
ಶಿವರಾಜ್ಕುಮಾರ್, ರಾಜ್ ಬಿ. ಶೆಟ್ಟಿ ಹಾಗೂ ಉಪೇಂದ್ರ ನಟನೆಯ ‘45’ ಸಿನಿಮಾಗೆ (45 Movie) ಅರ್ಜುನ್ ಜನ್ಯ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಒಳ್ಳೆಯ ವಿಮರ್ಶೆ ಸಿಕ್ಕಿದ್ದು, ಬಾಕ್ಸ್ ಆಫೀಸ್ನಲ್ಲಿ ಉತ್ತಮ ಕಲೆಕ್ಷನ್ ಕೂಡ ಮಾಡುತ್ತಿದೆ. ಉದ್ದೇಶಪೂರ್ವಕವಾಗಿ ಸಿನಿಮಾ ಬಗ್ಗೆ ನೆಗೆಟಿವ್ ಹಬ್ಬಿಸೋವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ‘45’ ತಂಡ ನೀಡಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಲಾಗಿದೆ.
‘45 ಚಿತ್ರತಂಡ ಬೆಂಗಳೂರು 9ನೇ ಅಪರ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಮಧ್ಯಂತರ ಆದೇಶವನ್ನು ಪಡೆದಿದೆ. ನ್ಯಾಯಾಲಯದ ಮಧ್ಯಂತರ ಆದೇಶದಂತೆ, 45 ಚಿತ್ರದ ಕುರಿತು ಯಾವುದೇ ವ್ಯಕ್ತಿ, ಸಂಸ್ಥೆ, ಚಾನೆಲ್, ಸಾಮಾಜಿಕ ಜಾಲತಾಣದ ಖಾತೆದಾರರು ಅಥವಾ ಸಂಬಂಧಿತ ಪ್ಲಾಟ್‌ಫಾರ್ಮ್‌ಗಳು, ಅವಹೇಳನಕಾರಿ, ಮಾನಹಾನಿಕರ, ಅಪಪ್ರಚಾರಾತ್ಮಕ ವಿಮರ್ಶೆಗಳು ಅಥವಾ ನೆಗೆಟಿವ್ ರೇಟಿಂಗ್‌ಗಳು ಸೇರಿದಂತೆ ಚಿತ್ರಕ್ಕೆ ಹಾನಿಯುಂಟು ಮಾಡುವ ವಿಷಯಗಳನ್ನು ಪ್ರಕಟಿಸುವುದು, ಪ್ರಸಾರ ಮಾಡುವುದು ಅಥವಾ ಹರಡುವುದು ನಿರ್ಬಂಧಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ಬರೆಯಲಾಗಿದೆ.
‘ಈಗಾಗಲೇ ಪ್ರಕಟಗೊಂಡಿರುವ ಇಂತಹ ಎಲ್ಲಾ ವಿಷಯಗಳನ್ನು ತೆಗೆದುಹಾಕಿ ನಿಷ್ಕ್ರಿಯಗೊಳಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ. ನ್ಯಾಯಾಲಯದ ಆದೇಶವಿದ್ದರೂ ಸಹ, ಕೆಲವೊಂದು ದುರುದ್ದೇಶಪೂರಿತ ವ್ಯಕ್ತಿಗಳಿಂದ ಚಿತ್ರದ ವಿರುದ್ಧ ಅಪಪ್ರಚಾರದ ಪೋಸ್ಟ್‌ಗಳು ಪ್ರಕಟವಾಗುತ್ತಿರುವುದು ಚಿತ್ರತಂಡದ ಗಮನಕ್ಕೆ ಬಂದಿದೆ. ಇಂತಹ ಕೃತ್ಯಗಳು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿದ್ದು, ನ್ಯಾಯಾಂಗ ನಿಂದನೆಗೆ ಒಳಪಡುವ ಅಪರಾಧವಾಗಿರುತ್ತದೆ’ ಎಂದು ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: ‘45’ ಸಿನಿಮಾದಲ್ಲಿ ಶಿವರಾಜ್ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ..
‘ಈ ರೀತಿಯ ಅಪಪ್ರಚಾರದಿಂದ ಚಿತ್ರಕ್ಕೆ ಅಥವಾ ನಿರ್ಮಾಪಕರಿಗೆ ಉಂಟಾಗುವ ಯಾವುದೇ ರೀತಿಯ ಆರ್ಥಿಕ, ವಾಣಿಜ್ಯ ಹಾಗೂ ಗೌರವ ಹಾನಿಗೆ ಸಂಬಂಧಪಟ್ಟ ವ್ಯಕ್ತಿಗಳು ವೈಯಕ್ತಿಕವಾಗಿ ಸಂಪೂರ್ಣ ಹೊಣೆಗಾರರಾಗಿದ್ದು, ಅವರ ವಿರುದ್ಧ ಸಿವಿಲ್ ಹಾಗೂ ಕ್ರಿಮಿನಲ್ ಕಾನೂನುಗಳ ಅಡಿಯಲ್ಲಿ ಕಠಿಣ ಕ್ರಮ ಜರುಗಿಸಲು ಅವಕಾಶವಿದೆ. ಅಗತ್ಯವಿದ್ದಲ್ಲಿ ಸಂಬಂಧಪಟ್ಟವರ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧನ ಸೇರಿದಂತೆ ಕಾನೂನು ಕ್ರಮ ಕೈಗೊಳ್ಳಲು ತಜ್ಞರ ಅಭಿಪ್ರಾಯ ಪಡೆಯಲಾಗಿದೆ’ ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ. ಪೈರಸಿ ಮಾಡದಂತೆಯೂ ಎಚ್ಚರಿಕೆ ನೀಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.