‘ಅಮ್ಮಾವ್ರ ಗಂಡ’ ಚಿತ್ರದ ನಟಿ ಭಾಗ್ಯಶ್ರೀ ಪುತ್ರಿಯ ಸಿನಿಮಾಗೆ ನಾಗಶೇಖರ್ ನಿರ್ದೇಶನ
ಜನಪ್ರಿಯ ನಟಿ ಭಾಗ್ಯಶ್ರೀ ರೀತಿಯೇ ಅವರ ಪುತ್ರಿ ಅವಂತಿಕಾ ದಸ್ಸಾನಿ ಕೂಡ ಬಹುಭಾಷೆಯಲ್ಲಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ನಾಗಶೇಖರ್ ನಿರ್ದೇಶನ ಮಾಡಲಿರುವ ಹೊಸ ಸಿನಿಮಾಗೆ ಅವಂತಿಕಾ ಹೀರೋಯಿನ್ ಆಗಿದ್ದಾರೆ. ನಿರಂಜನ್ ಸುಧೀಂದ್ರ ಅವರು ಈ ಸಿನಿಮಾಗೆ ಹೀರೋ ಆಗಿದ್ದಾರೆ. ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ..
ಖ್ಯಾತ ನಿರ್ದೇಶಕ ನಾಗಶೇಖರ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಈಗಾಗಲೇ ‘ಮೈನಾ’, ‘ಸಂಜು ವೆಡ್ಸ್ ಗೀತಾ’ ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಅವರಿಗೆ ಬಹಳ ಬೇಡಿಕೆ ಇದೆ. ಸದ್ಯಕ್ಕೆ ಅವರು ‘ಸಂಜು ವೆಡ್ಸ್ ಗೀತಾ 2’ ಸಿನಿಮಾದ ಶೂಟಿಂಗ್ ಮುಗಿಸಿಕೊಂಡಿದ್ದಾರೆ. ಅದರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಆ ನಡುವೆ ನಾಗಶೇಖರ್ ಅವರ ಮುಂದಿನ ಸಿನಿಮಾ ಬಗ್ಗೆ ಅಪ್ಡೇಟ್ ಸಿಕ್ಕಿದೆ. ವಿಶೇಷ ಏನೆಂದರೆ, ಸ್ಟಾರ್ ನಟಿ ಭಾಗ್ಯಶ್ರೀ ಅವರ ಪುತ್ರಿಯನ್ನು ನಾಗಶೇಖರ್ ಅವರು ಲಾಂಚ್ ಮಾಡುತ್ತಿದ್ದಾರೆ.
ನಟಿ ಭಾಗ್ಯಶ್ರೀ ಅವರು ಬಹುಭಾಷೆಯಲ್ಲಿ ಫೇಮಸ್. ಸಲ್ಮಾನ್ ಖಾನ್ ಜೊತೆ ‘ಮೈ ನೇ ಪ್ಯಾರ್ ಕಿಯಾ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು ಭಾಗ್ಯಶ್ರೀ ಮೋಡಿ ಮಾಡಿದರು. ಕನ್ನಡದಲ್ಲಿ ‘ಅಮ್ಮಾವ್ರ ಗಂಡ’ ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಭಾಗ್ಯಶ್ರೀ ಅವರ ಮಕ್ಕಳು ಕೂಡ ಚಿತ್ರರಂಗದಲ್ಲಿ ಆಸಕ್ತಿ ಹೊಂದಿದ್ದಾರೆ. ಭಾಗ್ಯಶ್ರೀ ಪುತ್ರಿ ಅವಂತಿಕಾ ದಸ್ಸಾನಿ ಅವರು ಈಗ ಕನ್ನಡ ಚಿತ್ರರಂಕ್ಕೆ ಎಂಟ್ರಿ ನೀಡಲು ಸಜ್ಜಾಗಿದ್ದಾರೆ.
