AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Oscars 2023: ಆಸ್ಕರ್ ಗೆದ್ದವರಿಗೆ ಎಷ್ಟು ಹಣ ಸಿಗುತ್ತದೆ? ಆಸ್ಕರ್ ಪ್ರಶಸ್ತಿಯ ಮೌಲ್ಯ ಎಷ್ಟು?

ಆಸ್ಕರ್ ಪ್ರಶಸ್ತಿ ಗೆದ್ದವರಿಗೆ ನಗದು ಬಹುಮಾನ ಸಿಗುತ್ತದೆಯೇ? ಸಿಗುವುದಾದರೆ ಎಷ್ಟು? ಬಂಗಾರದ ಬಣ್ಣದ ಆಸ್ಕರ್ ಪ್ರಶಸ್ತಿಯ ಮೌಲ್ಯವೆಷ್ಟು? ಪ್ರಶಸ್ತಿ ನಿರ್ಮಾಣ ಮಾಡಲು ತಗಲುವ ವೆಚ್ಚವೆಷ್ಟು? ಇಲ್ಲಿ ತಿಳಿಯಿರಿ...

Oscars 2023: ಆಸ್ಕರ್ ಗೆದ್ದವರಿಗೆ ಎಷ್ಟು ಹಣ ಸಿಗುತ್ತದೆ? ಆಸ್ಕರ್ ಪ್ರಶಸ್ತಿಯ ಮೌಲ್ಯ ಎಷ್ಟು?
ಆಸ್ಕರ್
Follow us
ಮಂಜುನಾಥ ಸಿ.
|

Updated on: Mar 09, 2023 | 4:08 PM

ಆಸ್ಕರ್ 2023 (Oscar 2023) ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಇನ್ನೆರಡು ದಿನವಷ್ಟೆ ಬಾಕಿ ಇದೆ. ಮಾರ್ಚ್ 12 ರಂದು ಅಮೆರಿಕದ ಲಾಸ್ ಏಂಜಲ್ಸ್ ನ ಡಾಲ್ಬಿ ಥಿಯೇಟರ್​ನಲ್ಲಿ ಆಸ್ಕರ್ ಪ್ರಶಸ್ತಿ ಸಮಾರಂಭ ನಡೆಯಲಿದೆ. ಭಾರತದಿಂದ ಒಂದು ಸಿನಿಮಾ ಎರಡು ಡಾಕ್ಯುಮೆಂಟರಿಗಳು ಈ ಬಾರಿ ಆಸ್ಕರ್​ಗೆ ನಾಮಿನೇಟ್ ಆಗಿದ್ದು ಮೂರೂ ವಿಭಾಗಗಳಲ್ಲಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಇದೆ.

ಮನೊರಂಜನಾ ಕ್ಷೇತ್ರದ ವಿಶ್ವದ ಅತ್ಯುನ್ನತ ಪ್ರಶಸ್ತಿಯೆಂದು ಆಸ್ಕರ್ ಅನ್ನು ಪರಿಗಣಿಸಲಾಗುತ್ತದೆ. ಹಾಗಿದ್ದರೆ ಆಸ್ಕರ್​ ಗೆದ್ದವರಿಗೆ ಬಹುಮಾನವಾಗಿ ಹಣ ಸಿಗುತ್ತದೆಯೇ? ಸಿಗುವುದಾದರೆ ಎಷ್ಟು ಸಿಗುತ್ತದೆ? ಬಂಗಾರದ ಬಣ್ಣದಲ್ಲಿ ಹೊಳೆಯುವ ಆಸ್ಕರ್ ಪ್ರಶಸ್ತಿಯ ಮೌಲ್ಯ ಎಷ್ಟು? ಇತ್ಯಾದಿ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಸಾಮಾನ್ಯವಾಗಿ ಉನ್ನತ ಪ್ರಶಸ್ತಿಗೆ ಭಾಜನರಾದವರಿಗೆ ನಗದು, ನಿವೇಶನಗಳನ್ನು ನೀಡುವ ಸಂಪ್ರದಾಯವಿದೆ. ಆದರೆ ಆಸ್ಕರ್ ಗೆದ್ದವರಿಗೆ ಪ್ರಶಸ್ತಿಯ ಹೊರತಾಗಿ ಇನ್ನೇನನ್ನೂ ನೀಡಲಾಗುವುದಿಲ್ಲ. ಆದರೆ ಆಸ್ಕರ್ ಪ್ರಶಸ್ತಿ ಪಡೆದವರಿಗೆ ಅದರಿಂದ ಆಗುವ ಲಾಭ ದೊಡ್ಡದು. ಆಸ್ಕರ್ ಗೆದ್ದವರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಕುದುರುತ್ತದೆ. ನಟ-ನಟಿಯರಿಗೆ ಹೆಚ್ಚು ಹೆಚ್ಚು ಅವಕಾಶಗಳು ಲಭಿಸುತ್ತದೆ. ಸಂಭಾವನೆಯಲ್ಲಿ ಕನಿಷ್ಟವೆಂದರೂ 20% ಏರಿಕೆಯಾಗುತ್ತದೆ. ಆಸ್ಕರ್ ಗೆದ್ದ ಸಿನಿಮಾದ ನಿರ್ಮಾಣ ಸಂಸ್ಥೆಯ ಸಿನಿಮಾಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚುತ್ತದೆ. ಒಟಿಟಿಗಳು ಅವರ ಸಿನಿಮಾಗಳನ್ನು ಕೊಳ್ಳಲು ಮುಗಿ ಬೀಳುತ್ತವೆ. ನಿರ್ದೇಶಕರಿಗೂ ಸಹ ಭಾರಿ ದೊಡ್ಡ ಮಟ್ಟದ ಬೇಡಿಕೆ ಉಂಟಾಗುತ್ತದೆ. ಅವರ ಮಾರುಕಟ್ಟೆ ಮೌಲ್ಯ ಕನಿಷ್ಟ ಐದು ಪಟ್ಟು ಹೆಚ್ಚಾಗುತ್ತದೆ.

