- TV9 Kannada Kannada News Photos Cricket Photos June 17: Indian Cricket Dominance! Team India Wins 3 Matches, Sets New Records
ಒಂದೇ ದಿನ ನಡೆದ 3 ಪಂದ್ಯಗಳನ್ನು ಭಾರಿ ಅಂತರದಲ್ಲಿ ಗೆದ್ದ ಟೀಂ ಇಂಡಿಯಾ
Historic June 17: ಜೂನ್ 17 ಭಾರತೀಯ ಕ್ರಿಕೆಟ್ಗೆ ಅವಿಸ್ಮರಣೀಯ ದಿನವಾಗಿತ್ತು. ಒಂದೇ ದಿನ ಮೂರು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ತಂಡಗಳು ಅದ್ಭುತ ಗೆಲುವು ಸಾಧಿಸಿದವು. ಪುರುಷರ ಏಕದಿನ, ಭಾರತ ಎ ಮತ್ತು ಮಹಿಳಾ ಟಿ20 ತಂಡಗಳು ಭಾರಿ ಅಂತರದಿಂದ ಜಯಭೇರಿ ಬಾರಿಸಿ, ಅಭಿಮಾನಿಗಳಿಗೆ ರಸದೌತಣ ನೀಡಿದವು. ಈ ಪಂದ್ಯಗಳಲ್ಲಿ ಭಾರತದ ಪ್ರಾಬಲ್ಯ ಎದ್ದು ಕಾಣುತ್ತಿತ್ತು, ಇದು ಮುಂದಿನ ಸರಣಿಗಳಿಗೆ ಶುಭ ಸೂಚನೆ.
Updated on: Jun 18, 2026 | 5:28 PM

ಜೂನ್ 17 ರಂದು ಕ್ರಿಕೆಟ್ ಪ್ರಿಯರಿಗೆ ರಸದೌತಣವೇ ಸಿಕ್ಕಿತು. ಈ ಒಂದೇ ದಿನದಂದು ಬರೋಬ್ಬರಿ 7 ಅಂತರರಾಷ್ಟ್ರೀಯ ಪಂದ್ಯಗಳು ನಡೆದವು. ಆ 7 ಪಂದ್ಯಗಳಲ್ಲಿ ಟೀಂ ಇಂಡಿಯಾದ್ದೇ ಮೂರು ಪಂದ್ಯಗಳಿದ್ದವು. ಅಚ್ಚರಿಯ ಸಂಗತಿಯೆಂದರೆ ಈ ಮೂರು ಪಂದ್ಯಗಳನ್ನು ಭಾರತ ತಂಡ ಏಕಪಕ್ಷೀಯವಾಗಿ ಹಾಗೂ ಭಾರಿ ಅಂತರದಿಂದ ಗೆದ್ದುಕೊಂಡುವೆ. ಆ ಮೂರು ಪಂದ್ಯಗಳು ಯಾವುವು ಎಂಬುದರ ವಿವರ ಇಲ್ಲಿದೆ (PC- BCCI X).

ಮೊದಲಿಗೆ ಭಾರತೀಯ ಕಾಲಮಾನ ಬೆಳಿಗ್ಗೆ 10 ಗಂಟೆಗೆ ಭಾರತ ಎ ಹಾಗೂ ಅಫ್ಘಾನಿಸ್ತಾನ ಎ ತಂಡಗಳ ನಡುವೆ ತ್ರಿಕೋನ ಸರಣಿಯ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ ತಂಡ 319 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ಎ ತಂಡ 218 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ ಎ ತಂಡ 101 ರನ್ಗಳ ಬೃಹತ್ ಜಯ ದಾಖಲಿಸಿ ನೇರವಾಗಿ ಫೈನಲ್ಗೇರಿತು (PC- BCCI X).

ಮಧ್ಯಾಹ್ನ 1:30ಕ್ಕೆ ಆರಂಭವಾದ ದಿನದ ಎರಡನೇ ಪಂದ್ಯದಲ್ಲಿ ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯವನ್ನು ಆಡಿದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಬರೋಬ್ಬರಿ 402 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡ 232 ರನ್ಗಳಿಗೆ ಆಲೌಟ್ ಆಯಿತು. ಹೀಗಾಗಿ ಟೀಂ ಇಂಡಿಯಾ 170 ರನ್ಗಳ ಜಯ ದಾಖಲಿಸಿ, ಸರಣಿಯನ್ನು ತನ್ನದಾಗಿಸಿಕೊಂಡಿತು (PC- BCCI X).

