ಹೆಚ್ಚಿದ ಕೊರೊನಾ ಪ್ರಕರಣ; ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮುಂದೂಡಿಕೆ

|

Updated on: Mar 15, 2021 | 6:41 PM

ಕರ್ನಾಟಕದಲ್ಲೂ ಕೊರೊನಾ ಹಾವಳಿ ಹೆಚ್ಚುತ್ತಿದೆ. ಹೀಗಾಗಿ, ರಾಜ್ಯ ಸರ್ಕಾರ ಮುಂಜಾಗೃತ ಕ್ರಮವಾಗಿ 3ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮುಂದೂಡಿಕೆ ಮಾಡುವ ನಿರ್ಧಾರಕ್ಕೆ ಬಂದಿದೆ.

ಹೆಚ್ಚಿದ ಕೊರೊನಾ ಪ್ರಕರಣ; ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮುಂದೂಡಿಕೆ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕೊರೊನಾ ಸೋಂಕು ಕಡಿಮೆ ಆಗುತ್ತಿದೆ ಎನ್ನುವ ವಿಶ್ವಾಸದಲ್ಲಿ ಸಿನಿಮೋತ್ಸವವನ್ನು ಸಂಘಟಿಸಲು ರಾಜ್ಯ ಸರ್ಕಾರ ಮುಂದಾಗಿತ್ತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಜಂಟಿಯಾಗಿ ನಡೆಸಲಿರುವ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಮಾರ್ಚ್​​ 24ರಿಂದ 31ರವರೆಗೆ ಬೆಂಗಳೂರಲ್ಲಿ ನಡೆಸಬೇಕಿತ್ತು. ಆದರೆ, ಈಗ ಕೊರೊನಾ ಪ್ರಕರಣ ನಿಧಾನವಾಗಿ ಹೆಚ್ಚುತ್ತಿರುವುದರಿಂದ ಚಲನಚಿತ್ರೋತ್ಸವವನ್ನು ಮುಂದೂಡಿಕೆ ಮಾಡಿ ಆದೇಶ ಹೊರಡಿಸಿದೆ.

ದೇಶಾದ್ಯಂತ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ. ಮಹಾರಾಷ್ಟ್ರ, ಕೇರಳ ಸೇರಿ ದೇಶದ ನಾನಾ ಕಡೆಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಕರ್ನಾಟಕದಲ್ಲೂ ಕೊರೊನಾ ಹಾವಳಿ ಹೆಚ್ಚುತ್ತಿದೆ. ಹೀಗಾಗಿ, ರಾಜ್ಯ ಸರ್ಕಾರ ಮುಂಜಾಗೃತ ಕ್ರಮವಾಗಿ 3ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮುಂದೂಡಿಕೆ ಮಾಡುವ ನಿರ್ಧಾರಕ್ಕೆ ಬಂದಿದೆ. ಸಿನಿಮೋತ್ಸವ ಯಾವಾಗ ನಡೆಯಲಿದೆ ಎನ್ನುವುದಕ್ಕೆ ಹೊಸ ದಿನಾಂಕವನ್ನು ಸರ್ಕಾರ ಇನ್ನಷ್ಟೇ ಘೋಷಣೆ ಮಾಡಬೇಕಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಬೆಂಗಳೂರಿನ ರಾಜಾಜಿನಗರದಲ್ಲಿರುವ ಒರಾಯನ್​ ಮಾಲ್​ನ ಪಿವಿಆರ್​ ಚಿತ್ರಮಂದಿರದಲ್ಲಿ ಚಲನಚಿತ್ರೋತ್ಸವ ನಡೆಸಲು ನಿರ್ಧರಿಸಲಾಗಿತ್ತು. ಒಟ್ಟು 11 ಪರದೆಗಳಲ್ಲಿ, 50 ದೇಶದ 200ಕ್ಕೂ ಹೆಚ್ಚು ಸಿನಿಮಾಗಳನ್ನು ಪ್ರದರ್ಶಿಸಲು ನಿರ್ಧರಿಸಲಾಗಿತ್ತು. ಸಿನಿಮಾ ಪ್ರದರ್ಶನದ ಜತೆಗ ಜ್ಞಾನಾಭಿವೃದ್ಧಿ ಮಾಡಿಕೊಕೊಳ್ಳಲು ಅವಕಾಶ ನೀಡಲು ಪ್ಲ್ಯಾನ್​ ಮಾಡಲಾಗಿತ್ತು. ದೇಶ-ವಿದೇಶದ ನಿರ್ದೇಶಕರು ಹಾಗೂ ನಿರ್ಮಾಪಕರು ಈ ಚರ್ಚೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇತ್ತು.

ಹೊರಗುತ್ತಿಗೆ ವಿವಾದ:

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (Bengaluru International Film Festival – BIFFES) 13ನೇ ಅವೃತ್ತಿ ಮಾರ್ಚ್​ 24ರಿಂದ ಆರಂಭವಾಗಲು ಕೇವಲ 13 ದಿನಗಳು ಬಾಕಿ ಇದ್ದವು. ಆದರೆ ಈವರೆಗೂ ಕಾರ್ಯಕ್ರಮ ಆಯೋಜನೆಗೆ ಸಂಬಂಧಿಸಿದಂತೆ ಪೂರ್ವ ಸಿದ್ಧತೆಗಳು ಆಗಿರಲಿಲ್ಲ. ಕೊನೆಗಳಿಗೆಯಲ್ಲಿ ಸಮಯವಿಲ್ಲವೆಂಬ ನೆಪವೊಡ್ಡಿ ಪಾರದರ್ಶಕ ನಿಯಮಗಳಿಂದ ವಿನಾಯ್ತಿ ಪಡೆದು ಇಡೀ ಕಾರ್ಯಕ್ರಮ ಆಯೋಜನೆಯನ್ನು(ಸಿನೆಮಾ ಆಯ್ಕೆ ಹೊರತುಪಡಿಸಿ) ಈವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿಗೆ ವಹಿಸುವ ಹುನ್ನಾರ ನಡೆದಿದೆ ಎನ್ನುವ ಮಾತು ಕೇಳಿ ಬಂದಿತ್ತು.

ಈವರೆಗೆ ಸರ್ಕಾರದ ಅಧೀನದಲ್ಲಿರುವ ಚಲನಚಿತ್ರ ಅಕಾಡೆಮಿ ಸ್ವತಃ ನಡೆಸುತ್ತಿದ್ದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಹೊರಗುತ್ತಿಗೆಯಾಗಿ ಖಾಸಗಿ ಸಂಸ್ಥೆಯೊಂದಕ್ಕೆ ನೀಡಲು ನಡೆದಿರುವ ಸಿದ್ದತೆ ಬಗ್ಗೆ ಸಿನಿಮಾ ವಲಯದಿಂದ ವಿರೋಧವೂ‌ ವ್ಯಕ್ತವಾಗಿತ್ತು. ಈ ಬೆಳವಣಿಗೆಯನ್ನು ‘ದುರದೃಷ್ಟಕರ ಸಂಗತಿ’ ಎಂದು ಹೇಳಿರುವ ಕನ್ನಡದ ಸೃಜನಶೀಲ ನಿರ್ದೇಶಕರು ಹಾಗೂ ತಂತ್ರಜ್ಞರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಈವೆಂಟ್ ಮ್ಯಾನೇಜ್​ಮೆಂಟ್​ ಕಂಪನಿಗೆ ಬೆಂಗಳೂರು ಚಲನಚಿತ್ರೋತ್ಸವ ಹೊರಗುತ್ತಿಗೆ?

Published On - 6:30 pm, Mon, 15 March 21