74ರ ಪ್ರಾಯದ ರಣಧೀರ್​ ಕಪೂರ್​ಗೆ ಕೊವಿಡ್​; ಕರೀನಾ ಕುಟುಂಬದಲ್ಲಿ ಹೆಚ್ಚಿದ ಆತಂಕ

ರಣಧೀರ್​ ಕಪೂರ್​​ ಅವರ ವಯಸ್ಸಿನ ಕಾರಣದಿಂದ ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡುವಂತಾಗಿದೆ. ಈಗ ರಣಧೀರ್​ಗೆ 74 ವರ್ಷ ವಯಸ್ಸು. ಇದು ಅವರ ಅಭಿಮಾನಿಗಳನ್ನೂ ಚಿಂತೆಗೆ ಈಡುಮಾಡಿದೆ.

74ರ ಪ್ರಾಯದ ರಣಧೀರ್​ ಕಪೂರ್​ಗೆ ಕೊವಿಡ್​; ಕರೀನಾ ಕುಟುಂಬದಲ್ಲಿ ಹೆಚ್ಚಿದ ಆತಂಕ
ರಣಧೀರ್​ ಕಪೂರ್​

Updated on: Apr 30, 2021 | 8:11 AM

ಬಾಲಿವುಡ್​ನ ಹಿರಿಯ ನಟ ರಣಧೀರ್​ ಕಪೂರ್​ ಅವರಿಗೆ ಕೊರೊನಾ ವೈರಸ್​ ತಗುಲಿರುವುದು ದೃಢಪಟ್ಟಿದೆ. ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿಂದಿ ಚಿತ್ರರಂಗದ ಖ್ಯಾತ ನಟಿಯರಾದ ಕರೀನಾ ಕಪೂರ್​ ಮತ್ತು ಕರೀಷ್ಮಾ ಕಪೂರ್​ ಅವರ ತಂದೆ ರಣಧೀರ್​ ಕಪೂರ್​. ಅವರು ಬೇಗ ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಮುಂಬೈನಲ್ಲಿ ಕೊರೊನಾ ಹಾವಳಿ ಮಿತಿಮೀರುತ್ತಿರುವುದರಿಂದ ಸಹಜವಾಗಿಯೇ ಎಲ್ಲೆಡೆ ಆತಂಕದ ವಾತಾವರಣ ನಿರ್ಮಾಣ ಆಗಿದೆ.

ರಣಧೀರ್​ ಕಪೂರ್​ ಅವರನ್ನು ಗುರುವಾರ (ಏ.30) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿರವಾಗಿದೆ. ಹೆದರುವ ಅವಶ್ಯಕತೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಆದರೆ ರಣಧೀರ್​ ಅವರ ವಯಸ್ಸಿನ ಕಾರಣದಿಂದ ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡುವಂತಾಗಿದೆ. ಈಗ ರಣಧೀರ್​ಗೆ 74 ವರ್ಷ ವಯಸ್ಸು. ಇದು ಅವರ ಅಭಿಮಾನಿಗಳನ್ನೂ ಚಿಂತೆಗೆ ಈಡುಮಾಡಿದೆ.

ರಣಧೀರ್​ ಈಗಾಗಲೇ ಎರಡು ಬಾರಿ ವ್ಯಾಕ್ಸಿನ್​ ಪಡೆದುಕೊಂಡಿದ್ದಾರೆ. ಹಾಗಿದ್ದರೂ ಅವರಿಗೆ ಕೊರೊನಾ ಪಾಸಿಟಿವ್​ ಆಗಿರುವುದಕ್ಕೆ ಸ್ವತಃ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ‘ನನಗೆ ಹೇಗೆ ಕೊರೊನಾ ಬಂತು ಅಂತ ತಿಳಿಯುತ್ತಿಲ್ಲ. ನನ್ನ ಜೊತೆ ಇದ್ದ ಐವರು ಸಿಬ್ಬಂದಿಗೂ ಪಾಸಿಟಿವ್​ ಆಗಿದೆ. ಅವರು ಕೂಡ ನನ್ನೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ’ ಎಂದು ಮಾಧ್ಯಮವೊಂದಕ್ಕೆ ರಣಧೀರ್​ ಕಪೂರ್​ ಪ್ರತಿಕ್ರಿಯೆ ನೀಡಿದ್ದಾರೆ.

ಬಾಲಿವುಡ್​ನ ಲೆಜೆಂಡರಿ ನಟ ರಾಜ್ ಕಪೂರ್​ ಅವರ ಮೊದಲ ಪುತ್ರ ರಣಧೀರ್​ ಕಪೂರ್​. ಕಳೆದ ಒಂದು ವರ್ಷದಿಂದ ಕಪೂರ್​ ಕುಟುಂಬಕ್ಕೆ ಒಂದರ ಹಿಂದೊಂದು ಕಹಿ ಸುದ್ದಿ ಕೇಳಿಬರುತ್ತಲೇ ಇದೆ. ಕಳೆದ ವರ್ಷ ರಣಧೀರ್​ ಅವರ ಸಹೋದರ, ಖ್ಯಾತ ನಟ ರಿಷಿ ಕಪೂರ್​ ನಿಧನರಾದರು. ಆ ನೋವು ಮರೆಯುವ ಮುನ್ನವೇ 2021ರ ಫೆಬ್ರವರಿಯಲ್ಲಿ ಮತ್ತೋರ್ವ ಸಹೋದರ ರಾಜೀವ್​ ಕಪೂರ್​ ಅವರು ಹೃದಯಾಘಾತದಿಂದ ಮೃತಪಟ್ಟರು.

ಇದನ್ನೂ ಓದಿ: Ramu Death: ನಿಧನಕ್ಕೂ ಮುನ್ನ ಫೋನ್​ನಲ್ಲಿ ಕೊವಿಡ್​ ಕಷ್ಟ ವಿವರಿಸಿದ್ದ ಕೋಟಿ ರಾಮು

Ramu Kanagal: ಪುಟ್ಟಣ್ಣ ಕಣಗಾಲ್ ಪುತ್ರ ರಾಮು ಕಣಗಾಲ್ ಕೊರೊನಾದಿಂದ ನಿಧನ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us