ಒಂದೇ ದಿನ ರಿಲೀಸ್ ಆಗಲಿವೆ ರಶ್ಮಿಕಾ ಮಂದಣ್ಣ ನಟನೆಯ 2 ಬಹುನಿರೀಕ್ಷಿತ ಸಿನಿಮಾಗಳು

ರಶ್ಮಿಕಾ ಮಂದಣ್ಣ ಅವರು ನಟಿಸಿರುವ ಬಾಲಿವುಡ್​ನ ‘ಛಾವ’ ಸಿನಿಮಾ ಡಿಸೆಂಬರ್​ 6ರಂದು ರಿಲೀಸ್​ ಆಗಲಿದೆ. ಅದೇ ದಿನ ‘ಪುಷ್ಪ 2’ ಸಿನಿಮಾ ಕೂಡ ತೆರೆಕಾಣಲಿದೆ ಎಂಬುದು ವಿಶೇಷ. ಈ ಎರಡೂ ಸಿನಿಮಾಗಳು ಬೇರೆ ಬೇರೆ ಕಾರಣದಿಂದ ನಿರೀಕ್ಷೆ ಸೃಷ್ಟಿ ಮಾಡಿವೆ. ‘ಛಾವ’ ಸಿನಿಮಾದ ಟೀಸರ್​ ಬಿಡುಗಡೆ ಆಗಿ ಗಮನ ಸೆಳೆಯುತ್ತಿದೆ. ಈ ಚಿತ್ರಕ್ಕೆ ವಿಕ್ಕಿ ಕೌಶಲ್​ ಹೀರೋ.

ಒಂದೇ ದಿನ ರಿಲೀಸ್ ಆಗಲಿವೆ ರಶ್ಮಿಕಾ ಮಂದಣ್ಣ ನಟನೆಯ 2 ಬಹುನಿರೀಕ್ಷಿತ ಸಿನಿಮಾಗಳು
ರಶ್ಮಿಕಾ ಮಂದಣ್ಣ, ವಿಕ್ಕಿ ಕೌಶಲ್​, ಅಲ್ಲು ಅರ್ಜುನ್​

Updated on: Aug 19, 2024 | 9:27 PM

ನಟಿ ರಶ್ಮಿಕಾ ಮಂದಣ್ಣ ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಬಾಲಿವುಡ್​ನಲ್ಲೂ ಅವರು ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. 2023ರಲ್ಲಿ ‘ವಾರಿಸು’, ‘ಮಿಷನ್​ ಮಜ್ನು’, ‘ಅನಿಮಲ್​’ ಸಿನಿಮಾಗಳ ಮೂಲಕ ರಶ್ಮಿಕಾ ಮಂದಣ್ಣ ಅವರಿಗೆ ದೊಡ್ಡ ಗೆಲುವು ಸಿಕ್ಕಿತು. 2024ರಲ್ಲಿ ರಶ್ಮಿಕಾ ನಟನೆಯ ಎರಡು ಸಿನಿಮಾಗಳು ಏಕಕಾಲಕ್ಕೆ ಬಿಡುಗಡೆ ಆಗಲಿವೆ ಎಂಬುದು ವಿಶೇಷ. ಹೌದು, ‘ಅನಿಮಲ್​’ ಮತ್ತು ‘ಛಾವ’ ಸಿನಿಮಾಗಳು ಈ ವರ್ಷ ಡಿಸೆಂಬರ್​ನಲ್ಲಿ ತೆರೆಕಾಣಲಿವೆ.

