‘ಅವರನ್ನು ನೆಲದಲ್ಲಿ ಕೂರಿಸಿದ್ರು, ಬೀದಿ ನಾಯಿ ತೋರಿಸಿದ್ರು’; ನಿರ್ದೇಶಕ ರಾಜಮೌಳಿ ತೀವ್ರ ಬೇಸರ

|

Updated on: Jul 02, 2021 | 12:49 PM

Delhi Airport: ವಿದೇಶದಿಂದ ಬರುವ ಅತಿಥಿಗಳು ವಿಮಾನ ನಿಲ್ದಾಣದಲ್ಲೇ ಇಂಥ ವಾತಾವರಣವನ್ನು ನೋಡಿದರೆ ಭಾರತದ ಬಗ್ಗೆ ಒಳ್ಳೆಯ ಭಾವನೆ ಮೂಡುವುದಿಲ್ಲ. ದಯವಿಟ್ಟು ಈ ಬಗ್ಗೆ ಗಮನ ಹರಿಸಿ ಎಂದು ರಾಜಮೌಳಿ ಮನವಿ ಮಾಡಿಕೊಂಡಿದ್ದಾರೆ.

‘ಅವರನ್ನು ನೆಲದಲ್ಲಿ ಕೂರಿಸಿದ್ರು, ಬೀದಿ ನಾಯಿ ತೋರಿಸಿದ್ರು’; ನಿರ್ದೇಶಕ ರಾಜಮೌಳಿ ತೀವ್ರ ಬೇಸರ
ಎಸ್​ಎಸ್​ ರಾಜಮೌಳಿ
Follow us on

ಖ್ಯಾತ ನಿರ್ದೇಶಕ ಎಸ್​.ಎಸ್. ರಾಜಮೌಳಿ ಅವರು ‘ಆರ್​ಆರ್​ಆರ್​’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಮಧ್ಯೆ ಅವರು ಸಿನಿಮಾ ಹೊರತಾದ ಕಾರಣವೊಂದರಿಂದ ಸುದ್ದಿ ಆಗುತ್ತಿದ್ದಾರೆ. ವಿದೇಶದಿಂದ ಬಂದ ಅತಿಥಿಗಳನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ನಡೆಸಿಕೊಂಡ ರೀತಿಯ ಬಗ್ಗೆ ಅವರು ತೀವ್ರ ಬೇಸರ ಹೊರಹಾಕಿದ್ದಾರೆ. ಇತ್ತೀಚೆಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ತಾವು ಕಂಡ ಚಿತ್ರಣವನ್ನು ಅವರು ಸೋಷಿಯಲ್​ ಮೀಡಿಯಾ ಮೂಲಕ ವಿವರಿಸಿದ್ದಾರೆ. ದಯವಿಟ್ಟು ಭಾರತವನ್ನು ​ಕೆಟ್ಟ ರೀತಿಯಲ್ಲಿ ಬಿಂಬಿಸಬೇಡಿ ಎಂದು ಅವರು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

‘ರಾತ್ರಿ 1 ಗಂಟೆಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದೆ. ಆರ್​ಟಿಪಿಸಿಆರ್​ ಟೆಸ್ಟ್​ ಸಲುವಾಗಿ ಫಾರ್ಮ್​ ತುಂಬಲು ನೀಡಿದರು. ಎಲ್ಲ ಪ್ರಯಾಣಿಕರು ನೆಲದ ಮೇಲೆ ಕುಳಿತುಕೊಂಡು, ಗೋಡೆಗೆ ಒರಗಿಸಿಕೊಂಡು ಫಾರ್ಮ್​ ತುಂಬುತ್ತಿದ್ದರು. ಅದು ಸರಿ ಎನಿಸುವುದಿಲ್ಲ. ಕನಿಷ್ಠ ಟೇಬಲ್​ ಒದಗಿಸುವುದು ಸರಳ ಸೇವೆ’ ಎಂದು ರಾಜಮೌಳಿ ಟ್ವೀಟ್​ ಮಾಡಿದ್ದಾರೆ.

