ಅಂತಹವರನ್ನು ಕಠಿಣವಾಗಿ ಶಿಕ್ಷಿಸಬೇಕು: ಗುಡುಗಿದ ರಶ್ಮಿಕಾ ಮಂದಣ್ಣ

Rashmika Mandanna: ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಕೆಲ ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿತ್ತು. ಆ ಘಟನೆ ನಡೆದಾಗ ರಶ್ಮಿಕಾಗೆ ಹಲವು ಸೆಲೆಬ್ರಿಟಿಗಳು ಬೆಂಬಲ ವ್ಯಕ್ತಪಡಿಸಿದ್ದರು. ಘಟನೆ ಕುರಿತಾಗಿ ವ್ಯಕ್ತಿಯೊಬ್ಬಾತನ ಬಂಧನವೂ ಆಗಿತ್ತು. ಇದೀಗ ಮತ್ತೊಮ್ಮೆ ನಟಿ ರಶ್ಮಿಕಾ ಮಂದಣ್ಣ ಇದೇ ರೀತಿಯ ಸಮಸ್ಯೆ ಎದುರಿಸಿದ್ದು, ಈ ಬಾರಿ ಆಕ್ರೋಶದಿಂದ ಗುಡುಗಿದ್ದಾರೆ ನಟಿ.

ಅಂತಹವರನ್ನು ಕಠಿಣವಾಗಿ ಶಿಕ್ಷಿಸಬೇಕು: ಗುಡುಗಿದ ರಶ್ಮಿಕಾ ಮಂದಣ್ಣ
Rashmika Mandanna

Updated on: Dec 03, 2025 | 6:35 PM

ನಟಿ ರಶ್ಮಿಕಾ ಮಂದಣ್ಣ (Rashmika Mandanna), ಪ್ರಸ್ತುತ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. ಅವರ ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ ಭರ್ಜರಿ ಕಲೆಕ್ಷನ್ ಕಾಣುತ್ತಿವೆ. ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳ ಸಿನಿಮಾಗಳಲ್ಲಿ, ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಸಿನಿಮಾಗಳು ಭರ್ಜರಿ ಹಿಟ್ ಸಹ ಆಗುತ್ತಿವೆ. ಇದರ ಜೊತೆಗೆ ರಶ್ಮಿಕಾ ಮದುವೆ ಸಹ ಆಗುತ್ತಿದೆ. ಈಗಾಗಲೇ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿದೆ. ಆದರೆ ಇದೀಗ ರಶ್ಮಿಕಾ ಮಂದಣ್ಣಗೆ ಹಳೆಯ ಸಮಸ್ಯೆಯೊಂದು ಮತ್ತೆ ಎದುರಾಗಿದೆ. ಈ ಬಾರಿ ಅವರು ತುಸು ಗಟ್ಟಿಯಾಗಿ ಗುಡುಗಿದ್ದಾರೆ.

ಕೆಲ ವರ್ಷದ ಹಿಂದೆ ನಟಿ ರಶ್ಮಿಕಾ ಮಂದಣ್ಣ ಅವರ ವಿಡಿಯೋ ಒಂದು ವೈರಲ್ ಆಗಿತ್ತು. ಬಿಕಿನಿ ಧರಿಸಿದ ರಶ್ಮಿಕಾ ಮಂದಣ್ಣರ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಅನ್ನು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ವಿಪರೀತ ಶೇರ್ ಮಾಡಿದ್ದರು. ಆದರೆ ಅದು ನಕಲಿ ವಿಡಿಯೋ ಆಗಿತ್ತು. ಏಐ ತಂತ್ರಜ್ಞಾನ ಬಳಸಿ ಯಾರದ್ದೋ ವಿಡಿಯೋಕ್ಕೆ ರಶ್ಮಿಕಾರ ಮುಖ ಸೇರಿಸಲಾಗಿತ್ತು. ಆ ವಿಡಿಯೋ ನಿಜವೇ ಎಂದೆನಿಸುವಂತಿತ್ತು. ಆ ವೇಳೆ ಅಮಿತಾಬ್ ಬಚ್ಚನ್, ಸಿದ್ಧಾರ್ಥ್ ಕಪೂರ್, ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ರಶ್ಮಿಕಾರ ಬೆಂಬಲಕ್ಕೆ ಬಂದಿದ್ದರು. ಇಂಥಹಾ ಮಾರ್ಫ್ಡ್ ವಿಡಿಯೋ ಮಾಡುವವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದರು. ಅದರಂತೆ ಒಬ್ಬ ವ್ಯಕ್ತಿಯ ಬಂಧನವೂ ಆಗಿತ್ತು.

ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಡಬಲ್ ಖುಷಿ ಸುದ್ದಿ

ಇದೀಗ ಮತ್ತೊಮ್ಮೆ ಇದೇ ರೀತಿಯ ಸಮಸ್ಯೆ ರಶ್ಮಿಕಾಗೆ ಎದುರಾಗಿದೆ. ಎಐ ಬಳಸಿ ರಶ್ಮಿಕಾ ಮಂದಣ್ಣ ಅವರ ನಕಲಿ ವಿಡಿಯೋಗಳನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಈ ಬಾರಿಯೂ ಸಹ ರಶ್ಮಿಕಾರ, ಅಶ್ಲೀಲ ಎಂದೆನಿಸುವ ನಕಲಿ ವಿಡಿಯೋಗಳನ್ನು ಹರಿಬಿಡಲಾಗಿದೆ. ಇದು ಸಹಜವಾಗಿಯೇ ರಶ್ಮಿಕಾ ಮಂದಣ್ಣ, ಅವರ ಆಪ್ತರು ಮತ್ತು ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ. ಕಳೆದ ಬಾರಿ ಇದೇ ರೀತಿಯ ಘಟನೆ ನಡೆದಾಗ ರಶ್ಮಿಕಾ ಮಂದಣ್ಣ ಸಾವಧಾನದಿಂದ ಪ್ರತಿಕ್ರಿಯೆ ನೀಡಿದ್ದರು. ಆದರೆ ಈ ಬಾರಿ ಗುಡುಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ, ‘ಸತ್ಯವನ್ನು ನಿರೂಪಿಸಲು ಸಾಧ್ಯವಾಗದೇ ಇದ್ದಾಗ, ವಿವೇಚನೆಯೇ ನಮ್ಮ ದೊಡ್ಡ ರಕ್ಷಣೆಯಾಗುತ್ತದೆ. ಎಐ ಎಂಬುದು ಶಕ್ತಿಯುತ ಟೂಲ್ ಆಗಿದೆ, ಅದನ್ನು ಪ್ರಗತಿಗೆ ಬಳಸಬೇಕಿದೆ. ಆದರೆ ಮಹಿಳೆಯರನ್ನು ಗುರಿಯಾಗಿರಿಸಿ ಅಶ್ಲೀಲತೆಯನ್ನು ಸೃಷ್ಟಿಸಲು ಮತ್ತು ಅದರ ದುರುಪಯೋಗಕ್ಕೆ ಬಳಸುತ್ತಿರುವುದು, ಜನರಲಿ ಆಳವಾದ ನೈತಿಕ ಅವನತಿಯನ್ನು ಸೂಚಿಸುತ್ತದೆ.
ನೆನಪಿಡಿ, ಇಂಟರ್ನೆಟ್ ಇನ್ನು ಮುಂದೆ ಸತ್ಯದ ಕನ್ನಡಿಯಲ್ಲ. ಅದು ಯಾವುದನ್ನಾದರೂ ಕಟ್ಟುಕಥೆ ಮಾಡಬಹುದಾದ ಕ್ಯಾನ್ವಾಸ್ ಆಗಿದೆ. ದುರುಪಯೋಗವನ್ನು ಮೀರಿ ನಾವು ಹೆಚ್ಚು ಘನತೆ ಮತ್ತು ಪ್ರಗತಿಪರ ಸಮಾಜವನ್ನು ನಿರ್ಮಿಸಲು ಎಐ ಅನ್ನು ಬಳಸೋಣ. ಅಜಾಗರೂಕತೆಯ ಬದಲು ಜವಾಬ್ದಾರಿಯನ್ನು ಆರಿಸಿಕೊಳ್ಳಿ. ಜನರು ಮನುಷ್ಯರಂತೆ ವರ್ತಿಸಲು ಸಾಧ್ಯವಾಗದಿದ್ದರೆ, ಅವರಿಗೆ ಕಠಿಣ ಮತ್ತು ಕ್ಷಮಿಸಲಾಗದ ಶಿಕ್ಷೆಯನ್ನು ನೀಡಬೇಕು’ ಎಂದು ರಶ್ಮಿಕಾ ಮಂದಣ್ಣ ಆಗ್ರಹಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