ಇನ್ನು ಸಂಜೆ 7 ಗಂಟೆಗೆ ಭಾರತ ಹಾಗೂ ನೆದರ್ಲ್ಯಾಂಡ್ಸ್ ಮಹಿಳಾ ತಂಡಗಳ ನಡುವೆ ಟಿ20 ವಿಶ್ವಕಪ್ ಪಂದ್ಯ ನಡೆಯಿತು. ಈ ಪಂದ್ಯದಲ್ಲೂ ಮೊದಲು ಬ್ಯಾಟಿಂಗ್ ಮಾಡಿದ ಭಾರತ ವನಿತಾ ಪಡೆ 209 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ನೆದರ್ಲ್ಯಾಂಡ್ಸ್ ತಂಡ ಕೇವಲ 114 ರನ್ಗಳಿಗೆ ಆಲೌಟ್ ಆಗುವ ಮೂಲಕ 95 ರನ್ಗಳ ಹೀನಾಯ ಸೋಲುಕಂಡಿತು. ಇತ್ತ ಭಾರತ ತಂಡ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿದೊಡ್ಡ ಗೆಲುವು ದಾಖಲಿಸಿದ ದಾಖಲೆ ಬರೆಯಿತು (PC- BCCI X).

ಇದೀಗ ಈ ಮೂರು ತಂಡಗಳು ಮತ್ತೆ ಶನಿವಾರ ಮತ್ತು ಭಾನುವಾರದಂದು ಕಣಕ್ಕಿಳಿಯಲಿವೆ. ಶನಿವಾರದಂದು ಭಾರತ ಹಾಗೂ ಅಫ್ಘಾನಿಸ್ತಾನದ ನಡುವೆ ಏಕದಿನ ಸರಣಿಯ ಕೊನೆಯ ಪಂದ್ಯ ನಡೆದರೆ, ಭಾನುವಾರದಂದು ಭಾರತ ಎ ತಂಡ ತ್ರಿಕೋನ ಸರಣಿಯ ಫೈನಲ್ ಪಂದ್ಯವನ್ನು ಆಡಲಿದೆ. ಇತ್ತ ಮಹಿಳಾ ಟಿ20 ವಿಶ್ವಕಪ್ನಲ್ಲಿ ಭಾರತ ವನಿತಾ ಪಡೆ, ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ (PC- BCCI X).

ಕಳೆದ ಒಂದು ದಶಕದಿಂದ ಕನ್ನಡದ ನಂ.1 ಸುದ್ದಿ ವಾಹಿನಿ ಟಿವಿ9 ಕನ್ನಡದೊಂದಿಗೆ ಪತ್ರಿಕೋದ್ಯಮದ ಪಯಣ ಮುಂದುವರಿಸಿದ್ದೇನೆ. ಕ್ರೀಡಾ ಜಗತ್ತಿನ ಆಗುಹೋಗುಗಳು, ಆಟಗಾರರ ಸಾಧನೆಗಳು, ಮೈದಾನದ ರೋಚಕ ಕ್ಷಣಗಳು ಹಾಗೂ ಕ್ರೀಡೆಯ ಹಿಂದಿನ ಆಸಕ್ತಿದಾಯಕ ಕಥನಗಳನ್ನು ಅಕ್ಷರಗಳ ಮೂಲಕ ಓದುಗರಿಗೆ ತಲುಪಿಸುವುದು ನನ್ನ ವೃತ್ತಿ ಮತ್ತು ಪ್ರವೃತ್ತಿ. ಕ್ರೀಡೆಯನ್ನು ಕೇವಲ ಆಟವಾಗಿ ನೋಡದೆ, ಅದರೊಳಗಿನ ಪರಿಶ್ರಮ, ಹೋರಾಟ, ಸಾಧನೆ ಮತ್ತು ಭಾವನೆಗಳನ್ನು ಗುರುತಿಸಿ ಬರವಣಿಗೆಯಲ್ಲಿ ಕಟ್ಟಿಕೊಡುವುದು ನನ್ನ ಪ್ರಯತ್ನ. ಮೂಲತಃ ಹಾಸನ ಜಿಲ್ಲೆಯವನು. ಹಾಸನದ ನೆಲದ ಸೊಗಡು ಮತ್ತು ಕನ್ನಡದ ಮೇಲಿನ ಅಭಿಮಾನ ನನ್ನ ಹೆಮ್ಮೆ. ವೃತ್ತಿಪರತೆಯೊಂದಿಗೆ ಹೊಸ ವಿಷಯಗಳನ್ನು ಕಲಿಯುತ್ತಾ, ಕ್ರೀಡಾ ಪತ್ರಿಕೋದ್ಯಮದಲ್ಲಿ ಹೊಸ ಮೈಲಿಗಲ್ಲುಗಳನ್ನು ಸಾಧಿಸುವ ಹಂಬಲ ನನ್ನದು.
Read More



