ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ತೂಗುದೀಪ ಬಂಧನವಾಗಿ ಮೂರು ತಿಂಗಳಾಗಿದೆ. ಪೊಲೀಸರು ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ಮುಗಿಸಿ 3991 ಪುಟಗಳ ಸುದೀರ್ಘ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಇದರ ನಡುವೆ ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿಯನ್ನೇ ಸರಿಯಿಲ್ಲವೆಂದು, ಉದ್ದೇಶಪೂರ್ವಕವಾಗಿ ದುರ್ಬಲ ಚಾರ್ಜ್ ಶೀಟ್ ಸಲ್ಲಿಸಿದ್ದಾರೆಂದು ಆರೋಪಿಸಿ ಕೆಲವರು ತನಿಖಾಧಿಕಾರಿಗಳ ವಿರುದ್ಧವೇ ದೂರು ಸಲ್ಲಿಸಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರ ತನಿಖೆ, ನಿಷ್ಠೆಯನ್ನು ಕೊಂಡಾಡಲಾಗಿದೆ. ಆದರೆ ಇದೀಗ ವ್ಯಕ್ತಿಯೊಬ್ಬರು ದರ್ಶನ್ ಪ್ರಕರಣದ ತನಿಖಾಧಿಕಾರಿಗಳ ವಿರುದ್ಧವೇ ದೂರು ಸಲ್ಲಿಸಿದ್ದಾರೆ.
ಆರೋಪ ಪಟ್ಟಿಯನ್ನು ದರ್ಶನ್ಗೆ ಅನುಕೂಲಕರವಾಗಿ ತಯಾರಿಸಲಾಗಿದೆ ಎಂದು ಆರೋಪಿಸಿ ವೆಂಕಟಾಚಲಪತಿ ಎಂಬಾತ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾನೆ. ಕೊಲೆ ಪ್ರಕರಣದಿಂದ ದರ್ಶನ್ ತಪ್ಪಿಸಿಕೊಳ್ಳಲಿ ಎಂಬ ಉದ್ದೇಶದಿಂದ ಸಾಕಷ್ಟು ಲೂಪ್ ಹೋಲ್ಗಳಿರುವ, ದುರ್ಬಲವಾಗಿರುವ ಆರೋಪ ಪಟ್ಟಿಯನ್ನು ಪೊಲೀಸರು ಸಲ್ಲಿಸಿದ್ದಾರೆ ಎಂದು ಆರೋಪಿಸಿ ತನಿಖಾಧಿಕಾರಿ ಎಸಿಪಿ ಚಂದನ್, ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಹಾಗೂ ಡಿಸಿಪಿ ಗಿರೀಶ್ ಅವರುಗಳ ವಿರುದ್ಧ ಲೋಕಾಯುಕ್ತರಿಗೆ ದೂರು ದಾಖಲಿಸಿದ್ದಾನೆ. ಈ ಮೂವರ ವಿರುದ್ಧ ಭ್ರಷ್ಟಾಚಾರದ ತನಿಖೆ ನಡೆಸಬೇಕೆಂದು ಆತ ಒತ್ತಾಯಿಸಿದ್ದಾನೆ.‘
ಇದನ್ನೂ ಓದಿ:‘ಬೇರೇ ಜೈಲಿಗೆ ಶಿಫ್ಟ್ ಮಾಡಿ ಪ್ಲೀಸ್’; ಬಳ್ಳಾರಿ ಜೈಲಲ್ಲಿ ಸುಸ್ತಾದ ದರ್ಶನ್
ಪೊಲೀಸರು ಕಳೆದ ವಾರ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎಲ್ಲ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಆರೋಪ ಪಟ್ಟಿಯಲ್ಲಿರುವ ಕೆಲವು ಮುಖ್ಯವಾದ ಮಾಹಿತಿಗಳು ಮಾಧ್ಯಮಗಳ ಮೂಲಕ ಸಾರ್ವಜನಿಕಗೊಂಡಿವೆ. ದರ್ಶನ್, ಪಟ್ಟಣಗೆರೆ ಶೆಡ್ ಬಿಟ್ಟು ತೆರಳಿದಾಗ ಕೊಲೆಯಾದ ರೇಣುಕಾ ಸ್ವಾಮಿ ಜೀವಂತ ಇದ್ದ ಎಂಬ ಅಂಶ ಚಾರ್ಜ್ಶೀಟ್ನಲ್ಲಿ ಉಲ್ಲೇಖವಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಈಗ ದೂರು ನೀಡಿರುವ ವೆಂಕಟಾಚಲಪತಿ ಅನುಮಾನ ವ್ಯಕ್ತಪಡಿಸಿದ್ದಾರೆ. ದರ್ಶನ್ ಅನ್ನು ಉಳಿಸಲೆಂದೇ ಹೀಗೆ ಆರೋಪ ಪಟ್ಟಿಯನ್ನು ತಿದ್ದಲಾಗಿದೆ ಎಂದು ಆರೋಪ ಮಾಡಿದ್ದಾರೆ.
ಚಾರ್ಜ್ ಶೀಟ್ನಲ್ಲಿರುವಂತೆ ಎಲ್ಲ ಆರೋಪಿಗಳು ತಮ್ಮ ಸ್ವ ಇಚ್ಛಾ ಹೇಳಿಕೆಯನ್ನು ದಾಖಲಿಸಿದ್ದಾರೆ. ಕೆಲವು ಆರೋಪಿಗಳ ಹೇಳಿಕೆಗಳನ್ನು ನ್ಯಾಯಾಧೀಶರ ಮುಂದೆ 164 ಸೆಕ್ಷನ್ ಅಡಿಯಲ್ಲಿ ದಾಖಲಿಸಲಾಗಿದೆ. ಪಟ್ಟಣಗೆರೆ ಶೆಡ್ನ ಸೆಕ್ಯುರಿಟಿ ಇನ್ನೂ ಕೆಲವರು ಸಾಕ್ಷ್ಯಗಳಾಗಿ ಹೇಳಿಕೆ ದಾಖಲಿಸಿದ್ದಾರೆ. ಹಲವು ಸಾಕ್ಷ್ಯಗಳನ್ನು, ಡಿಜಿಟಲ್ ಸಾಕ್ಷ್ಯಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಒಟ್ಟಾರೆಯಾಗಿ ದರ್ಶನ್ ತಪ್ಪಿಸಿಕೊಳ್ಳುವುದು ಸುಲಭವಲ್ಲ ಎಂಬ ಮಾತುಗಳೇ ಕೇಳಿ ಬರುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:27 pm, Fri, 13 September 24