
ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅಭಿನಯದ, ಬಹುನಿರೀಕ್ಷಿತ ಆ್ಯಕ್ಷನ್-ಕಾಮಿಡಿ ತೆಲುಗು ಚಿತ್ರ ‘ಮಾ ಇಂಟಿ ಬಂಗಾರಂ’ ಇಂದು (ಜೂನ್ 19) ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಸಿನಿಮಾ ರಿಲೀಸ್ ಆಗುವ ಮುನ್ನ ಸಮಂತಾ ಅವರು ಚಿತ್ರದ ನಿರ್ದೇಶಕಿ ಬಿ.ವಿ. ನಂದಿನಿ ರೆಡ್ಡಿ ಮತ್ತು ಪತಿ ನಿರ್ದೇಶಕ ರಾಜ್ ನಿಡಿಮೋರು ಅವರೊಂದಿಗೆ ತಿರುಪತಿಯ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ.
‘ಮಾ ಇಂಟಿ ಬಂಗಾರಂ’ ತಂಡದವರು ತಿರುಪತಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡ ಈ ಜೋಡಿಯ ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
ಪ್ರತಿ ಸಿನಿಮಾ ಸಂದರ್ಭದಲ್ಲಿ ಅಥವಾ ಯಾವುದೇ ಒಳ್ಳೆಯ ಕೆಲಸ ಆಗುವಾಗ ಸಮಂತಾ ತಿರುಪತಿಗೆ ಭೇಟಿ ನೀಡುತ್ತಾರೆ. ಅವರು ಇತ್ತೀಚೆಗೆ ಆಧ್ಯಾತ್ಮದ ಕಡೆ ಹೆಚ್ಚು ಒಲಿದಿದ್ದಾರೆ. ರಾಜ್ ನಿಡಿಮೋರು ಜೊತೆ ಅವರು ಮದುವೆ ಆಗುವಾಗ ಆಯ್ಕೆ ಮಾಡಿಕೊಂಡಿದ್ದು ಸದ್ಗುರು ಆಶ್ರಮ ಅನ್ನೋದು ವಿಶೇಷ. ಈಗ ಅವರು ತಮ್ಮ ಸಿನಿಮಾ ರಿಲೀಸ್‌ಗೂ ಮೊದಲು ಸಂಪ್ರದಾಯವನ್ನು ಪೂರ್ಣಗೊಳಿಸಿದ್ದಾರೆ.
‘ಮಾ ಇಂಟಿ ಬಂಗಾರಂ’ ಚಿತ್ರದ ಕುರಿತು ಮಾತನಾಡುತ್ತಾ ಸಮಂತಾ ಮತ್ತೊಂದು ಸ್ವಾರಸ್ಯಕರ ಸಂಗತಿಯನ್ನು ಬಿಚ್ಚಿಟ್ಟಿದ್ದರು. ಈ ಚಿತ್ರದ ಕಥೆಯನ್ನು ನಿರ್ದೇಶಕಿ ನಂದಿನಿ ರೆಡ್ಡಿ ಮೊದಲು ಬರೆದಿದ್ದು ನಟಿ ಸಾಯಿ ಪಲ್ಲವಿ ಅವರಿಗಾಗಿ ಅಂತೆ. ಆದರೆ ಡೇಟ್ಸ್ ಕೊರತೆಯಿಂದಾಗಿ ಸಾಯಿ ಪಲ್ಲವಿ ಈ ಚಿತ್ರದಿಂದ ಹೊರಗುಳಿಯಬೇಕಾಯಿತು. ಆ ಬಳಿಕ ಕಥೆಯಲ್ಲಿ ಬದಲಾವಣೆ ಮಾಡಿ ಸಮಂತಾ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಯಿತು.
ಇದನ್ನೂ ಓದಿ: ವೇದಿಕೆ ಮೇಲೆ ಸಮಂತಾಗೆ ‘ಐ ಲವ್ ಯೂ’ ಹೇಳಲು ನಿರಾಕರಿಸಿದ ಪತಿ ರಾಜ್ ನಿಡಿಮೋರು
ಥಿಯೇಟ್ರಿಕಲ್ ಹಾಗೂ ನಾನ್-ಥಿಯೇಟ್ರಿಕಲ್ ಹಕ್ಕುಗಳಿಗಾಗಿ ಭಾರಿ ಪೈಪೋಟಿ ನಡೆದ ಪರಿಣಾಮ, ‘ಮಾ ಇಂಟಿ ಬಂಗಾರಂ’ ಸಿನಿಮಾ ಬಿಡುಗಡೆಗೂ ಮುನ್ನವೇ ತನ್ನ ಸಂಪೂರ್ಣ ನಿರ್ಮಾಣ ವೆಚ್ಚವನ್ನು ಮರಳಿ ಪಡೆದಿದೆ. ಸದ್ಯ ಚಿತ್ರಮಂದಿರಗಳಲ್ಲಿ ಉತ್ತಮ ಓಪನಿಂಗ್ ಪಡೆದುಕೊಂಡಿರುವ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.