ಇದನ್ನೂ ಓದಿ: Oscar Moments: ಆಸ್ಕರ್​ನ ಅಚ್ಛಳಿಯದ ಆ ಐದು ಘಟನೆಗಳು

ಆಸ್ಕರ್ ಪ್ರಶಸ್ತಿಯನ್ನಾಗಿ 13.5 ಇಂಚು ಎತ್ತರದ ಬಂಗಾರದ ಬಣ್ಣದ ಮೂರ್ತಿಯೊಂದನ್ನು ನೀಡಲಾಗುತ್ತದೆ. ತಲೆ ಮೇಲೆ ಕೂದಲು ಇಲ್ಲದ ಬೆತ್ತಲೆ ವ್ಯಕ್ತಿಯೊಬ್ಬ ಕತ್ತಿಯೊಂದನ್ನು ಹಿಡಿದುಕೊಂಡಿರುವ ಮೂರ್ತಿಯದು. ಈ ಮೂರ್ತಿಯ ಮೌಲ್ಯವಾದರೂ ಬಹಳ ದೊಡ್ಡ ಮೊತ್ತದಲ್ಲಿದೆಯೇ ಎಂದರೆ ಅದೂ ಇಲ್ಲ. ಈ ಮೂರ್ತಿಯ ಮೌಲ್ಯ ಕೇವಲ ಒಂದು ಡಾಲರ್ ಅಂದರೆ ಭಾರತದ ರೂಪಾಯಿ ಲೆಕ್ಕದಲ್ಲಿ 82 ರುಪಾಯಿಗಳಷ್ಟೆ! ನಿರ್ಮಾಣ ವೆಚ್ಚಕ್ಕಿಂತಲೂ ಬಹಳ ಕಡಿಮೆ ಇದರ ಮಾರುಲಕಟ್ಟೆ ಮೌಲ್ಯವಿದೆ. ಇದಕ್ಕೆ ಕಾರಣವೂ ಇದೆ.

ಆಸ್ಕರ್ ಗೆದ್ದವರು ಅದನ್ನು ಮಾರಾಟ ಮಾಡುವ ಸಾಧ್ಯತೆ ಇದೆ ಅದು ಸಾಧ್ಯವಾಗದಂತೆ ತಡೆಯಲು ಆಸ್ಕರ್ ವಿತರಿಸುವ ಅಕಾಡೆಮಿ ಆಪ್ ಮೋಷನ್ ಫಿಕ್ಚರ್ಸ್ ಆರ್ಟ್ ಸೈನ್ಸ್ ಸಂಸ್ಥೆಯು ಆಸ್ಕರ್ ವಿಜೇತರು ಪ್ರಶಸ್ತಿಯನ್ನು ಮಾರುವುದಿದ್ದರೆ ಅದನ್ನು ಅಕಾಡೆಮಿ ಆಫ್ ಮೋಷನ್ ಗೆ ಕೇವಲ ಒಂದು ಡಾಲರ್ ಬೆಲೆಯಲ್ಲಿ ಮಾರಬೇಕೆಂದು ನಿಯಮ ಹೇರಿ ಒಪ್ಪಂದಕ್ಕೆ ಸಹಿ ಮಾಡಿಸಿಕೊಳ್ಳುತ್ತದೆ. ಆದರೆ ಪ್ರತಿ ಒಂದು ಆಸ್ಕರ್ ಮೂರ್ತಿಯನ್ನು ಮಾಡಲು ನಿರ್ಮಾಣ ವೆಚ್ಚ ತಲಾ ಒಂದಕ್ಕೆ 400 ಡಾಲರ್ ಭಾರತದ ರುಪಾಯಿ ಲೆಕ್ಕದಲ್ಲಿ 32,813 ರುಪಾಯಿ ಖರ್ಚಾಗುತ್ತದೆ. ಈ ವರ್ಷ 24 ಆಸ್ಕರ್ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಆದರೆ ಸುಮಾರು 50 ಆಸ್ಕರ್ ಮೂರ್ತಿಗಳನ್ನು ನಿರ್ಮಾಣ ಮಾಡಿರುತ್ತದೆ ಅಕಾಡೆಮಿ ಮೋಷನ್ ಸಂಸ್ಥೆ.