ರಶ್ಮಿಕಾ, ವಿಜಯ್ ಮದುವೆ: ಹಳದಿ ಶಾಸ್ತ್ರ ಆರಂಭ; ಫೋಟೋ ಹಂಚಿಕೊಂಡ ಆಶಿಕಾ

ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಮದುವೆ ಸಲುವಾಗಿ ನಟಿ ಆಶಿಕಾ ರಂಗನಾಥ್ ಉದಯಪುರಕ್ಕೆ ತೆರಳಿದ್ದಾರೆ. ಹಳದಿ ಶಾಸ್ತ್ರ ಆರಂಭ ಆಗುತ್ತಿದ್ದಂತೆಯೇ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಅವು ವೈರಲ್ ಆಗಿವೆ. ಬುಧವಾರ (ಫೆ. 25) ರಾತ್ರಿಯೇ ಸಂಗೀತ್ ಕಾರ್ಯಕ್ರಮ ನಡೆಯಲಿದೆ. ಅಥಿತಿಗಳೆಲ್ಲ ಕುಣಿದು ಸಂಭ್ರಮಿಸಲಿದ್ದಾರೆ.

ರಶ್ಮಿಕಾ, ವಿಜಯ್ ಮದುವೆ: ಹಳದಿ ಶಾಸ್ತ್ರ ಆರಂಭ; ಫೋಟೋ ಹಂಚಿಕೊಂಡ ಆಶಿಕಾ
Ashika Ranganath

Updated on: Feb 25, 2026 | 6:10 PM

ರಾಜಸ್ಥಾನದ ಉದಯಪುರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ (Vijay Deverakonda) ಅವರ ಮದುವೆ ಶಾಸ್ತ್ರಗಳು ಆರಂಭ ಆಗಿವೆ. ಕುಟುಂಬದವರು ಮತ್ತು ಕೆಲವೇ ಕೆಲವು ಆಪ್ತರು ಈ ವಿವಾಹದಲ್ಲಿ ಭಾಗಿ ಆಗಿದ್ದಾರೆ. ಮದುವೆಗೂ ಮುನ್ನ ಅನೇಕ ಶಾಸ್ತ್ರಗಳನ್ನು ಮಾಡಲಾಗಿದೆ. ಬುಧವಾರ (ಫೆಬ್ರವರಿ 25) ಹಳದಿ ಶಾಸ್ತ್ರ ಮಾಡಲಾಗುತ್ತಿದೆ. ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ (Rashmika Mandanna), ಆಶಿಕಾ ರಂಗನಾಥ್ ಅವರು ಹಳದಿ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬಹಳ ಅದ್ದೂರಿಯಾಗಿ ವಿರೋಶ್ ಮದುವೆ ನಡೆಯುತ್ತಿದೆ.

ಕನ್ನಡ ಚಿತ್ರರಂಗದ ಕೆಲವೇ ಮಂದಿಗೆ ಮಾತ್ರ ರಶ್ಮಿಕಾ ಮಂದಣ್ಣ ಅವರು ಮದುವೆಯ ಆಹ್ವಾನ ನೀಡಿದ್ದಾರೆ. ವೃತ್ತಿಜೀವನದ ಆರಂಭದ ದಿನಗಳಿಂದ ರಶ್ಮಿಕಾ ಮಂದಣ್ಣ ಮತ್ತು ಆಶಿಕಾ ರಂಗನಾಥ್ ಅವರು ಸ್ನೇಹ ಹೊಂದಿದ್ದಾರೆ. ಹಾಗಾಗಿ ಆಶಿಕಾ ರಂಗನಾಥ್ ಅವರನ್ನು ಆಹ್ವಾನಿಸಲಾಗಿದೆ. ಸಿನಿಮಾ ಕೆಲಸಗಳಿಗೆ ಬಿಡುವು ನೀಡಿದ ಆಶಿಕಾ ಅವರು ಗೆಳತಿಯ ಮದುವೆಗಾಗಿ ಉದಯಪುರಕ್ಕೆ ತೆರಳಿದ್ದಾರೆ.

ಹಳದಿ ಶಾಸ್ತ್ರಕ್ಕೆ ಯಾವ ರೀತಿ ತಯಾರಿ ನಡೆದಿದೆ ಎಂಬುದನ್ನು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಈ ಫೋಟೋಗಳ ಮೂಲಕ ತಿಳಿಸಿದ್ದಾರೆ. ಆಶಿಕಾ ರಂಗನಾಥ್ ಕೂಡ ತಾವು ಹಳದಿ ಶಾಸ್ತ್ರಕ್ಕೆ ಸಜ್ಜಾಗಿ ನಿಂತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಮದುವೆ ಬಗ್ಗೆ ಕ್ಷಣಕ್ಷಣದ ಅಪ್​ಡೇಟ್ ತಿಳಿಯಲು ಅಭಿಮಾನಿಗಳು ಕಾದಿದ್ದಾರೆ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ತೆಲುಗಿನಲ್ಲಿ ಮಾತ್ರವಲ್ಲದೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಹೊಂದಿದ್ದಾರೆ. ತಮ್ಮ ಮದುವೆಗೆ ಕೇವಲ 100 ಜನರಿಗೆ ಮಾತ್ರ ಅವರು ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಬಳಿಕ ನಡೆಯಲಿರುವ ಆರತಕ್ಷತೆ ಕಾರ್ಯಕ್ರಮದಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ಭಾಗವಹಿಸುವ ನಿರೀಕ್ಷೆ ಇದೆ.

ಇದನ್ನೂ ಓದಿ: ಅವರು ರಶೀ, ಇವರು ವಿಜು: ರಶ್ಮಿಕಾ, ವಿಜಯ್ ದೇವರಕೊಂಡ ಪರಸ್ಪರ ಕರೆಯೋದು ಹೀಗೆ

ಬುಧವಾರ (ಫೆ.25) ರಾತ್ರಿಯೇ ಹಳದಿ ಶಾಸ್ತ್ರದ ನಂತರ ಸಂಗೀತ್ ಕಾರ್ಯಕ್ರಮ ನಡೆಯಲಿದೆ. ಅತಿಥಿಗಳೆಲ್ಲರೂ ಹಾಡಿ, ಕುಣಿದು ಸಂಭ್ರಮಿಸಲಿದ್ದಾರೆ. ಫೆಬ್ರವರಿ 26ರಂದು ಮದುವೆ ನಡೆಯಲಿದೆ. ಹಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರು ಸಪ್ತಪದಿ ತುಳಿಯಲಿದ್ದಾರೆ. ಈ ಜೋಡಿಗೆ ಫ್ಯಾನ್ಸ್ ಅಭಿನಂದನೆ ತಿಳಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us