
ಟಾಲಿವುಡ್ ನಟ ರವಿತೇಜ (Ravi Teja) ಅವರು ಜನವರಿ 26ರಂದು 58ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಅವರ ಬರ್ತ್ಡೇ ಪ್ರಯುಕ್ತ ಹೊಸ ಸಿನಿಮಾ ಅನೌನ್ಸ್ ಮಾಡಲಾಗಿದೆ. ಇದು ರವಿತೇಜ ನಟನೆಯ 77ನೇ ಸಿನಿಮಾ. ಈ ಚಿತ್ರಕ್ಕೆ ‘ಇರುಮುಡಿ’ ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾ ಮೂಲಕ ರವಿತೇಜ ಅವರು ಭಕ್ತಪ್ರಧಾನ ಕಥೆಯನ್ನು ಜನರಿಗೆ ಹೇಳಲಿದ್ದಾರೆ. ‘ಇರುಮುಡಿ’ (Irumudi) ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದೆ. ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ನಿರ್ದೇಶಕ ಶಿವ ನಿರ್ವಾಣ ಅವರು ‘ಇರುಮುಡಿ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಭಕ್ತಿಯ ಜೊತೆಗೆ ಭಾವನಾತ್ಮಕ ಅಂಶಗಳು ಇರುವ ಕಥೆಯನ್ನು ಅವರು ಈ ಬಾರಿ ಆಯ್ಕೆ ಮಾಡಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ತಂದೆ ಮತ್ತು ಮಗಳ ಬಾಂಧವ್ಯ ಕೂಡ ಹೈಲೆಟ್ ಆಗಿರಲಿದೆ. ರವಿತೇಜ ಅವರು ಹಿಂದೆಂದೂ ಕಾಣದ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಶಬರಿಮಲೆ ಅಯ್ಯಪ್ಪ ದೀಕ್ಷಾಧಾರಿಗಳು ಯಾತ್ರೆಯ ಸಮಯದಲ್ಲಿ ತಲೆಯ ಮೇಲೆ ಹೊತ್ತುಕೊಂಡು ಸಾಗುವುದನ್ನು ಇರುಮುಡಿ ಎನ್ನುತ್ತಾರೆ. ಅದನ್ನೇ ಶೀರ್ಷಿಕೆಯಾಗಿ ಇಡಲಾಗಿದೆ. ಈಗಾಗಲೇ ಅಯ್ಯಪ್ಪ ಸ್ಟಾಮಿ ಬಗ್ಗೆ ಹಲವು ಸಿನಿಮಾಗಳು ಬಂದಿವೆ. ರವಿತೇಜ ಅವರ ‘ಇರುಮುಡಿ’ ಸಿನಿಮಾ ಯಾವ ರೀತಿ ಭಿನ್ನವಾಗಿರಲಿದೆ ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.
‘ಇರುಮುಡಿ’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡುವುದರ ಜೊತೆಗೆ ಪಾತ್ರವರ್ಗದ ಬಗ್ಗೆಯೂ ಮಾಹಿತಿ ಹಂಚಿಕೊಳ್ಳಲಾಗಿದೆ. ಪ್ರಿಯಾ ಭವಾನಿ ಶಂಕರ್ ಅವರು ಈ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಬೇಬಿ ನಕ್ಷತ್ರಾ ಅವರು ರವಿತೇಜ ಅವರ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಾಯಿ ಕುಮಾರ್, ಅಜಯ್ ಘೋಷ್, ರಮೇಶ್ ಇಂದಿರಾ, ಸ್ವಸಿಕಾ ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.
ಇದನ್ನೂ ಓದಿ: ಚಿತ್ರರಂಗಕ್ಕೆ ಎಂಟ್ರಿ ಕೊಡೋಕೆ ರೆಡಿ ಆದ ರವಿತೇಜ ಮಗಳು ಮೋಕ್ಷಧಾ
ನಿರ್ದೇಶಕ ಶಿವ ನಿರ್ವಾಣ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಈಗಾಗಲೇ ‘ಇರುಮುಡಿ’ ಸಿನಿಮಾದ ಚಿತ್ರೀಕರಣ ಶುರುವಾಗಿದೆ. ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆಯ ಮೂಲಕ ನವೀನ್ ಯರ್ನೇನಿ ಮತ್ತು ರವಿಶಂಕರ್ ಅವರು ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಜಿವಿ ಪ್ರಕಾಶ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ವಿಷ್ಣು ಶರ್ಮ ಅವರ ಛಾಯಾಗ್ರಹಣ, ಪ್ರವೀಣ್ ಪುಡಿ ಅವರ ಸಂಕಲನದಲ್ಲಿ ‘ಇರುಮುಡಿ’ ಸಿನಿಮಾ ಮೂಡಿಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.