ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ‘ಗಂಗೂಬಾಯಿ ಕಾಠಿವಾಡಿ’ಗೆ ನಾಲ್ಕು ಪ್ರಶಸ್ತಿ, ‘ಆರ್​ಆರ್​ಆರ್​’ಗೆ ಸಿಕ್ಕಿದ್ದೆಷ್ಟು?

|

Updated on: Aug 24, 2023 | 9:09 PM

69 National Film Award: ಆಲಿಯಾ ಭಟ್ ನಟನೆಯ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾಕ್ಕೆ ನಾಲ್ಕು ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ದೊರಕಿದೆ. ಆಸ್ಕರ್​ವರೆಗೂ ಹೋಗಿ ಪ್ರಶಸ್ತಿ ಗೆದ್ದು ಬಂದ 'ಆರ್​ಆರ್​ಆರ್' ಸಿನಿಮಾಕ್ಕೆ ಎಷ್ಟು ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿತು?

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಗಂಗೂಬಾಯಿ ಕಾಠಿವಾಡಿಗೆ ನಾಲ್ಕು ಪ್ರಶಸ್ತಿ, ಆರ್​ಆರ್​ಆರ್​ಗೆ ಸಿಕ್ಕಿದ್ದೆಷ್ಟು?
ಗಂಗೂಬಾಯಿ ಕಾಠಿಯಾವಾಡಿ-ಆರ್​ಆರ್​ಆರ್
Follow us on

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2023 (National Film Awards) ಘೋಷಣೆ ಆಗಿದೆ. 2021ರಲ್ಲಿ ಬಿಡುಗಡೆ ಆದ ಅಥವಾ ಸೆನ್ಸಾರ್ ಆದ ಸಿನಿಮಾಗಳನ್ನಷ್ಟೆ ಪ್ರಶಸ್ತಿಗೆ ಪರಿಗಣಿಸಲಾಗಿತ್ತು. ಹೀಗಾಗಿ 2022ರಲ್ಲಿ ಬಿಡುಗಡೆ ಆದರೂ, 2021ರಲ್ಲೇ ಸೆನ್ಸಾರ್ ಆಗಿದ್ದ ‘ಆರ್​ಆರ್​ಆರ್‘ (RRR) ಸಿನಿಮಾ ಪ್ರಶಸ್ತಿಗೆ ಪರಿಗಣಿತವಾಗಿತ್ತು. ಈ ಬಾರಿ ಪ್ರಶಸ್ತಿ ಘೋಷಣೆಗೆ ಮುಂಚೆ ಎಲ್ಲರ ನಿರೀಕ್ಷೆಗಳು ‘ಆರ್​ಆರ್​ಆರ್’ ಮೇಲಿತ್ತು. ಆಸ್ಕರ್ ಗೆದ್ದು ಬಂದಿರುವ ಸಿನಿಮಾ, ಸ್ಟಿಫನ್ ಸ್ಪೀಲ್​ಬರ್ಗ್, ಜೇಮ್ಸ್ ಕ್ಯಾಮರನ್ ಅಂಥಹಾ ವಿಶ್ವ ದಿಗ್ಗಜರು ಮೆಚ್ಚಿ ಕೊಂಡಾಡಿದ ಸಿನಿಮಾ, ರಾಷ್ಟ್ರ ಮಟ್ಟದಲ್ಲಿ ಎಷ್ಟು ಪ್ರಶಸ್ತಿ ಗೆಲ್ಲಲಿದೆ ಎಂಬುದು ಎಲ್ಲರ ಕುತೂಹಲ ಕೆರಳಿಸಿತ್ತು.

ಅಂತೆಯೇ ‘ಆರ್​ಆರ್​ಆರ್’ ಸಿನಿಮಾ ಆರು ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದಿದೆ. ಅತ್ಯುತ್ತಮ ಮನೊರಂಜನಾ ಸಿನಿಮಾ ವಿಭಾಗದಲ್ಲಿ ‘ಆರ್​ಆರ್​ಆರ್​’ಗೆ ಪ್ರಶಸ್ತಿ ದೊರಕಿದೆ. ಅತ್ಯುತ್ತಮ ಗಾಯಕ ವಿಭಾಗದಲ್ಲಿ ಕಾಲ ಭೈರವಗೆ ‘ಆರ್​ಆರ್​ಆರ್​’ ಸಿನಿಮಾದ ‘ಕೋಮರಂ ಭೀಮುಡೋ’ ಹಾಡಿಗೆ ಪ್ರಶಸ್ತಿ ದೊರಕಿದೆ. ಅತ್ಯುತ್ತಮ ಸಂಗೀತ ವಿಭಾಗದಲ್ಲಿ ‘ಆರ್​ಆರ್​ಆರ್’ ಸಿನಿಮಾದ ಸಂಗೀತ ನಿರ್ದೇಶಕ ಎಂಎಂ ಕೀರವಾಣಿಗೆ ಹಿನ್ನೆಲೆ ಸಂಗೀತಕ್ಕೆ ಪ್ರಶಸ್ತಿ ದೊರಕಿದೆ. ಆದರೆ ಅತ್ಯುತ್ತಮ ಹಾಡುಗಳು ಪ್ರಶಸ್ತಿ ದೇವಿಶ್ರೀಪ್ರಸಾದ್ ಪಾಲಾಗಿದೆ.

ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ಸ್ ವಿಭಾಗದಲ್ಲಿ ‘ಆರ್​ಆರ್​ಆರ್’ ಸಿನಿಮಾಕ್ಕೆ ಕೆಲಸ ಮಾಡಿರುವ ವಿ ಶ್ರೀನಿವಾಸ್​ಗೆ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ಡ್ಯಾನ್ಸ್ ಕೊರಿಯೋಗ್ರಫಿ ವಿಭಾಗದಲ್ಲಿ ‘ನಾಟು ನಾಟು’ ಹಾಡಿಗೆ ನೃತ್ಯ ಸಂಯೋಜಿಸಿರುವ ಪ್ರೇಮ್ ರಕ್ಷಿತ್​ಗೆ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ಆಕ್ಷನ್ ಕೊರಿಯೋಗ್ರಫಿ ಅಥವಾ ಫೈಟ್ ಡೈರೆಕ್ಷನ್ ವಿಭಾಗದಲ್ಲಿ ‘ಆರ್​ಆರ್​ಆರ್​’ ಸಿನಿಮಾಕ್ಕೆ ಅದ್ಭುತ ಫೈಟ್​ಗಳನ್ನು ನಿರ್ದೇಶಿಸಿರುವ ಕಿಂಗ್ ಸೋಲೊಮನ್​ಗೆ ಪ್ರಶಸ್ತಿ ಲಭಿಸಿದೆ. ಆಸ್ಕರ್ ಗೆದ್ದಿದ್ದ ‘ನಾಟು ನಾಟು’ ಹಾಡಿಗೆ ಯಾವುದೇ ಪ್ರಶಸ್ತಿ ಲಭಿಸಿಲ್ಲ. ಹಾಡಿಗೆ ನೃತ್ಯ ಸಂಯೋಜನೆ ಮಾಡಿದ ಪ್ರೇಮ್​ ರಕ್ಷಿತ್​ಗೆ ಪ್ರಶಸ್ತಿ ಲಭಿಸಿದೆ.

ಇದನ್ನೂ ಓದಿ:69th National Film Awards 2023: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಇಲ್ಲಿದೆ ಪಟ್ಟಿ

ನಟನೆ, ನಿರ್ದೇಶನ, ಎಡಿಟಿಂಗ್, ಪ್ರೊಡಕ್ಷನ್ ಡಿಸೈನ್ ವಿಭಾಗದಲ್ಲಿ ‘ಆರ್​ಆರ್​ಆರ್​’ ಸಿನಿಮಾ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಹುಟ್ಟಿಸಿತ್ತು ಆದರೆ ಅದು ಸಾಧ್ಯವಾಗಿಲ್ಲ. ಅಂತೆಯೇ ತೆಲುಗಿನ ‘ಪುಷ್ಪ’ ಸಿನಿಮಾ ಎರಡು ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ. ಅತ್ಯುತ್ತಮ ನಟ ಪ್ರಶಸ್ತಿ ‘ಪುಷ್ಪ’ ಸಿನಿಮಾದ ನಾಯಕ ಅಲ್ಲು ಅರ್ಜುನ್ ಪಾಲಾದರೆ, ಅತ್ಯುತ್ತಮ ಹಾಡುಗಳು ವಿಭಾಗದಲ್ಲಿ ದೇವಿಶ್ರೀ ಪ್ರಸಾದ್​ಗೆ ಪ್ರಶಸ್ತಿ ಲಭಿಸಿದೆ.

ಹಿಂದಿಯ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ನಾಲ್ಕು ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ. ಅತ್ಯುತ್ತಮ ನಟಿಯಾಗಿ ಆಲಿಯಾ ಭಟ್ ಪ್ರಶಸ್ತಿ ಗೆದ್ದಿದ್ದರೆ, ಅತ್ಯುತ್ತಮ ಚಿತ್ರಕತೆ ಹಾಗೂ ಎಡಿಟಿಂಗ್ ವಿಭಾಗದಲ್ಲಿ ಸಂಜಯ್ ಲೀಲಾ ಬನ್ಸಾಲಿ ಪ್ರಶಸ್ತಿ ಗೆದ್ದಿದ್ದಾರೆ. ಜೊತೆಗೆ ಸಿನಿಮಾದ ಮೇಕಪ್ ಕಲಾವಿದರು ಅತ್ಯುತ್ತಮ ಮೇಕಪ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:59 pm, Thu, 24 August 23