
ಸಮಂತಾ ಋತ್ ಪ್ರಭು (Samantha Ruth Prabhu) ದಕ್ಷಿಣ ಭಾರತದ ಬಲು ಜನಪ್ರಿಯ ನಟಿ. ತಮಿಳು, ತೆಲುಗಿನ ಹಲವಾರು ಸಿನಿಮಾಗಳಲ್ಲಿ ಸಮಂತಾ ನಟಿಸಿದ್ದಾರೆ. ಜೂ ಎನ್ಟಿಆರ್, ಅಲ್ಲು ಅರ್ಜುನ್, ವಿಜಯ್ ಇನ್ನೂ ಹಲವಾರು ಮಂದಿ ಸ್ಟಾರ್ ನಟರುಗಳೊಡನೆ ಸಮಂತಾ ನಟಿಸಿದ್ದು, ಹಲವಾರು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಕೆಲವು ನೆನಪುಳಿವ ಪಾತ್ರಗಳಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ. ಸಮಂತಾ ಚಿತ್ರರಂಗಕ್ಕೆ ಕಾಲಿರಿಸಿ 15 ವರ್ಷಗಳಾಗಿವೆ. ಇತ್ತೀಚೆಗೆ ಸಮಂತಾ ತಮ್ಮ ಹಳೆಯ ಸಿನಿಮಾಗಳ ಬಗ್ಗೆ ಮಾತನಾಡಿದ್ದು, ಅವುಗಳನ್ನು ನೋಡಿದರೆ ‘ನನ್ನ ಬಗ್ಗೆ ನನಗೆ ಬೇಸರ ಆಗುತ್ತದೆ, ಮುಜುಗರ ಉಂಟಾಗುತ್ತದೆ’ ಎಂದಿದ್ದಾರೆ.
ಚಿತ್ರರಂಗಕ್ಕೆ ಕಾಲಿಟ್ಟಾಗ ಕೆಲವು ಗ್ಲಾಮರಸ್ ಪಾತ್ರಗಳಲ್ಲಿ ನಾನು ನಟಿಸಿದೆ. ಅದು ನನಗೆ ಆಗಲೇ ಮುಜುಗರ ತಂದಿದ್ದವು. ಆ ಗ್ಲಾಮರಸ್ ಪಾತ್ರಗಳನ್ನು ಅವಕಾಶಕ್ಕಾಗಿ ಒಪ್ಪಿಕೊಂಡಿದ್ದೆ ಅಷ್ಟೆ, ಅವುಗಳಲ್ಲಿ ನಟಿಸಲು ಸಹ ನಾನು ಕಷ್ಟಪಟ್ಟಿದ್ದೆ. ಅವು ನಿಜವಾಗಿಯೂ ನನ್ನಂತೆ ಇರಲಿಲ್ಲ. ನಾನು ಆ ಪಾತ್ರಗಳಂತೆ ಇರಲಿಲ್ಲ. ಆ ಪಾತ್ರಗಳಿಗೆ ಜೀವ ತುಂಬಲು ನಾನು ಬಹಳ ಶ್ರಮಪಟ್ಟಿದ್ದೇನೆ ಆದರೂ ಸಾಧ್ಯವಾಗಿಲ್ಲ. ಈಗ ಅವುಗಳನ್ನು ನೋಡಿದರೆ ನನಗೆ ಬೇಸರ ಆಗುತ್ತದೆ, ಮುಜುಗರವಾಗುತ್ತದೆ’ ಎಂದಿದ್ದಾರೆ ನಟಿ.
‘ಹದಿನೈದು ವರ್ಷ ಕಡಿಮೆ ಸಮಯವಲ್ಲ. ಈ ಹದಿನೈದು ವರ್ಷ ಸಮಯದಲ್ಲಿ ಕೆಲವು ಘಟನೆಗಳು ಜೀವನಪರ್ಯಂತ ಉಳಿಯುವ ಘಟನೆಗಳಾಗಿವೆ, ಇನ್ನು ಕೆಲವು ಮಸುಕು-ಮಸುಕಾಗಿವೆ. ನನ್ನ ಕೆಲವು ಸಿನಿಮಾಗಳಿವೆ, ಅವುಗಳನ್ನು ನೋಡಿದರೆ ನನಗೆ ನಾಚಿಕೆ ಆಗುತ್ತದೆ, ಎಷ್ಟು ಕೆಟ್ಟದಾಗಿ ನಟಿಸಿದ್ದೇನೆ ಎನಿಸುತ್ತದೆ. ಆದರೆ ಏನೂ ಮಾಡಲಾಗುವುದಿಲ್ಲ, ಅದು ಕಲಿಕೆಯ ದಾರಿ, ತಪ್ಪು ಮಾಡಿಯೇ ಕಲಿಯಬೇಕು’ ಎಂದಿದ್ದಾರೆ ಸಮಂತಾ.
ಇದನ್ನೂ ಓದಿ:ಬಾಯ್ಫ್ರೆಂಡ್ ಕುಟುಂಬದ ಜೊತೆಗೆ ದೀಪಾವಳಿ ಆಚರಿಸಿದ ಸಮಂತಾ
ಸಮಂತಾ, 2010 ರಲ್ಲಿ ಬಿಡುಗಡೆ ಆದ ಸೂಪರ್ ಹಿಟ್ ಸಿನಿಮಾ ‘ಏ ಮಾಯ ಚೇಸಾವೆ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ಆ ನಂತರ ಸಮಂತಾ ನಿಂತಿದ್ದೇ ಇಲ್ಲ. ತಮಿಳು ಮತ್ತು ತೆಲುಗು ಚಿತ್ರರಂಗದ ಟಾಪ್ ನಟಿಯಾಗಿ ಮೆರೆದರು. ನಾಗ ಚೈತನ್ಯ ಜೊತೆಗೆ ಮದುವೆ ಆದರು ಆದರೆ ಕೆಲ ವರ್ಷಗಳ ಹಿಂದಷ್ಟೆ ವಿಚ್ಛೇದನ ಪಡೆದುಕೊಂಡರು. ಇದೀಗ ರಾಜ್ ನಿಧಿಮೋರು ಜೊತೆ ಸುತ್ತಾಡುತ್ತಿದ್ದಾರೆ. ಜೊತೆಗೆ ಸಿನಿಮಾ ನಿರ್ಮಾಣ ಸಂಸ್ಥೆಯನ್ನೂ ಸಹ ಪ್ರಾರಂಭಿಸಿದ್ದಾರೆ. ಆದರೆ ಸಮಂತಾ ಕೈಯಲ್ಲಿ ಈಗ ಸಿನಿಮಾಗಳಿಲ್ಲ. ಅವರ ಬೇಡಿಕೆ ಬಹುವಾಗಿ ಕುಸಿದಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:25 pm, Tue, 28 October 25