ಮತ್ತೊಂದು ಹಾರರ್ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ: ನಾಯಕ ಯಾರು ಗೊತ್ತೆ?

Rashmika Mandanna: ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ನಟಿ. ರಣ್​​ಬೀರ್ ಕಪೂರ್, ಸಲ್ಮಾನ್ ಖಾನ್, ಅಲ್ಲು ಅರ್ಜುನ್ ಇನ್ನೂ ಕೆಲವು ಸ್ಟಾರ್ ನಟರುಗಳೊಟ್ಟಿಗೆ ನಟಿಸಿದ್ದಾರೆ. ದಕ್ಷಿಣ ಭಾರತ ಚಿತ್ರರಂಗ ಮತ್ತು ಬಾಲಿವುಡ್​​ನಲ್ಲಿ ಭಾರಿ ಬೇಡಿಕೆ ಹೊಂದಿದ್ದಾರೆ. ಇದೀಗ ರಶ್ಮಿಕಾ ಮಂದಣ್ಣ ತಮಿಳಿನ ಹೀರೋ ಜೊತೆಗೆ ಹಾರರ್ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದಾರೆ. ಸಿನಿಮಾದ ಚಿತ್ರೀಕರಣ ಶೀಘ್ರ ಪ್ರಾರಂಭ ಆಗಲಿದೆ.

ಮತ್ತೊಂದು ಹಾರರ್ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ: ನಾಯಕ ಯಾರು ಗೊತ್ತೆ?
Rashmika Mandanna

Updated on: Aug 31, 2025 | 2:49 PM

ರಶ್ಮಿಕಾ ಮಂದಣ್ಣ (Rashmika Mandanna) ಈಗ ಪ್ಯಾನ್ ಇಂಡಿಯಾ ಸ್ಟಾರ್ ನಟಿ. ಅವರನ್ನು ನಾಯಕಿಯಾಗಿ ಹಾಕಿಕೊಳ್ಳಲು ದೊಡ್ಡ-ದೊಡ್ಡ ಸ್ಟಾರ್ ನಟರು ತುದಿ ಗಾಲಲ್ಲಿ ನಿಂತಿದ್ದಾರೆ. ಸೂಪರ್ ಸ್ಟಾರ್​ಗಳಾದ ರಣ್​ಬೀರ್ ಕಪೂರ್, ಸಲ್ಮಾನ್ ಖಾನ್, ಅಲ್ಲು ಅರ್ಜುನ್ ಇನ್ನೂ ಹಲವರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ ರಶ್ಮಿಕಾ. ಇದೀಗ ತಮಿಳಿನ ರಾಘವ್ ಲಾರೆನ್ಸ್ ಜೊತೆ ಹೊಸ ಸಿನಿಮಾನಲ್ಲಿ ನಟಿಸಲು ರೆಡಿಯಾಗಿದ್ದಾರೆ. ಆ ಮೂಲಕ ತಮಗೆ ಕತೆಯಷ್ಟೆ ಮುಖ್ಯ ಎಂಬುದನ್ನು ಈ ಮೂಲಕ ಸಾಬೀತು ಮಾಡಿದ್ದಾರೆ ನಟಿ.

ರಾಘವ್ ಲಾರೆನ್ಸ್ ತಮಿಳಿನ ಜನಪ್ರಿಯ ನಟರಾದರೂ ಸಹ ಎ ಸಾಲಿನ ಸ್ಟಾರ್ ನಟರಲ್ಲ. ಜೊತೆಗೆ ಹಾರರ್ ಥ್ರಿಲ್ಲರ್ ಸಿನಿಮಾಗಳ ಮೂಲಕವೇ ಅವರು ಪ್ರೇಕ್ಷಕರನ್ನು ಸೆಳೆಯುತ್ತಾ ಬಂದಿದ್ದಾರೆ. ಎ ಲಿಸ್ಟೆಡ್ ನಟಿಯರು ರಾಘವ್ ಜೊತೆಗೆ ನಟಿಸಿದ್ದಿಲ್ಲ. ಆದರೆ ರಶ್ಮಿಕಾ ಅದ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ರಾಘವ್ ಜೊತೆಗೆ ನಟಿಸಲು ಒಪ್ಪಿದ್ದಾರೆ. ರಾಘವ್ ಅವರ ಜನಪ್ರಿಯ ಹಾರರ್ ಸಿನಿಮಾ ಸರಣಿಯಾದ ‘ಕಾಂಚನಾ’ದ ಮುಂದಿನ ಭಾಗದಲ್ಲಿ ರಶ್ಮಿಕಾ ಸಹ ನಟಿಸಲಿದ್ದಾರೆ.