ಅವಂತಿಕಾ ದಸ್ಸಾನಿ ಅವರು ನಟಿಸಲಿರುವ ಹೊಸ ಸಿನಿಮಾಗೆ ನಿರ್ದೇಶಕ ನಾಗಶೇಖರ್ ಅವರು ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಈ ಸಿನಿಮಾವನ್ನು ಅನೌನ್ಸ್ ಮಾಡಲಾಗಿದೆ. ಈ ಚಿತ್ರಕ್ಕೆ ‘ಕ್ಯೂ’ ಎಂದು ಹೆಸರು ಇಡಲಾಗಿದೆ. ನಾಗಶೇಖರ್ ನಿರ್ದೇಶನದ ಸಿನಿಮಾಗಳಲ್ಲಿ ನಟಿಯರ ಪಾತ್ರಕ್ಕೆ ಮಹತ್ವ ಇರುತ್ತದೆ. ಈಗ ಅವರು ‘ಕ್ಯೂ’ ಸಿನಿಮಾದಲ್ಲಿ ಅವಂತಿಕಾಗೆ ಯಾವ ರೀತಿ ಪಾತ್ರ ನೀಡಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ವಿಶೇಷ ಏನೆಂದರೆ, ಭಾಗ್ಯಶ್ರೀ ರೀತಿ ಅವರ ಪುತ್ರಿ ಅವಂತಿಕಾ ದಸ್ಸಾನಿ ಕೂಡ ಬಹುಭಾಷೆಯಲ್ಲಿ ಮಿಂಚಲಿದ್ದಾರೆ. ‘ಕ್ಯೂ’ ಸಿನಿಮಾ ಕನ್ನಡ, ತೆಲುಗು, ತಮಿಳು ಮುಂತಾದ ಭಾಷೆಗಳಲ್ಲಿ ಮೂಡಿಬರಲಿದೆ. ಈ ಸಿನಿಮಾ ಬಿಗ್ ಬಜೆಟ್ನಲ್ಲಿ ನಿರ್ಮಾಣ ಆಗಲಿದೆ. ಈ ಸಿನಿಮಾದಲ್ಲಿ ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ಅವರು ಹೀರೋ ಆಗಿ ನಟಿಸಲಿದ್ದಾರೆ. ನಿರಂಜನ್ ಮತ್ತು ಆವಂತಿಕಾ ಜೋಡಿಯ ಈ ಸಿನಿಮಾ ಮೇಲೆ ನಿರೀಕ್ಷೆ ಮೂಡಿದೆ.
ಇದನ್ನೂ ಓದಿ: ಸಿನಿಮಾ ನಿರ್ದೇಶಕ ನಾಗಶೇಖರ್ ಕಾರು ಅಪಘಾತ: ಇಲ್ಲಿದೆ ವಿಡಿಯೋ
ನಾಗಶೇಖರ್ ಅವರು ‘ಕ್ಯೂ’ ಸಿನಿಮಾಗೆ ನಿರ್ದೇಶನ ಮಾತ್ರವಲ್ಲದೇ ನಿರ್ಮಾಣವನ್ನೂ ಮಾಡುತ್ತಾರೆ. ‘ನಾಗಶೇಖರ್ ಮ್ಯಾಜಿಕ್ಸ್’ ಬ್ಯಾನರ್ ಮೂಲಕ ಅವರು ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಅಷ್ಟೇ ಅಲ್ಲದೇ, ಸಂಗೀತ ನಿರ್ದೇಶನದ ಜವಾಬ್ದಾರಿಯನ್ನೂ ಅವರೇ ವಹಿಸಿಕೊಂಡಿದ್ದಾರೆ. ಕಥೆ, ಚಿತ್ರಕಥೆಯನ್ನೂ ಅವರೇ ಬರೆದಿದ್ದಾರೆ. ಈ ಚಿತ್ರಕ್ಕೆ ರಾಮ್ ಚಿರು ಅವರು ಲೈನ್ ಪ್ರೊಡ್ಯೂಸರ್ ಆಗಿದ್ದಾರೆ. ಭಾವನಾ ರವಿ ಅವರು ಪ್ರೆಸೆಂಟ್ ಮಾಡುತ್ತಿದ್ದಾರೆ. ಡಿ.ಜೆ. ಚಕ್ರವರ್ತಿ ಸಂಭಾಷಣೆ ಬರೆದಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾಗೆ ಶೂಟಿಂಗ್ ಆರಂಭ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.