- TV9 Kannada Photo gallery Cricket photos Ishan Kishan Blazes Fastest ODI Century, Equals Sachin's Record vs Afghanistan
IND vs AFG: ಅತಿ ವೇಗದ ಶತಕ ಬಾರಿಸಿ ಕ್ರಿಕೆಟ್ ದೇವರನ್ನು ಸರಿಗಟ್ಟಿದ ಇಶಾನ್ ಕಿಶನ್
Ishan Kishan Blazes Fastest ODI Century: ಇಶಾನ್ ಕಿಶನ್ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಎರಡನೇ ಪಂದ್ಯದಲ್ಲಿ 71 ಎಸೆತಗಳಲ್ಲಿ ಸ್ಪೋಟಕ ಶತಕ ಬಾರಿಸಿ 125 ರನ್ ಗಳಿಸಿದರು. ಈ ಮೂಲಕ ಸಚಿನ್ ತೆಂಡೂಲ್ಕರ್ ಅವರ ವೇಗದ ಶತಕದ ದಾಖಲೆಯನ್ನು ಸರಿಗಟ್ಟಿದರು. ವಿರಾಟ್ ಕೊಹ್ಲಿ ಮತ್ತು ಸೆಹ್ವಾಗ್ ನಂತರ ಭಾರತದ ವೇಗದ ಏಕದಿನ ಶತಕ ಬಾರಿಸಿದವರಲ್ಲಿ ಇಶಾನ್ ಕಿಶನ್ ಒಬ್ಬರಾಗಿದ್ದಾರೆ.
Updated on:Jun 18, 2026 | 5:56 PM

ಸುಮಾರು ಮೂರು ವರ್ಷಗಳ ನಂತರ ಭಾರತ ಏಕದಿನ ತಂಡದಲ್ಲಿ ಸ್ಥಾನ ಪಡೆದಿರುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಸರಣಿಯ ಮೊದಲ ಪಂದ್ಯದಲ್ಲಿ 22 ಎಸೆತಗಳಲ್ಲಿ 34 ರನ್ಗಳ ಇನ್ನಿಂಗ್ಸ್ ಆಡಿದ್ದ ಕಿಶನ್, 2ನೇ ಏಕದಿನ ಪಂದ್ಯದಲ್ಲಿ ಸಿಡಿಲಬ್ಬರದ ಶತಕ ಬಾರಿಸುವ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸಿದರು (PC- PTI).

ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಇಶಾನ್ ಕಿಶನ್ ಆರಂಭದಲ್ಲಿ ತಾಳ್ಮೆಯ ಬ್ಯಾಟಿಂಗ್ ಮಾಡಿದರು. ಹೀಗಾಗಿ ಕಿಶನ್ ಅರ್ಧಶತಕ ಬಾರಿಸಲು ತೆಗೆದುಕೊಂಡಿದ್ದು 52 ಎಸೆತಗಳನ್ನು. ಅರ್ಧಶತಕದ ಬಳಿಕ ತಮ್ಮ ಗೇರ್ ಬದಲಿಸಿದ ಕಿಶನ್ ಮುಂದಿನ 50 ರನ್ ಬಾರಿಸಲು ತೆಗೆದುಕೊಂಡಿದ್ದು ಕೇವಲ 18 ಎಸೆತಗಳು (PC- PTI).

ತಮ್ಮ ಇನ್ನಿಂಗ್ಸ್ನಲ್ಲಿ 79 ಎಸೆತಗಳನ್ನು ಎದುರಿಸಿದ ಕಿಶನ್ 14 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 125 ರನ್ ಬಾರಿಸಿದರು. ಅದಕ್ಕೂ ಮೊದಲು ಕಿಶನ್, ಕೇವಲ 71 ಎಸೆತಗಳಲ್ಲಿ ತಮ್ಮ ಏಕದಿನ ವೃತ್ತಿಜೀವನದ ಎರಡನೇ ಏಕದಿನ ಶತಕವನ್ನು ಪೂರೈಸಿದರು. ಕಿಶನ್ ಅವರ ಈ ಸ್ಫೋಟಕ ಶತಕದಿಂದಾಗಿ ತಂಡ 400 ರನ್ಗಳ ಗಡಿ ದಾಟಿತು (PC- PTI).

ಇನ್ನು ಈ ಪಂದ್ಯದಲ್ಲಿ ಕೇವಲ 71 ಎಸೆತಗಳಲ್ಲಿ ಶತಕದ ಗಡಿ ದಾಟಿದ ಕಿಶನ್, ಭಾರತದ ಪರ ಅತಿ ವೇಗದ ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರನ್ನು ಸರಿಗಟ್ಟಿದರು. ಪ್ರಸ್ತುತ ಇವರಿಬ್ಬರು ಈ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದ್ದಾರೆ. ಸಚಿನ್ 1998 ರಲ್ಲಿ ಜಿಂಬಾಬ್ವೆ ವಿರುದ್ಧ 71 ಎಸೆತಗಳಲ್ಲಿ ಶತಕ ಪೂರೈಸಿದ್ದರು (PC- PTI).

ಭಾರತದ ಪರ ಅತಿ ವೇಗದ ಏಕದಿನ ಶತಕದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ 2013 ರಲ್ಲಿ ಜೈಪುರದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ 52 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇನ್ನು 2009 ರಲ್ಲಿ ಹ್ಯಾಮಿಲ್ಟನ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ 60 ಎಸೆತಗಳಲ್ಲಿ ಶತಕ ಸಿಡಿಸಿದ್ದ ವೀರೇಂದ್ರ ಸೆಹ್ವಾಗ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ (PC- PTI).
Published On - 5:54 pm, Thu, 18 June 26




