪಾಲ್ ವರ್ಮಾ; ನಿರ್ದೇಶಕ ರಾಜ್ ಬಿ ಶೆಟ್ಟಿಗೆ ಹೇಳಿದ್ದೇನು?

ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್ ಕೇಂದ್ರ ಸೆನ್ಸಾರ್ ಮಂಡಳಿಗೆ ಪತ್ರ ಬರೆದಿದ್ದು, ‘ವ್ಯೂಹಂ’ ಸಿನಿಮಾಕ್ಕೆ ಸೆನ್ಸಾರ್ ನೀಡಬಾರದು ಎಂದು ಮನವಿ ಮಾಡಿದ್ದಾರೆ. ಸಿನಿಮಾದಲ್ಲಿ ಚಂದ್ರಬಾಬು ನಾಯ್ಡು ವಿರುದ್ಧ ಸುಳ್ಳುಗಳನ್ನು ಹೇಳಲಾಗಿದೆ ಎಂದು ನಾರಾ ಲೋಕೇಶ್ ಉಲ್ಲೇಖಿಸಿದ್ದಾರೆ. ನಾರಾ ಲೋಕೇಶ್ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿರುವ ಸಿಬಿಎಫ್​ಸಿ, ‘ವ್ಯೂಹಂ’ ಸಿನಿಮಾವನ್ನು ಪರಿಷ್ಕರಣಾ ಸಮಿತಿಗೆ ಕಳಿಸಿದೆ. ಸಮಿತಿಯು ಸಿನಿಮಾವನ್ನು ಪರಿಶೀಲನೆ ನಡೆಸಿ ಕಟ್​ಗಳನ್ನು ಸೂಚಿಸಲಿದೆ ಅಥವಾ ಬಿಡುಗಡೆಗೆ ತಡೆ ನೀಡಬೇಕೆ ಬೇಡವೆ ಎಂಬ ನಿರ್ಣಯ ಮಾಡಲಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ, ”ಅಂಗೈ ಅನ್ನು ಅಡ್ಡವಿಟ್ಟು ಸೂರ್ಯನ ಕಾಂತಿಯನ್ನು ನಿಲ್ಲಿಸಲಾಗದು. ಹಾಗೆಯೇ ಎಷ್ಟೇ ವ್ಯೂಹಗಳನ್ನು ರಚಿಸಿದರೂ ಸಹ ‘ವ್ಯೂಹಂ’ ಸಿನಿಮಾದ ಬಿಡುಗಡೆಯನ್ನು ತಡೆಯಲಾರಿರಿ’ ಎಂದಿದ್ದಾರೆ. ನವೆಂಬರ್ 10 ರಂದು ಸಿನಿಮಾದ ಬಿಡುಗಡೆಯನ್ನು ವರ್ಮಾ ಈಗಾಗಲೇ ಘೋಷಣೆ ಮಾಡಿದ್ದಾರೆ. ‘ವ್ಯೂಹಂ’ ಸಿನಿಮಾ ಇದೀಗ ರಿವ್ಯೂ ಕಮಿಟಿಯ ಮುಂದೆ ಹೋಗಿರುವ ಕಾರಣ ಬಿಡುಗಡೆ ಇನ್ನಷ್ಟು ತಡವಾಗುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:36 pm, Fri, 3 November 23