ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರಿಗೆ ಅನಾರೋಗ್ಯ ಮುಂದುವರಿದಿದೆ. ಅದೇ ಕಾರಣಕ್ಕಾಗಿ ಅವರು ಸಿನಿಮಾ ಕೆಲಸಗಳಿಂದ ದೀರ್ಘ ಬ್ರೇಕ್ ಪಡೆದುಕೊಂಡಿದ್ದಾರೆ. ಈ ವರ್ಷ ಅವರು ನಟಿಸಿದ ‘ಖುಷಿ’ ಸಿನಿಮಾ ಬಿಡುಗಡೆ ಆಯಿತು. ಆ ಸಿನಿಮಾದ ಪ್ರಚಾರ ಕಾರ್ಯದಲ್ಲೂ ಅವರು ಹೆಚ್ಚಾಗಿ ಭಾಗವಹಿಸಲಿಲ್ಲ. ಆದಷ್ಟು ಬೇಗ ಸಮಂತಾ ರುತ್ ಪ್ರಭು ಅವರು ಗುಣಮುಖರಾಗಿ ಬರಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಆದರೆ ಅದು ಸದ್ಯಕ್ಕಂತೂ ನೆರವೇರುವಂತೆ ಕಾಣುತ್ತಿಲ್ಲ. ಯಾಕೆಂದರೆ, ಸಮಂತಾ (Samantha) ಅವರು ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಒಂದು ಫೋಟೋ ವೈರಲ್ ಆಗಿದೆ.
ಸಮಂತಾ ರುತ್ ಪ್ರಭು ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಡ್ರಿಪ್ಸ್ ಹಾಕಲಾಗಿದೆ. ಈ ಸಂದರ್ಭದ ಫೋಟೋವನ್ನು ಸ್ವತಃ ಸಮಂತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮಗೆ ಎದುರಾದ ಆರೋಗ್ಯದ ಸಮಸ್ಯೆಗೆ ಯಾವೆಲ್ಲ ರೀತಿಯ ಚಿಕಿತ್ಸೆ ಪಡೆಯಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಸಮಂತಾ ಅವರಿಗೆ ಮಯೋಸೈಟಿಸ್ ಕಾಯಿಲೆ ಇದೆ. ಅದಕ್ಕೆ ಅವರು ಹಲವು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಅವರ ಸಿನಿಮಾ ಕೆಲಸಗಳಿಗೆ ತೊಂದರೆ ಆಗಿದೆ.
ಇದನ್ನೂ ಓದಿ: ನಾಗ ಚೈತನ್ಯ ಸಹಿಯ ಟ್ಯಾಟೂ ತೆಗೆಸಿದ ಸಮಂತಾ; ದೀಪಿಕಾ, ನಯನತಾರಾ ಹಾದಿಯಲ್ಲಿ ಸ್ಯಾಮ್
ಒಂದಷ್ಟು ತಿಂಗಳ ಕಾಲ ಸಮಂತಾ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದರು. ಅದರಿಂದ ಅವರ ಆರೋಗ್ಯ ಹದಗೆಟ್ಟಿತು. ಬಳಿಕ ಚಿಕಿತ್ಸೆ ಪಡೆದು, ಸ್ಪಲ್ಪ ಚೇತರಿಸಿಕೊಂಡು ಬಂದಿದ್ದರು. ಮತ್ತೆ ಕಠಿಣವಾದ ದೈಹಿಕ ಶ್ರಮ ಬೇಡುವಂತಹ ತರಬೇತಿಯನ್ನು ಅವರು ಪಡೆದುಕೊಂಡಿದ್ದರು. ಆ ಸಂದರ್ಭದ ಫೋಟೋ ಮತ್ತು ವಿಡಿಯೋಗಳನ್ನು ಅವರು ಹಂಚಿಕೊಂಡಿದ್ದರು. ಇದರಿಂದ ಮತ್ತೆ ಅವರು ಆರೋಗ್ಯ ಕೆಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹಲವರು ಊಹಿಸಿದ್ದರು. ಈಗ ಹಾಗೆಯೇ ಆಗಿದೆ. ‘ಖುಷಿ’ ಸಿನಿಮಾ ಮತ್ತು ‘ಸಿಟಾಡೆಲ್’ ವೆಬ್ ಸಿರೀಸ್ನ ಭಾರತದ ವರ್ಷನ್ ಶೂಟಿಂಗ್ ಬಳಿಕ ಸಮಂತಾಗೆ ಆರೋಗ್ಯ ಕೈಕೊಟ್ಟಿತು.
ಇದನ್ನೂ ಓದಿ: ಈ ನಾಯಿಗಾಗಿ ಸಮಂತಾ-ನಾಗಚೈತನ್ಯ ಒಂದಾಗಬೇಕು ಎಂದು ಬೇಡಿಕೆ ಇಟ್ಟ ಅಭಿಮಾನಿಗಳು
ಸದ್ಯಕ್ಕಂತೂ ಸಮಂತಾ ರುತ್ ಪ್ರಭು ಅವರು ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಈ ಬಾರಿ ಅವರು ಚಿಕಿತ್ಸೆಗಾಗಿ ಹಲವು ತಿಂಗಳ ಕಾಲ ಸಮಯ ಮೀಸಲಿಟ್ಟಿದ್ದಾರೆ. ಸಂಪೂರ್ಣ ಗುಣಮುಖರಾಗಿ ಬಂದ ನಂತರವೇ ಅವರು ಹೊಸ ಚಿತ್ರಕ್ಕೆ ಸಹಿ ಮಾಡಲಿದ್ದಾರೆ. ಚಿಕಿತ್ಸೆಯ ನಡುವೆಯೇ ಅವರು ಅನೇಕ ದೇಶಗಳಿಗೆ ತೆರಳುತ್ತಿದ್ದಾರೆ. ಅಲ್ಲಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಅವರು ಮಾನಸಿಕ ನೆಮ್ಮದಿಯ ಕಡೆಗೂ ಗಮನ ಹರಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.