ಕಳೆದ ವರ್ಷ ನಿಧನರಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿದ್ದ ರಿಯಾ ಚಕ್ರವರ್ತಿ ಸದ್ಯ ಜಾಮೀನು ಪಡೆದು ಹೊರಗೆ ಬಂದು ಆರಾಮಾಗಿ ಇದ್ದಾರೆ. ಸುಶಾಂತ್ ಸಾವಿನ ತನಿಖೆಯ ಜೊತೆಗೆ ಬಾಲಿವುಡ್ನ ಡ್ರಗ್ಸ್ ಮಾಫಿಯಾ ಕೂಡ ಬಯಲಾದ ಬಳಿಕ ಅನೇಕರನ್ನು ವಿಚಾರಣೆಗೆ ಒಳಪಡಿಸಲಾಯಿತು. ಈ ಸಂಬಂಧ ಎನ್ಸಿಬಿ ಅಧಿಕಾರಿಗಳಿಗೆ ತಮ್ಮ ಹೇಳಿಕೆ ನೀಡಿರುವ ನಟಿ ರಿಯಾ ಚಕ್ರವರ್ತಿ ಅವರು ಸಾರಾ ಅಲಿ ಖಾನ್ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ.
ಬಾಲಿವುಡ್ನ ಹಲವರು ಮಾದಕ ವಸ್ತು ಸೇವನೆ ಮಾಡುತ್ತಾರೆ ಎಂಬ ಗುಮಾನಿ ಬಹಳ ದಿನಗಳ ಹಿಂದೆಯೇ ಶುರುವಾಗಿತ್ತು. ಆ ಕುರಿತು ಅನೇಕರನ್ನು ಎನ್ಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಅದರಲ್ಲಿ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಹೆಸರು ಕೂಡ ಇತ್ತು. ಕಳೆದ ವರ್ಷ ವಿಚಾರಣೆ ಎದುರಿಸಿ ಸೈಲೆಂಟ್ ಆಗಿದ್ದ ಅವರಿಗೆ ಈಗ ಮತ್ತೆ ಟೆನ್ಷನ್ ಶುರು ಆಗಿದೆ. ಅದಕ್ಕೆ ಕಾರಣವೇ ರಿಯಾ ಚಕ್ರವರ್ತಿ ಹೇಳಿಕೆ.
2017ರ ಜೂನ್ನಲ್ಲಿ ಸಾರಾ ಅಲಿ ಖಾನ್ ಮತ್ತು ರಿಯಾ ಚಕ್ರವರ್ತಿ ನಡುವೆ ಚಾಟ್ ನಡೆದಿತ್ತು. ಅದರಲ್ಲಿ ರಿಯಾಗೆ ಗಾಂಜಾ ತೆಗೆದುಕೊಳ್ಳಲು ಸಾರಾ ಸಲಹೆ ನೀಡಿದ್ದರು ಎಂಬುದು ಬಯಲಾಗಿದೆ. ‘ಸಾರಾ ಅಲಿ ಖಾನ್ ಬಳಿ ಯಾವಾಗಲೂ ಗಾಂಜಾ ಸುರುಳಿ ಇರುತ್ತಿತ್ತು. ಅದನ್ನೇ ಅವರು ನನಗೂ ಕೊಡಲು ಮುಂದಾಗಿದ್ದರು’ ಎಂದು ಎನ್ಸಿಬಿ ಅಧಿಕಾರಿಗಳ ಮುಂದೆ ರಿಯಾ ಚಕ್ರವರ್ತಿ ಹೇಳಿದ್ದಾರೆ. ಅವರ ಹೇಳಿಕೆಯ ಪ್ರತಿಯು ಮಾಧ್ಯಮವೊಂದಕ್ಕೆ ಲಭ್ಯವಾಗಿದ್ದು, ಆ ಮೂಲಕ ಈ ವಿಚಾರ ಬಯಲಾಗಿದೆ.
ಸುಶಾಂತ್ ಸಿಂಗ್ ರಜಪೂತ್ ಜೊತೆ ರಿಯಾ ಚಕ್ರವರ್ತಿ ಲಿವ್ ಇನ್ ರಿಲೇಷನ್ಶಿಪ್ನಲ್ಲಿ ಇದ್ದರು. ಅನೇಕ ಬಾರಿ ಅವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದರು. ಆದರೆ ಸುಶಾಂತ್ ನಿಧನದ ಬಳಿಕ ಅವರ ತಂದೆ ಕೆಕೆ ಸಿಂಗ್ ಅವರು ರಿಯಾ ವಿರದ್ಧವೇ ದೂರು ನೀಡಿದರು. ಆ ಪ್ರಕರಣವನ್ನು ಹುಡುಕಿ ಹೊರಟ ಪೊಲೀಸರಿಗೆ ಬಾಲಿವುಡ್ನ ಡ್ರಗ್ಸ್ ಮತ್ತು ಅಕ್ರಮ ಹಣ ಸಾಗಾಣಿಕೆ ವಿಷಯಗಳು ತಿಳಿದುಬಂದವು. ಸುಶಾಂತ್ ಸಾವಿನ ತನಿಖೆಯ ಅಂತಿಮ ವರದಿ ಇನ್ನೂ ಸಲ್ಲಿಕೆ ಆಗಿಲ್ಲ.
ಇದನ್ನೂ ಓದಿ:
ಬಿಗ್ ಬಾಸ್ ಮನೆ ಒಳಗೆ ಹೋಗಲಿದ್ದಾರೆ ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ?
ಸುಶಾಂತ್ ಸಿಂಗ್ ಸಾವಿನ ಬಳಿಕವೂ ಪ್ರೀತಿ ಮೇಲಿನ ನಂಬಿಕೆ ಕಡಿಮೆಯಾಗಿಲ್ಲ; ಅಚ್ಚರಿಯ ಹೇಳಿಕೆ ನೀಡಿದ ರಿಯಾ ಚಕ್ರವರ್ತಿ