ರಶ್ಮಿಕಾ ಮಂದಣ್ಣ ಅವರಿಗೆ ಬಾಲಿವುಡ್​ನಲ್ಲಿ ಸಖತ್ ಡಿಮ್ಯಾಂಡ್​ ಇದೆ. ವಿಕ್ಕಿ ಕೌಶಲ್​ ಜೊತೆ ರಶ್ಮಿಕಾ ಅಭಿನಯಿಸಿರುವ ‘ಛಾವ’ ಸಿನಿಮಾ ಟೀಸರ್​ ಇಂದು (ಆಗಸ್ಟ್​ 19) ಬಿಡುಗಡೆ ಆಗಿದೆ. ಇದರಲ್ಲಿ ಐತಿಹಾಸಿಕ ಕಥಾಹಂದರ ಇದೆ. ಈ ಟೀಸರ್​ ಹಂಚಿಕೊಂಡಿರುವ ನಟ ವಿಕ್ಕಿ ಕೌಶಲ್​ ಅವರು ಬಿಡುಗಡೆ ದಿನಾಂಕದ ಬಗ್ಗೆ ಮಾಹಿತಿ ನೀಡಿದ್ದಾರೆ. ಡಿಸೆಂಬರ್​ 6ರಂದು ‘ಛಾವ’ ಸಿನಿಮಾ ರಿಲೀಸ್​ ಆಗಲಿದೆ ಎಂದು ಅವರು ಹೇಳಿದ್ದಾರೆ.

ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ಅವರು ಜೋಡಿಯಾಗಿ ನಟಿಸಿರುವ ‘ಪುಷ್ಪ 2’ ಸಿನಿಮಾ ಕೂಡ ಡಿಸೆಂಬರ್​ 6ರಂದು ತೆರೆಕಾಣಲಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಆಗಸ್ಟ್​ 15ರಂದು ಈ ಸಿನಿಮಾ ತೆರೆಕಂಡಿರಬೇಕಿತ್ತು. ಆದರೆ ಕೆಲಸಗಳು ಬಾಕಿ ಇರುವ ಕಾರಣದಿಂದ ಡಿಸೆಂಬರ್​ 6ಕ್ಕೆ ಬಿಡುಗಡೆ ದಿನಾಂಕವನ್ನು ಮುಂದೂಡಲಾಯಿತು. ಈಗ ಅದೇ ದಿನಾಂಕದಲ್ಲೇ ‘ಛಾವ’ ಕೂಡ ರಿಲೀಸ್​ ಆಗುತ್ತದೆ ಎಂಬ ವಿಷಯ ತಿಳಿದು ಅಭಿಮಾನಿಗಳಿಗೆ ಅಚ್ಚರಿ ಆಗಿದೆ.

ಇದನ್ನೂ ಓದಿ: ಅಭಿಮಾನಿಗಳಿಗೆ ಸಖತ್​ ಇಷ್ಟವಾಯ್ತು ರಶ್ಮಿಕಾ ಮಂದಣ್ಣ ರಾಯಲ್​ ಫೋಟೋಶೂಟ್​

‘ಪುಷ್ಪ 2’ ಸಿನಿಮಾ ಕೇವಲ ದಕ್ಷಿಣ ಭಾರತಕ್ಕೆ ಸೀಮಿತವಾಗಿಲ್ಲ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತದೆ. ಅಷ್ಟೇ ಅಲ್ಲದೇ, ವಿದೇಶಗಳಲ್ಲೂ ಈ ಚಿತ್ರ ಧೂಳೆಬ್ಬಿಸಲಿದೆ. ಅದೇ ರೀತಿ, ‘ಛಾವ’ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿಯೇ ಸೌಂಡು ಮಾಡಲಿದೆ. ಹೀಗೆ ಒಂದೇ ದಿನ ಎರಡು ದೊಡ್ಡ ಸಿನಿಮಾಗಳು ಬಿಡುಗಡೆಯಾದರೆ ಬಾಕ್ಸ್​ ಆಫೀಸ್​ನಲ್ಲಿ ಕ್ಲ್ಯಾಶ್​ ಆಗುತ್ತದೆ. ಇದನ್ನು ತಪ್ಪಿಸಲು ಎರಡರಲ್ಲಿ ಒಂದು ಸಿನಿಮಾದ ರಿಲೀಸ್​ ದಿನಾಂಕ ಬದಲಾದರೂ ಅಚ್ಚರಿ ಏನಿಲ್ಲ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us