ನಟ ರಕ್ಷಿತ್ ಶೆಟ್ಟಿ (Rakshit Shetty) ಅವರು ಸಡನ್ ಆಗಿ ಇನ್ಸ್ಟಾಗ್ರಾಮ್ನಲ್ಲಿ ಲೈವ್ ಬಂದಿದ್ದಾರೆ. ಯಾವುದೇ ಮುನ್ಸೂಚನೆ ನೀಡದೇ ಅವರು ಅಭಿಮಾನಿಗಳ ಎದುರು ಬಂದು ಒಂದು ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಅಂದಹಾಗೆ, ಈ ಖುಷಿಯ ಸಮಾಚಾರ ಚಾರ್ಲಿ ಶ್ವಾನಕ್ಕೆ ಸಂಬಂಧಿಸಿದ್ದು. ‘777 ಚಾರ್ಲಿ’ (777 Charlie) ಸಿನಿಮಾದಲ್ಲಿ ನಟಿಸಿದ ಚಾರ್ಲಿ ಈಗ ತಾಯಿ ಆಗಿದೆ. 6 ಮರಿಗಳಿಗೆ ಜನ್ಮ ನೀಡಿದೆ. ಚಾರ್ಲಿ (777 Charlie Dog) ಮತ್ತು ಅದರ ಮರಿಗಳನ್ನು ನೋಡಲು ರಕ್ಷಿತ್ ಶೆಟ್ಟಿ ಅವರು ಮೈಸೂರಿಗೆ ತೆರಳಿದ್ದಾರೆ. ಅಲ್ಲಿಂದ ಅವರು ಬಹಳ ಖುಷಿಯಲ್ಲಿ ಲೈವ್ ಬಂದಿದ್ದಾರೆ.
2022ರ ಜೂನ್ 10ರಂದು ‘777 ಚಾರ್ಲಿ’ ಸಿನಿಮಾ ಬಿಡುಗಡೆ ಆಗಿತ್ತು. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳಲ್ಲಿ ಈ ಸಿನಿಮಾ ತೆರೆಕಂಡು ಜನಮೆಚ್ಚುಗೆ ಗಳಿಸಿತ್ತು. ಸಿನಿಮಾದ ಗೆಲುವಿನಲ್ಲಿ ಚಾರ್ಲಿ ಮುಖ್ಯ ಪಾತ್ರ ವಹಿಸಿತ್ತು. ಚಾರ್ಲಿಯ ನಟನೆಗೆ ಶ್ವಾನಪ್ರಿಯರು ಮೆಚ್ಚುಗೆ ಸೂಚಿಸಿದ್ದರು. ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಮರಿಗಳಿಗೆ ಚಾರ್ಲಿ ಜನ್ಮ ನೀಡಿತ್ತು. ಆದರೆ ರಿಯಲ್ ಲೈಫ್ನಲ್ಲಿ ಇಷ್ಟು ವರ್ಷ ಕಳೆದರೂ ಚಾರ್ಲಿಗೆ ತಾಯಿ ಆಗುವ ಸಮಯ ಬಂದಿರಲಿಲ್ಲ. ಈಗ ಅದು ನೆರವೇರಿದೆ.
‘ಲೈವ್ ಬರಲು ಒಂದು ಕಾರಣ ಇದೆ. 777 ಚಾರ್ಲಿ ಸಿನಿಮಾ ಬಿಡುಗಡೆ ಆಗಿ ಬಹುತೇಕ 2 ವರ್ಷ ಆಗುತ್ತಾ ಬಂತು. ಸಿನಿಮಾ ಬಿಡುಗಡೆ ಆಗಿ ಇಷ್ಟು ಸಮಯ ಆದರೂ ನಮ್ಮ ಮನದಲ್ಲಿ ಒಂದು ವಿಚಾರ ಇತ್ತು. ಒಂದು ವೇಳೆ ಚಾರ್ಲಿ ತಾಯಿಯಾದರೆ ಈ ಜರ್ನಿಗೆ ಒಂದು ಸರ್ಕಲ್ ಪೂರ್ಣ ಆಗತ್ತೆ. ಅದನ್ನು ಕಿರಣ್ ರಾಜ್ ಅವರು ಮೊದಲೇ ಹೇಳಿದ್ದರು. ಅದನ್ನು ಕೇಳಿದ ಬಳಿಕ ಚಾರ್ಲಿ ತಾಯಿ ಆಗಬೇಕು ಅಂತ ನಾನು ಕೂಡ ಕಾದಿದ್ದೆ. ಅದರ ಬಗ್ಗೆ ನಾನು ವಿಚಾರಿಸುತ್ತಲೇ ಇದ್ದೆ’ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
ಇದನ್ನೂ ಓದಿ: ‘ರಕ್ಷಿತ್ ಶೆಟ್ಟಿ ಮೇಲೆ ಒತ್ತಡ ಹಾಕೋದು ನ್ಯಾಯವಲ್ಲ’: ‘ಥಗ್ಸ್ ಆಫ್ ಮಾಲ್ಗುಡಿ’ ಬಗ್ಗೆ ಸುದೀಪ್ ಮಾತು
‘ಪ್ರಮೋದ್ ಜೊತೆ ಚಾರ್ಲಿ ಇರುತ್ತದೆ. ಅವರಿಗೆ ಕಾಲ್ ಮಾಡಿದಾಗಲೆಲ್ಲ ಚಾರ್ಲಿ ತಾಯಿ ಆಗುವ ಸಾಧ್ಯತೆ ಬಗ್ಗೆ ಕೇಳುತ್ತಿದ್ದೆ. ಅದಕ್ಕೆ ವಯಸ್ಸು ಆಗಿದ್ದರಿಂದ ಏನಾಗತ್ತೋ ಗೊತ್ತಿಲ್ಲ ಅಂತ ಅವರು ಹೇಳುತ್ತಿದ್ದರು. ಅಚ್ಚರಿ ಏನೆಂದರೆ ಮೇ 9ರಂದು ಚಾರ್ಲಿ 6 ಮರಿಗಳಿಗೆ ಜನ್ಮ ನೀಡಿದೆ. ಹಾಗಾಗಿ ಚಾರ್ಲಿ ಮತ್ತು ಅದರ ಮರಿಗಳನ್ನು ನೋಡಲು ನಾನು ಮೈಸೂರಿಗೆ ಬಂದೆ’ ಎಂದಿದ್ದಾರೆ ರಕ್ಷಿತ್ ಶೆಟ್ಟಿ. ಇನ್ಸ್ಟಾಗ್ರಾಮ್ ಲೈವ್ನಲ್ಲಿ ರಕ್ಷಿತ್ ಶೆಟ್ಟಿ ಅವರು ಚಾರ್ಲಿ ಮತ್ತು ಅದರ ಮರಿಗಳನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:06 pm, Wed, 15 May 24