ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಸಖತ್ ಬೇಡಿಕೆ ಹೊಂದಿದ್ದಾರೆ. ಹೀರೋಯಿನ್ ಆಗಿ ಮಾತ್ರಲ್ಲದೇ ಐಟಂ ಸಾಂಗ್ನಲ್ಲಿ ಕುಣಿಯುವ ಮೂಲಕವೂ ಅವರು ಜನರನ್ನು ರಂಜಿಸಿದ್ದಾರೆ. ‘ಪುಷ್ಪ’ ಸಿನಿಮಾದಲ್ಲಿನ ‘ಉ ಅಂಟಾವಾ ಮಾವ..’ ಹಾಡಿನಲ್ಲಿ ಅವರು ಡ್ಯಾನ್ಸ್ ಮಾಡಿದ ರೀತಿ ನೋಡಿ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದರು. ಅಲ್ಲು ಅರ್ಜುನ್ (Allu Arjun) ಮತ್ತು ಸಮಂತಾ ಅವರು ಮೈ ಚಳಿ ಬಿಟ್ಟು ಕುಣಿದಿದ್ದರು. ಆ ಹಾಡಿನ ಶೂಟಿಂಗ್ ಸಂದರ್ಭ ಹೇಗಿತ್ತು ಎಂದು ಸಮಂತಾ ಈಗ ಬಾಯಿ ಬಿಟ್ಟಿದ್ದಾರೆ. ಅದರ ಶೂಟಿಂಗ್ ಮಾಡುವಾಗ ತಾವು ಕಂಫರ್ಟಬಲ್ ಆಗಿರಲಿಲ್ಲ ಎಂದು ಸಮಂತಾ (Samantha) ಹೇಳಿದ್ದಾರೆ.
‘ಪುಷ್ಪ’ ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿ. ಆದರೆ ಸ್ಪೆಷಲ್ ಸಾಂಗ್ನಲ್ಲಿ ಡ್ಯಾನ್ಸ್ ಮಾಡಲು ಆಯ್ಕೆ ಆಗಿದ್ದು ಸಮಂತಾ ರುತ್ ಪ್ರಭು. ಆ ಸಿನಿಮಾದ ಯಶಸ್ಸಿನಲ್ಲಿ ‘ಉ ಅಂಟಾವಾ ಮಾವ..’ ಹಾಡಿಗೆ ಕೊಡುಗೆ ದೊಡ್ಡದಿದೆ. ಬಹಳ ಬೋಲ್ಡ್ ಆಗಿದ್ದಂತಹ ಆ ಹಾಡನ್ನು ಒಪ್ಪಿಕೊಳ್ಳಲು ಸಮಂತಾ ತುಂಬ ಯೋಚನೆ ಮಾಡಿದ್ದರು. ಯಾಕೆಂದರೆ, ಆಗ ತಾನೇ ಅವರು ನಾಗ ಚೈತನ್ಯ ಜೊತೆಗಿನ ದಾಂಪತ್ಯಕ್ಕೆ ವಿಚ್ಛೇದನ ಘೋಷಿಸಿದ್ದರು.
‘ನನಗೆ ಆ ಹಾಡಿನ ಆಫರ್ ಬಂದಾಗ ನಮ್ಮ ವಿಚ್ಛೇದನದ ಪ್ರಕ್ರಿಯೆ ಅರ್ಧದಲ್ಲಿತ್ತು. ಡಿವೋರ್ಸ್ ಘೋಷಣೆ ಆದ ತಕ್ಷಣ ಅಂತಹ ಐಟಂ ಡ್ಯಾನ್ಸ್ ಮಾಡುವುದು ಬೇಡ ಎಂದು ಕುಟುಂಬದವರು, ಆಪ್ತರು ಸಲಹೆ ನೀಡಿದರು. ಸ್ನೇಹಿತರು ಕೂಡ ಹಾಗೆಯೇ ಹೇಳಿದರು. ಆದರೆ ನಾನು ಐಟಂ ಡ್ಯಾನ್ಸ್ ಮಾಡುವ ನಿರ್ಧಾರ ತೆಗೆದುಕೊಂಡೆ’ ಎಂದು ಸಮಂತಾ ಅವರು ಹೇಳಿದ್ದಾರೆ. ಆದರೆ ಆ ಹಾಡಿನಲ್ಲಿ ಕುಣಿಯುವುದು ಅವರಿಗೆ ಅಷ್ಟು ಸುಲಭದ್ದಾಗಿರಲಿಲ್ಲ.
