ಮದುವೆಗೂ ಮುನ್ನ ಗುಡ್ ನ್ಯೂಸ್ ನೀಡಿದ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ
ಸ್ಟಾರ್ ಕಪಲ್ ಆದ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ಮದುವೆಗೆ ದಿನಗಣನೆ ಶುರುವಾಗಿದೆ. ಅದರ ನಡುವೆಯೇ ಅವರೊಂದು ಗುಡ್ ನ್ಯೂಸ್ ನೀಡಿದ್ದಾರೆ. ಒಬ್ಬರೂ ಜೊತೆಯಾಗಿ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಸಿನಿಮಾಗಳ ಬಳಿಕ ಅವರು ಮತ್ತೆ ಜೊತೆಯಾಗಿ ನಟಿಸುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ (Vijay Deverakonda) ಅವರು ಕೆಲವೇ ದಿನಗಳಲ್ಲಿ ಹಸೆಮಣೆ ಏರಲಿದ್ದಾರೆ. ಪರಸ್ಪರ ಪ್ರೀತಿಸುತ್ತಿರುವ ಅವರು ಈ ವಿಚಾರವನ್ನು ಬಹಿರಂಗವಾಗಿ ಒಪ್ಪಿಕೊಂಡಿಲ್ಲ. ಅವರ ಮದುವೆಗೆ ಸಕಲ ಸಿದ್ಧತೆ ನಡೆದಿದೆ. ಅದರ ನಡುವೆಯೇ ಅವರಿಬ್ಬರು ಒಂದು ಗುಡ್ ನ್ಯೂಸ್ ನೀಡಿದ್ದಾರೆ. ಅದೇನೆಂದರೆ, ಮತ್ತೊಮ್ಮೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅವರು ಜೊತೆಯಾಗಿ ನಟಿಸಲಿದ್ದಾರೆ. ಈಗಾಗಲೇ ‘ಡಿಯರ್ ಕಾಮ್ರೇಡ್’, ‘ಗೀತ ಗೋವಿಂದಂ’ ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದ ಅವರು ಈಗ ಹೊಸ ಸಿನಿಮಾದಲ್ಲಿ ಒಂದಾಗುತ್ತಿದ್ದಾರೆ. ಈ ಚಿತ್ರಕ್ಕೆ ‘ರಣಬಾಲಿ’ (Ranabaali) ಎಂದು ಶೀರ್ಷಿಕೆ ಇಡಲಾಗಿದೆ.
ವಿಜಯ್ ದೇವರಕೊಂಡ ಅವರು ಒಂದು ದೊಡ್ಡ ಗೆಲುವಿಗಾಗಿ ಕಾದಿದ್ದಾರೆ. ಕಳೆದ ವರ್ಷ ಅವರು ನಟಿಸಿದ ‘ಕಿಂಗ್ಡಮ್’ ಸಿನಿಮಾ ಬಿಡುಗಡೆ ಆಗಿತ್ತು. ಅಂದುಕೊಂಡ ಮಟ್ಟಕ್ಕೆ ಆ ಸಿನಿಮಾ ಕಲೆಕ್ಷನ್ ಮಾಡಲಿಲ್ಲ. ಈಗ ಅವರ ಹೊಸ ಸಿನಿಮಾ ‘ರಣಬಾಲಿ’ ಅನೌನ್ಸ್ ಆಗಿದೆ. ಇದು ಅವರ 14ನೇ ಸಿನಿಮಾ ಆಗಿದ್ದು, ಗಣರಾಜ್ಯೋತ್ಸವದ ಪ್ರಯುಕ್ತ ಟೈಟಲ್ ಟೀಸರ್ ರಿಲೀಸ್ ಮಾಡಲಾಗಿದೆ.
‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆಯು ರಣಬಾಲಿ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಇದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು ತೆಲುಗು, ಕನ್ನಡ, ಮಲಯಾಳಂ, ತಮಿಳು ಮತ್ತು ಹಿಂದಿಯಲ್ಲಿ ಮೂಡಿಬರಲಿದೆ. ವಿಜಯ್ ದೇವರಕೊಂಡ ಅವರು ರಣಬಾಲಿ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರಿಗೆ ಜಯಮ್ಮ ಎಂಬ ಪಾತ್ರವನ್ನು ನೀಡಲಾಗಿದೆ.
ಅಂದಹಾಗೆ, ‘ರಣಬಾಲಿ’ ಸಿನಿಮಾದಲ್ಲಿ ಐತಿಹಾಸಿಕ ಕಥಾಹಂದರ ಇದೆ. ಸ್ವಾತಂತ್ರ್ಯ ಸಿಗುವುದಕ್ಕೂ ಮುನ್ನ ಭಾರತದಲ್ಲಿ ಬ್ರಿಟಿಷರು ನಡೆಸಿದ ಹತ್ಯಾಕಾಂಡದ ಬಗ್ಗೆ ಈ ಸಿನಿಮಾದಲ್ಲಿ ತೋರಿಸಲಾಗುವುದು. ಬ್ರಿಟಿಷರ ವಿರುದ್ಧ ತಿರುಗಿಬಿದ್ದ ಯುವಕನಾಗಿ ವಿಜಯ್ ದೇವರಕೊಂಡ ಅವರು ನಟಿಸುತ್ತಿದ್ದಾರೆ. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಮೂಡಿದೆ.
ಇದನ್ನೂ ಓದಿ: ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ಅಜಯ್-ಅತುಲ್ ಅವರು ‘ರಣಬಾಲಿ’ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ರಾಹುಲ್ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರಲಿದೆ. ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಸಿನಿಮಾಗಳಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರನ್ನು ಜೋಡಿಯಾಗಿ ನೋಡಿ ಎಂಜಾಯ್ ಮಾಡಿದ್ದ ಅಭಿಮಾನಿಗಳು ಈಗ ‘ರಣಬಾಲಿ’ ಸಿನಿಮಾಗಾಗಿ ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




