ಗಾಂಧಿನಗರದಲ್ಲಿ ಮತ್ತೆ ಮತ್ತೆ ಕಥಾಸಂಗಮ; ಶಾಂತಿಯನ್ನು ಕಳೆದುಕೊಳ್ಳಬೇಡಿ ಅಂತಿದ್ದಾರೆ ಮೂವರು ನಿರ್ದೇಶಕರು
ಮೂರು ಕಥೆ, ಮೂರು ನಿರ್ದೇಶಕರು, ಒಂದು ಸಿನಿಮಾ. ಇಂಥದ್ದೊಂದು ಪ್ರಯೋಗಕ್ಕೆ ಹೊಸಬರ ತಂಡ ಕೈ ಹಾಕಿದೆ. ಈ ಚಿತ್ರಕ್ಕೆ ‘ಶಾಂತಿಯನ್ನು ಕಳೆದುಕೊಳ್ಳಬೇಡಿ’ ಎಂದು ಹೆಸರಿಡಲಾಗಿದೆ.
ಹಲವು ಕಥೆಗಳನ್ನು ಒಂದುಗೂಡಿಸಿ ಒಂದೇ ಸಿನಿಮಾ ಮಾಡುವ ಪ್ರಯತ್ನ ಎಲ್ಲ ಚಿತ್ರರಂಗದಲ್ಲೂ ನಡೆಯುತ್ತಿದೆ. 2019ರಲ್ಲಿ ನಿರ್ದೇಶಕ ರಿಷಬ್ ಶೆಟ್ಟಿ ಅವರು ಕಥಾಸಂಗಮ ಸಿನಿಮಾ ಮಾಡಿದ್ದರು. ಅದರಲ್ಲಿ 7 ನಿರ್ದೇಶಕರು 7 ಕಥೆಗಳನ್ನು ಕಟ್ಟಿಕೊಟ್ಟಿದ್ದರು. ಇತ್ತೀಚೆಗೆ ಸೆಟ್ಟೇರಿರುವ ‘ಪೆಂಟಗನ್’ ಸಿನಿಮಾದಲ್ಲಿ 5 ಕಥೆಗಳನ್ನು ಇಟ್ಟುಕೊಂಡು ಇಂಥದ್ದೇ ಪ್ರಯೋಗ ಮಾಡಲಾಗುತ್ತಿದೆ. ಈಗ ಮತ್ತೊಂದು ತಂಡ ಕೂಡ ಕಥೆಗಳ ಸಂಗಮಕ್ಕೆ ಮುಂದಾಗಿದೆ. ‘ಶಾಂತಿಯನ್ನು ಕಳೆದುಕೊಳ್ಳಬೇಡಿ’ ಎಂಬ ಸಿನಿಮಾದಲ್ಲಿ ಮೂರು ಕಥೆಗಳನ್ನು ಹೇಳಲಾಗುತ್ತಿದೆ.
‘ಶಾಂತಿಯನ್ನು ಕಳೆದುಕೊಳ್ಳಬೇಡಿ’ ಸಿನಿಮಾಗಾಗಿ ಮೂವರು ನಿರ್ದೇಶಕರು ಕೆಲಸ ಮಾಡಲಿದ್ದಾರೆ. ಚುಕ್ಕಿ, ಮೀರಾ ಮಾಧವ, ಮೇಘ ಮಯೂರಿ, ಅಂಬಾರಿ ಮುಂತಾದ ಧಾರಾವಾಹಿಗಳ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವ ವಿಘ್ನೇಶ್ ಶೇರೆಗಾರ್ ಅವರು ಈಗ ‘ಶಾಂತಿಯನ್ನು ಕಳೆದುಕೊಳ್ಳಬೇಡಿ’ ಚಿತ್ರದ ಒಂದು ಕಥೆಗೆ ಆ್ಯಕ್ಷನ್-ಕಟ್ ಹೇಳುವ ಮೂಲಕ ಚಂದನವನಕ್ಕೆ ನಿರ್ದೇಶಕರಾಗಿ ಕಾಲಿಡುತ್ತಿದ್ದಾರೆ. ಕೆಲವು ತುಳು ಸಿನಿಮಾಗಳಿಗೂ ಅವರು ಕೆಲಸ ಮಾಡಿದ್ದಾರೆ.