ಇದನ್ನೂ ಓದಿ: ಆರೋಗ್ಯದ ಬಗ್ಗೆ ತಪ್ಪು ಮಾಹಿತಿ ನೀಡಿದ ಸಮಂತಾ; ಸತ್ಯ ಬಯಲಿಗೆ ಎಳೆದ ಡಾಕ್ಟರ್
‘ನನ್ನ ಪಾಲಿಗೆ ಅದು ದೊಡ್ಡ ಸವಾಲಾಗಿತ್ತು. ಉ ಅಂಟಾವ ಹಾಡಿನ ಮೊದಲ ಶಾಟ್ ತೆಗೆಯುವಾಗ ನಾನು ಭಯದಿಂದ ನಡುಗುತ್ತಿದ್ದೆ. ಯಾಕೆಂದರೆ, ಸೆಕ್ಸಿಯಾಗಿ ಕಾಣುವುದು ನನಗೆ ಹೊಂದುವಂಥದಲ್ಲ. ಆದರೆ ನಾನು ನನ್ನನ್ನು ಕಷ್ಟಕ್ಕೆ ನೂಕಿಕೊಂಡು, ಅದರ ವಿರುದ್ಧ ಹೋರಾಡಿ ಹೊರಬರುವ ವ್ಯಕ್ತಿತ್ವದವಳು’ ಎಂದು ಹೇಳುವ ಮೂಲಕ ಆ ಹಾಡನ್ನು ಸವಾಲಾಗಿ ಸ್ವೀಕರಿಸಿದ್ದಾಗಿ ಸಮಂತಾ ಹೇಳಿದ್ದಾರೆ.
ಇದನ್ನೂ ಓದಿ: ಚಿಂತೆಯಿಲ್ಲದೇ ಬಾತ್ ರೂಂ ಫೋಟೋ ಹಂಚಿಕೊಂಡ ಸಮಂತಾ ರುತ್ ಪ್ರಭು
‘ಫ್ಯಾಮಿಲಿ ಮ್ಯಾನ್ 2’ ವೆಬ್ ಸರಣಿಯಲ್ಲಿ ಸಮಂತಾ ಅವರು ರಾಜಿ ಎಂಬ ಪಾತ್ರ ಮಾಡಿದ್ದರು. ಆ ಪಾತ್ರ ಕೂಡ ಸಖತ್ ಬೋಲ್ಡ್ ಆಗಿತ್ತು. ಆ ಪಾತ್ರವನ್ನು ಒಪ್ಪಿಕೊಳ್ಳುವಾಗ ಎಷ್ಟು ಕಷ್ಟವಾಗಿತ್ತೋ ಐಟಂ ಸಾಂಗ್ ಒಪ್ಪಿಕೊಳ್ಳುವಾಗಲೂ ಅಷ್ಟೇ ಕಷ್ಟವಾಗಿತ್ತು ಎಂದು ಸಮಂತಾ ಹೇಳಿದ್ದಾರೆ. ವಿಚ್ಛೇದನದ ಬಳಿಕ ಸಮಂತಾ ಅವರು ಸಿನಿಮಾ ಮತ್ತು ಪಾತ್ರಗಳನ್ನು ಆಯ್ಕೆ ಮಾಡುವ ರೀತಿ ಬದಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.