ಬಹುಭಾಷಾ ನಟಿ ಸಮಂತಾಗೆ (Samantha) ಇಂದು ಜನ್ಮದಿನದ ಸಂಭ್ರಮ. 35 ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ಸದ್ಯ ವಿಜಯ್ ದೇವರಕೊಂಡ ಜತೆಗಿನ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಕಾಶ್ಮೀರದಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಸಮಂತಾ ಭಾಗಿಯಾಗಿದ್ದಾರೆ. ಇತ್ತೀಚೆಗೆ ಸಮಂತಾ ವೃತ್ತಿಜೀವನದ ವಿಚಾರಕ್ಕೆ ಎರಡು ವಿಷಯದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದವರು. ಮೊದಲನೆಯದು, ‘ಪ್ಯಾಮಿಲಿ ಮ್ಯಾನ್ 2’ ಸರಣಿಯಲ್ಲಿ ಸಮಂತಾ ಬಣ್ಣಹಚ್ಚಿದ್ದು, ಅದು ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು. ಇದರಿಂದ ನಟಿಯ ಕೀರ್ತಿ ತೆಲುಗು ಭಾಷಾಯಾಚೆಗೆ ಹಬ್ಬಿತ್ತು. ಎರಡನೆಯದು, ‘ಪುಷ್ಪ: ದಿ ರೈಸ್’ ಚಿತ್ರದಲ್ಲಿ ‘ಊ ಅಂಟಾವಾ’ ಹಾಡಿಗೆ ಹೆಜ್ಜೆಹಾಕಿದ್ದು. ಇದೂ ಕೂಡ ಹಿಟ್ ಆಗಿದ್ದಲ್ಲದೇ ಹೊಸ ಟ್ರೆಂಡ್ ಸೃಷ್ಟಿಸಿತ್ತು. ಸಮಂತಾರೇ ಒಮ್ಮೆ ಮಾತನಾಡುತ್ತಾ, ಈ ಹಾಡಿನ ಕ್ರೇಜ್ ನಿಂದಾಗಿ ಜನರು ತಮ್ಮ ಹಳೆಯ ಚಿತ್ರಗಳನ್ನು ಮರೆತೇ ಬಿಟ್ಟಿದ್ದಾರೆ ಎಂದಿದ್ದರು. ಸಮಂತಾ ಈ ಹಿಂದೆಯೂ ತಮ್ಮ ಪಾತ್ರಗಳಿಂದಲೇ ಅಭಿಮಾನಿಗಳ ಮನಗೆದ್ದಿದ್ದವರು. ಈ ಹಿಂದಿನ ಯಾವೆಲ್ಲಾ ಚಿತ್ರಗಳಲ್ಲಿ ನಟಿಯ ಪಾತ್ರನಿರ್ವಹಣೆ ಅದ್ಭುತವಾಗಿದೆ ಎಂಬ ಕುತೂಹಲ ನಿಮಗಿದ್ದರೆ ಉತ್ತರ ಇಲ್ಲಿದೆ.
‘ಯೇ ಮಾಯಾ ಚೇಸಾವೇ’ (2010):
2010ರಲ್ಲಿ ಬೆಳ್ಳಿತೆರೆಗೆ ಕಾಲಿಟ್ಟಿದ್ದ ಸಮಂತಾ ಮೊದಲು ನಟಿಸಿದ್ದು ‘ಯೇ ಮಾಯಾ ಚೇಸಾವೇ’ ಚಿತ್ರದಲ್ಲಿ. ಮಾಜಿ ಪಾತಿ ನಾಗ ಚೈತನ್ಯ ಹಾಗೂ ಸಮಂತಾರ ಸ್ನೇಹ ಕುಡಿಯೊಡೆದಿದ್ದೂ ಇದೇ ಸಮಯದಲ್ಲಿ. ಗೌತಮ್ ವಾಸುದೇವ ಮೆನನ್ ನಿರ್ದೇಶನದ ಈ ಚಿತ್ರ ಹಿಟ್ ಆಗಿದ್ದಲ್ಲದೇ ನಟಿಗೆ ಅಪಾರ ಜನಪ್ರಿಯತೆಯನ್ನೂ ತಂದುಕೊಟ್ಟಿತ್ತು. ಇದರಿಂದ ಸಮಂತಾಗೆ ಸ್ಟಾರ್ ನಟರ ಜತೆ ಬಣ್ಣಹಚ್ಚುವ ಅವಕಾಶ ದೊರೆಯಿತು.
ಮಜಿಲಿ (2019):
ನಾಗ ಚೈತನ್ಯ ಹಾಗೂ ಸಮಂತಾ ನಟಿಸಿದ್ದ ‘ಮಜಿಲಿ’ 2019ರಲ್ಲಿ ತೆರೆಕಂಡಿತ್ತು. ಶಿವ ನಿರ್ವಾಣ ಆಕ್ಷನ್ ಕಟ್ ಹೇಳಿದ್ದರು. ಇದೂ ಕೂಡ ಹಿಟ್ ಆಗಿದ್ದಲ್ಲದೇ, ಸಮಂತಾ- ನಾಗ ಚೈತನ್ಯ ಜೋಡಿ ಮತ್ತೆ ತೆರೆಯ ಮೇಲೆ ಮೋಡಿ ಮಾಡಿದ್ದರು.