ಇನ್ನುಳಿದ ಎರಡು ಕಥೆಗಳಿಗೆ ಬಾಸುಮ ಕೊಡಗು ಮತ್ತು ಶಿವ ನಿರ್ದೇಶನ ಮಾಡಲಿದ್ದಾರೆ. ಕೆಲವು ಕಿರುಚಿತ್ರಗಳನ್ನು ಮಾಡಿದ ಅನುಭವ ಶಿವ ಅವರಿಗೆ ಇದೆ. ಬಾಸುಮ ಕೊಡುಗು ಅವರು ಗಿರೀಶ್ ಕಾಸರವಳ್ಳಿ ಜೊತೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮೂರು ಕಥೆಗಳನ್ನು ಒಟ್ಟುಗೂಡಿಸಿ ಸಿನಿಮಾ ಮಾಡುವ ಕನಸು ಕಂಡವರು ವಿಘ್ನೇಶ್. ಅವರ ಜೊತೆಗೆ ಇನ್ನುಳಿದ ನಿರ್ದೇಶಕರು ಮತ್ತು ಕಲಾವಿದರು ಕೈ ಜೋಡಿಸಿದ್ದಾರೆ.
ಈ ಸಿನಿಮಾದಲ್ಲಿ ನಾಯಕನಾಗಿ ಕಾರ್ತಿಕ್ ನಟಿಸುತ್ತಿದ್ದು, ಅವರ ಜೊತೆ ಹರ್ಷಿತಾ ಅವರು ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇದೊಂದು ಹೊಸಬರ ತಂಡ. ನಿರ್ದೇಶಕರು ಮತ್ತು ಕಲಾವಿದರು ಕೂಡ ಹೊಸಬರು. ಜಿ.ಕೆ. ಶಂಕರ್, ರಾಜಣ್ಣ, ಇಂದ್ರಜಿತ್, ಸಂಗೀತಾ, ಚಂದ್ರಕಲಾ ಭಟ್, ರಾಕೇಶ್, ಸಂಪತ್ ಶಾಸ್ತ್ರೀ ,ಕಾವ್ಯ ಕೊಡಗು ಮುಂತಾದವರು ನಟಿಸುತ್ತಿದ್ದಾರೆ.
ಪದ್ಮಾವತಿ ಸ್ಟುಡಿಯೋಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಸಂಗೀತ ಸಂಯೋಜನೆಯ ಜವಾಬ್ದಾರಿಯನ್ನು ಕಲ್ಕಿ ಅಭಿಷೇಕ್ ಹಾಗೂ ಜಾನ್ ಮೊಜಾರ್ಟ್ ವಹಿಸಿಕೊಂಡಿದ್ದಾರೆ. ಹಾಡುಗಳಿಗೆ ಅಜಯ್ ಆರ್ ವೇದಾಂತಿ, ಯಶಸ್ ಶುಕ್ರ ಸಾಹಿತ್ಯ ಬರೆದಿದ್ದಾರೆ.
ಮೂರು ಕಥೆಗಳ ಪೈಕಿ ಮೊದಲನೇ ಕಥೆಯಲ್ಲಿ ಮಾನವನ ಅಸ್ತಿತ್ವದ ಬಗ್ಗೆ ಹೇಳಲಾಗುತ್ತಿದೆ. ಅದಕ್ಕೆ ವಿಘ್ನೇಶ್ ನಿರ್ದೇಶನ ಮಾಡಲಿದ್ದು, ಮರಣದ ನಂತರವೂ ಮನುಷ್ಯರು ಹೇಗಿರುತ್ತಾರೆ ಎಂಬುದರ ಕುರಿತು ಈ ಕಥೆ ಇರಲಿದೆ. ಬಾಸುಮ ಕೊಡಗು ಅವರು ಎರಡನೇ ಕಥೆಗೆ ನಿರ್ದೇಶನ ಮಾಡುವ ಹೊಣೆ ಹೊತ್ತುಕೊಂಡಿದ್ದಾರೆ. ಇದು ತಾಯಿ-ಮಗುವಿನ ಸಂಬಂಧದ ಬಗ್ಗೆ ಇರುವಂತಹ ಕಥೆ. ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬರುವ ಹುಡುಗನೊಬ್ಬ ನಂತರ ಹ್ಯಾಕರ್ ಆಗುವ ಇನ್ನೊಂದು ಕಥೆಗೆ ಶಿವ ನಿರ್ದೇಶನ ಮಾಡುತ್ತಿದ್ದಾರೆ.
ಇದನ್ನೂ ಓದಿ: ಕೇವಲ 10 ಗಂಟೆಯಲ್ಲಿ ಸಿದ್ಧವಾಯ್ತು ಸಿನಿಮಾ; ಭಾರತ ಚಿತ್ರರಂಗದಲ್ಲೇ ಹೊಸ ದಾಖಲೆ