ಈ ಮೊದಲು ‘ಕಾಂಚನಾ 4’ ಸಿನಿಮಾನಲ್ಲಿ ಪೂಜಾ ಹೆಗ್ಡೆ ನಟಿಸಲಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಕೆಲ ವಾರಗಳ ಮುಂಚೆ ಸುದ್ದಿಗಳು ಹರಿದಾಡಿದ್ದವು. ಆದರೆ ಇದೀಗ ಪೂಜಾ ಹೆಗ್ಡೆ ಬದಲಿಗೆ ರಶ್ಮಿಕಾ ಮಂದಣ್ಣ ಹೆಸರು ಕೇಳಿ ಬರುತ್ತಿದೆ. ಸಿನಿಮಾನಲ್ಲಿ ರಾಘವ್ ಲಾರೆನ್ಸ್ ಎದುರು ದೆವ್ವದ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಲಿದ್ದಾರಂತೆ. ಸಿನಿಮಾದ ಬಗ್ಗೆ ಮಾತುಕತೆ ಸಂಪೂರ್ಣವಾಗಿದ್ದು ಕೆಲವೇ ತಿಂಗಳಲ್ಲಿ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ.

ಇದನ್ನೂ ಓದಿ:ಸಾಮಾಜಿಕ ಕಾರ್ಯಕ್ಕೆ ಕೈ ಜೋಡಿಸಿದ ರಶ್ಮಿಕಾ ಮಂದಣ್ಣ, ಭೇಷ್ ಎಂದ ನೆಟ್ಟಿಗರು

‘ಕಾಂಚನಾ 4’ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಲು ರಾಘವ್ ಲಾರೆನ್ಸ್ ಮುಂದಾಗಿದ್ದಾರೆ. ಈ ಹಿಂದಿನ ‘ಕಾಂಚನಾ’ ಸಿನಿಮಾಗಳಲ್ಲಿ ರಾಘವ್ ಅವರೇ ದೆವ್ವದ ಪಾತ್ರದಲ್ಲಿ ನಟಿಸಿದ್ದರು. ಆದರೆ ‘ಕಾಂಚನಾ 4’ ಸಿನಿಮಾನಲ್ಲಿ ರಾಘವ್ ಜೊತೆಗೆ ರಶ್ಮಿಕಾ ಸಹ ದೆವ್ವವಾಗಿ ಕಾಣಿಸಿಕೊಳ್ಳಲಿದ್ದಾರೆ. ಅಂದಹಾಗೆ ರಶ್ಮಿಕಾ ಒಂದರ ಹಿಂದೊಂದರಂತೆ ಹಾರರ್ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ರಶ್ಮಿಕಾ ದೆವ್ವವಾಗಿ ನಟಿಸಿರುವ ‘ಥಮ’ ಹಿಂದಿ ಸಿನಿಮಾದ ಟ್ರೈಲರ್ ಕೆಲ ದಿನಗಳ ಹಿಂದೆಯಷ್ಟೆ ಬಿಡುಗಡೆ ಆಗಿದ್ದು, ಸಿನಿಮಾ ಶೀಘ್ರವೇ ತೆರೆಗೆ ಬರಲಿದೆ. ಅದು ಬಿಡುಗಡೆ ಆಗುವ ಮುಂಚೆಯೇ ರಶ್ಮಿಕಾ ಮತ್ತೊಂದು ಹಾರರ್ ಸಿನಿಮಾ ಒಪ್ಪಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಕೈಯಲ್ಲಿ ಪ್ರಸ್ತುತ ಹಲವು ಸಿನಿಮಾಗಳಿವೆ. ‘ಗರ್ಲ್​ಫ್ರೆಂಡ್’, ‘ಗೀತ ಗೋವಿಂದಂ 2’, ‘ಪುಷ್ಪ 3’, ‘ಅನಿಮಲ್ ಪಾರ್ಕ್’, ‘ಥಮ’ ಸಿನಿಮಾದ ಚಿತ್ರೀಕರಣ ಮುಗಿದಿದ್ದು ಶೀಘ್ರವೇ ಬಿಡುಗಡೆ ಆಗಲಿದೆ. ಇದರ ಜೊತೆಗೆ ಒಂದು ತಮಿಳು ಸಿನಿಮಾ ಹಾಗೂ ಒಂದು ಮಲಯಾಳಂ ಸಿನಿಮಾನಲ್ಲಿ ನಟಿಸಲಿದ್ದಾರೆ ರಶ್ಮಿಕಾ ಮಂದಣ್ಣ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:48 pm, Sun, 31 August 25