ಜಾನು (2020):
ತಮಿಳಿನ ‘96’ ಚಿತ್ರದ ರಿಮೇಕ್ ‘ಜಾನು’. ಶರ್ವಾನಂದ್ ಜತೆ ಸಮಂತಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಮೂಲದಲ್ಲಿ ತ್ರಿಷಾ ನಟಿಸಿದ್ದ ಪಾತ್ರಕ್ಕೆ ಸಮಂತಾ ಬಣ್ಣಹಚ್ಚಿದ್ದರು. ರಿಮೇಕ್ ಆಗಿದ್ದರೂ ಕೂಡ ಸಮಂತಾ ತಮ್ಮ ನಟನೆಯಿಂದ ಮೆಚ್ಚುಗೆ ಗಳಿಸಿದ್ದರು.
ಸೂಪರ್ ಡಿಲಕ್ಸ್ (2019):
ತಮಿಳಿನ ಈ ಚಿತ್ರ ಸಮಂತಾ ನಟನಾ ಕೌಶಲ್ಯವನ್ನು ಜನರಿಗೆ ಸಾರಿದ ಚಿತ್ರ ಎನ್ನಬಹುದು. ಚಿತ್ರದಲ್ಲಿ ಫಹಾದ್ ಫಾಸಿಲ್ ಪತ್ನಿಯ ಪಾತ್ರದಲ್ಲಿ ಸಮಂತಾ ನಟಿಸಿದ್ದರು. ವಿಜಯ್ ಸೇತುಪತಿ ಸೇರಿದಂತೆ ದೊಡ್ಡ ತಾರಾಗಣದ ಈ ಚಿತ್ರ ಸೂಪರ್ ಹಿಟ್ ಆಗಿತ್ತು.
ಓಹ್ ಬೇಬಿ (2019):
ಸಮಂತಾಗೆ ತೆಲುಗಿನ ಲೇಡಿ ಸೂಪರ್ಸ್ಟಾರ್ ಎಂಬ ಬಿರುದು ಸಿಕ್ಕಿದ್ದು ‘ಓಹ್ ಬೇಬಿ’ ಚಿತ್ರದಿಂದ. ಕಾಮಿಡಿ ಜಾನರ್ನ ಈ ಚಿತ್ರ ಕೊರಿಯನ್ ಭಾಷೆಯ ‘ಮಿಸ್ ಗ್ರ್ಯಾನಿ’ ರಿಮೇಕ್ ಆಗಿತ್ತು. ಈ ಚಿತ್ರದ ಪಾತ್ರಪೋಷಣೆಗೆ ಸಮಂತಾ ಅಪಾರ ಮೆಚ್ಚುಗೆ ಗಳಿಸಿದರು.
ರಂಗಸ್ಥಳಂ (2018):
ಸಮಂತಾ ಹಲವು ಕಮರ್ಷಿಯಲ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ‘ಈಗ’, ‘ದೂಕುಡು’, ‘ಅತ್ತಾರಿಂಟಿಕಿ ದಾರೇದಿ’ ಮೊದಲಾದ ಚಿತ್ರಗಳಲ್ಲಿ ನಟಿಯ ಅಭಿನಯ ಮೆಚ್ಚುಗೆ ಗಳಿಸಿತ್ತು. ಆದರೆ ರಾಮ್ ಚರಣ್ ನಟನೆಯ ‘ರಂಗಸ್ಥಳಂ’ ಚಿತ್ರದಲ್ಲಿ ಸಮಂತಾ ಹಳ್ಳಿಹುಡುಗಿಯ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದರು. ಸುಕುಮಾರ್ ನಿರ್ದೇಶನದ ಈ ಚಿತ್ರ ಬಾಕ್ಸಾಫೀಸ್ನಲ್ಲಿ ದೊಡ್ಡ ಹಿಟ್ ಆಗಿತ್ತು.
ಇವುಗಳಲ್ಲದೇ ಸಮಂತಾ ‘ಮನಂ’, ‘ಮಹಾನಟಿ’, ‘ಯು-ಟರ್ನ್’ (ತೆಲುಗು), ಸನ್ ಆಫ್ ಸತ್ಯಮೂರ್ತಿ, ‘ಅ ಆ’ ಮೊದಲಾದ ಚಿತ್ರಗಳಲ್ಲಿನ ನಟನೆಯಿಂದ ಅಭಿಮಾನಿಗಳ ಮನಗೆದ್ದಿದ್ದಾರೆ.
ಇದನ್ನೂ ಓದಿ: Samantha Birthday: ಸಮಂತಾ ಜನ್ಮದಿನ: ಮದುವೆ, ವಿಚ್ಛೇದನ ಏನೇ ಆದ್ರೂ ಕಮ್ಮಿ ಆಗಿಲ್ಲ ಈ ನಟಿಯ ಚಾರ್ಮ್; ಕಾರಣವೇನು?
ಆಹಾರಕ್ಕಿಂತಲೂ ನನಗೆ ಸೆಕ್ಸ್ ಮುಖ್ಯ ಎಂದು ಹೇಳಿದ್ದ ಸಮಂತಾ; ವಿಡಿಯೋ ಮತ್ತೆ ವೈರಲ್