ವಿಮಾನ ನಿಲ್ದಾಣದ ಒಳಗೆ ಈ ಪರಿಸ್ಥಿತಿಯಾದರೆ ಹೊರಗೆ ಬೇರೆಯದೇ ವಾತಾವರಣ ಇದೆ. ವಿಮಾನ ನಿಲ್ದಾಣದಿಂದ ಹೊರಗೆ ಬರುವ ಗೇಟ್​ನಲ್ಲಿ ಅನೇಕ ಬೀದಿ ನಾಯಿಗಳು ಕಾಣಿಸಿಕೊಳ್ಳುತ್ತಿವೆ. ವಿದೇಶದಿಂದ ಬರುವ ಅತಿಥಿಗಳು ವಿಮಾನ ನಿಲ್ದಾಣದಲ್ಲೇ ಇಂಥ ವಾತಾವರಣವನ್ನು ನೋಡಿದರೆ ಭಾರತದ ಬಗ್ಗೆ ಒಳ್ಳೆಯ ಭಾವನೆ ಮೂಡುವುದಿಲ್ಲ. ದಯವಿಟ್ಟು ಈ ಬಗ್ಗೆ ಗಮನ ಹರಿಸಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ರಾಜಮೌಳಿ ಮನವಿ ಮಾಡಿಕೊಂಡಿದ್ದಾರೆ. ಈ ವಿಚಾರ ದೊಡ್ಡಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ಹಿಂದೆ ಅನೇಕ ಸೆಲೆಬ್ರಿಟಿಗಳು ಇಂಥ ಅನುಭವವನ್ನು ತೆರೆದಿಟ್ಟಿದ್ದರು.

ಸಿನಿಮಾ ವಿಚಾರಕ್ಕೆ ಬರುವುದಾದರೆ, ‘ಆರ್​ಆರ್​ಆರ್​’ ಚಿತ್ರದ ಶೂಟಿಂಗ್​ಗೆ ರಾಜಮೌಳಿ ಇತ್ತೀಚೆಗೆ ಮರು ಚಾಲನೆ ನೀಡಿದ್ದಾರೆ. ‘ಬಾಹುಬಲಿ’ ಬಳಿಕ ಅವರು ನಿರ್ದೇಶಿಸುತ್ತಿರುವ ಸಿನಿಮಾ ಇದಾಗಿರುವುದರಿಂದ ನಿರೀಕ್ಷೆ ಹೆಚ್ಚಿದೆ. ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ರಾಮ್​ ಚರಣ್​, ಜ್ಯೂ. ಎನ್​ಟಿಆರ್, ಆಲಿಯಾ ಭಟ್​, ಅಜಯ್​ ದೇವಗನ್​ ಮುಂತಾದವರು ನಟಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರತಂಡ ರಿಲೀಸ್​ ಮಾಡಿದ ಒಂದು ಪೋಸ್ಟರ್​ ಸಖತ್​ ವೈರಲ್​ ಆಗಿದೆ.

ಇದನ್ನೂ ಓದಿ:

ಮಹೇಶ್​ ಬಾಬು-ರಾಜಮೌಳಿ ಹೊಸ ಚಿತ್ರದಲ್ಲಿ ‘ಅವನೇ ಶ್ರೀಮನ್ನಾರಾಯಣ’ ಕಥೆ; ಏನಿದು ಹೊಸ ಗಾಸಿಪ್​?

ರಾಜಮೌಳಿ ತಂದೆ ಮೊಬೈಲ್​ ವಾಲ್​ಪೇಪರ್​ನಲ್ಲಿ ನಿರ್ದೇಶಕ ಪುರಿ ಜಗನ್ನಾಥ್ ಫೋಟೋ; ಕಾರಣ ಏನು?