ಆರ್ಆರ್ಆರ್ (RRR) ಸಿನಿಮಾ ಬಿಡುಗಡೆ ಆಗಿ ಒಂದು ವರ್ಷವಾಗಲು ಕೆಲವೇ ದಿನಗಳು ಬಾಕಿ ಇದೆ. ಇನ್ನಾದರೂ ಬೇರೆ-ಬೇರೆ ದೇಶಗಳಲ್ಲಿ ಸಿನಿಮಾವು ತುಂಬಿದ ಗೃಹಗಳ ಪ್ರದರ್ಶನ ಕಾಣುತ್ತಿದೆ. ಇತ್ತೀಚೆಗಷ್ಟೆ ಅಮೆರಿಕದಲ್ಲಿ ಮರು ಬಿಡುಗಡೆ ಆಗಿದ್ದ ಆರ್ಆರ್ಆರ್ ಸಿನಿಮಾ ಇದೀಗ ಭಾರತದ ಎರಡು ರಾಜ್ಯಗಳಲ್ಲಿ ಮರು ಬಿಡುಗಡೆಗೆ ಸಿದ್ಧವಾಗಿದೆ.
ಆರ್ಆರ್ಆರ್ ಸಿನಿಮಾವು ಆಂಧ್ರ ಪ್ರದೇಶ (Andhra Pradesh) ಹಾಗೂ ತೆಲಂಗಾಣಗಳಲ್ಲಿ (Telangana) ಮಾರ್ಚ್ 10 ರಂದು ಮರು ಬಿಡುಗಡೆ ಆಗಲಿದೆ. ಆಸ್ಕರ್ಗೆ ಎರಡು ದಿನ ಮುಂಚಿತವಾಗಿ ತೆಲುಗು ರಾಜ್ಯಗಳಲ್ಲಿ ಸಿನಿಮಾವನ್ನು ಮರುಬಿಡುಗಡೆ ಮಾಡಲಾಗುತ್ತಿದ್ದು, ಮರು ಬಿಡುಗಡೆಯಲ್ಲಿಯೂ ಕೋಟ್ಯಂತರ ಹಣ ಬಾಚುವ ನಿರೀಕ್ಷೆ ಇದೆ.
ಕಳೆದ ವರ್ಷ ಮಾರ್ಚ್ 25 ರಂದು ಆರ್ಆರ್ಆರ್ ಸಿನಿಮಾ ಮೊದಲ ಬಾರಿಗೆ ತೆಲುಗು ರಾಜ್ಯಗಳು ಸೇರಿದಂತೆ ವಿಶ್ವದಾದ್ಯಂತ ಬಿಡುಗಡೆ ಆಗಿತ್ತು. ಮೊದಲ ಬಿಡುಗಡೆಯಲ್ಲಿ ವಿಶ್ವದಾದ್ಯಂತ ಸುಮಾರು 1000 ಕೋಟಿ ಗಳಿಕೆ ಮಾಡಿತ್ತು ಈ ಸಿನಿಮಾ. ಅದಾದ ಬಳಿಕ ಚೀನಾ, ಜಪಾನ್ ಗಳಲ್ಲಿಯೂ ಬಿಡುಗಡೆ ಆಗಿ ದೊಡ್ಡ ಮೊತ್ತ ಕಲೆಹಾಕಿತು. ಕೆಲವು ದಿನಗಳ ಹಿಂದಷ್ಟೆ ಅಮೆರಿದಲ್ಲಿಯೂ ಈ ಸಿನಿಮಾ ಮರುಬಿಡುಗಡೆ ಕಂಡು ಸೂಪರ್ ಹಿಟ್ ಎನಿಸಿಕೊಂಡಿತು. ಈಗ ಆಂಧ್ರ-ತೆಲಂಗಾಣಗಳಲ್ಲಿಯೂ ಬಿಡುಗಡೆ ಆಗುತ್ತಿದೆ.
ಆರ್ಆರ್ಆರ್ ಸಿನಿಮಾದ ಆಸ್ಕರ್ ಕ್ಯಾಂಪೇನ್ಗೆ ಚಿತ್ರತಂಡವು ಭಾರಿ ದೊಡ್ಡ ಮೊತ್ತವನ್ನು ಖರ್ಚು ಮಾಡಿದೆ. ಸುಮಾರು 80 ಕೋಟಿ ಹಣವನ್ನು ಆಸ್ಕರ್ ಕ್ಯಾಂಪೇನ್ಗೆ ಚಿತ್ರತಂಡ ಖರ್ಚು ಮಾಡಿದ್ದು ಈ ಹಣವನ್ನು ಮರಳಿ ಖಾತೆಗೆ ಪಡೆಯಲು ಈಗ ರೀ ರಿಲೀಸ್ ಮಾಡಲಾಗುತ್ತಿದೆ ಎಂಬ ಮಾತುಗಳು ಚಾಲ್ತಿಯಲ್ಲಿವೆ.
ಆರ್ಆರ್ಆರ್ ಸಿನಿಮಾದ ನಾಟು-ನಾಟು ಹಾಡು ಆಸ್ಕರ್ಗೆ ನಾಮಿನೇಟ್ ಆಗಿದ್ದು ಮಾರ್ಚ್ 12 ರಂದು ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ನಾಟು-ನಾಟುಗೆ ಪ್ರಶಸ್ತಿ ಬರುವ ನಿರೀಕ್ಷೆ ಇದೆ. ಇದೇ ಸಂದರ್ಭದಲ್ಲಿ ಸಿನಿಮಾದ ಮರುಬಿಡುಗಡೆ ಮಾಡಲು ಯೋಜಿಸಿ ಬುದ್ಧಿವಂತಿಕೆ ಮೆರಿದಿದೆ ಚಿತ್ರತಂಡ.
ಆರ್ಆರ್ಆರ್ ಸಿನಿಮಾವು ತೆಲುಗು ರಾಜ್ಯಗಳ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಹಾಗೂ ಕೋಮರಂ ಭೀಮ್ ಅವರುಗಳ ಕುರಿತಾದ ಕಾಲ್ಪನಿಕ ಕತೆ ಒಳಗೊಂಡಿದೆ. ಸಿನಿಮಾದಲ್ಲಿ ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್ ಚರಣ್ ತೇಜ, ಕೋಮರಮ್ ಭೀಮ್ ಪಾತ್ರದಲ್ಲಿ ಜೂ ಎನ್ಟಿಆರ್ ನಟಿಸಿದ್ದಾರೆ. ಆಲಿಯಾ ಭಟ್, ಶ್ರಿಯಾ ಶಿರಿನ್, ಅಜಯ್ ದೇವಗನ್, ಮಕರಂದ್ ದೇಶ್ಪಾಂಡೆ, ಸಮುದ್ರಕಿಣಿ ಇನ್ನು ಹಲವು ಪ್ರಮುಖ ನಟರು ಸಿನಿಮಾದಲ್ಲಿದ್ದಾರೆ. ರಾಜಮೌಳಿ ನಿರ್ದೇಶನ ಮಾಡಿರುವ ಈ ಸಿನಿಮಾಕ್ಕೆ ಕೀರವಾಣಿ ಸಂಗೀತ ನೀಡಿದ್ದಾರೆ.