ಉಪೇಂದ್ರ ನಟನೆಯ ‘ಯುಐ’ ಸಿನಿಮಾ ಇಂದು (ಡಿಸೆಂಬರ್ 20) ವಿಶ್ವಾದ್ಯಂತ ರಿಲೀಸ್ ಆಗಿದೆ. ಈ ಚಿತ್ರ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪರಭಾಷಿಗರು ಚಿತ್ರದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಈ ಚಿತ್ರದ ಪ್ರಚಾರಕ್ಕಾಗಿ ಉಪೇಂದ್ರ ಅವರು ಬೇರೆ ಬೇರೆ ರಾಜ್ಯಗಳಿಗೆ ತೆರಳಿದ್ದರು. ಈ ವೇಳೆ ಅವರಿಗೆ ಒಂದು ಸರ್ಪ್ರೈಸ್ ಕಾದಿತ್ತು. ‘ಎ’ ಚಿತ್ರದಲ್ಲಿ ಬಾಲಕನ ಪಾತ್ರ ಮಾಡಿದ್ದ ಬಾಲಕ ಈಗ ಬೆಳೆದು ದೊಡ್ಡವನಾಗಿ ಉಪ್ಪಿ ಎದುರು ಬಂದು ನಿಂತಿದ್ದಾರೆ. ಈ ಅಪರೂಪದ ವಿಡಿಯೋ ವೈರಲ್ ಆಗಿದೆ.
‘ಎ’ ಸಿನಿಮಾ 1998ರಲ್ಲಿ ರಿಲೀಸ್ ಆಗಿತ್ತು. ‘ಐ ಆ್ಯಮ್ ಗಾಡ್, ಗಾಡ್ ಈಸ್ ಗ್ರೇಟ್’ ಎಂದು ಹೇಳುತ್ತಾ ಸುತ್ತಾಡುತ್ತಾರೆ ಉಪ್ಪಿ. ಈ ಚಿತ್ರದ ಆರಂಭದಲ್ಲಿ ಕೆಲಸಕ್ಕೆ ಬಾರದ ವ್ಯಕ್ತಿಗಳನ್ನು ಉಪೇಂದ್ರ ಸಾಯಿಸೋ ದೃಶ್ಯ ಇದೆ. ಈ ವೇಳೆ ರೈಲ್ವೆ ಟ್ರ್ಯಾಕ್ ಬಳಿ ಉಪ್ಪಿ ಅವರು ನಡೆದು ಬರುವಾಗ, ಮಹಿಳೆ ಒಬ್ಬಳು ಪತಿಗೆ ‘ಸತ್ತೋಗು’ ಎಂದು ಹೇಳುತ್ತಾಳೆ. ಮರುಕ್ಷಣವೇ ಗುಂಡು ಹೊಡೆದು ಉಪ್ಪಿ ಆ ವ್ಯಕ್ತಿಯನ್ನು ಸಾಯಿಸುತ್ತಾರೆ.
ಈ ದಂಪತಿಯ ಮಗ ಅಲ್ಲಿಯೇ ಅಳುತ್ತಾ ಕೂತಿರುತ್ತಾನೆ. ಆ ಬಾಲಕನ ಬಳಿ ಬರೋ ಉಪ್ಪಿ, ‘ಅಳಬೇಡ, ಅವರ ತೆವಲಿಗೆ ನಿನ್ನ ಹುಟ್ಟಿಸಿದ್ದಾರೆ. ಜಾಸ್ತಿ ಯೋಚನೆ ಮಾಡಿದ್ರೆ ನೀನು ನನ್ನ ರೀತಿ ಆಗ್ಬಿಡ್ತೀಯಾ. ಸೆಂಟಿಮೆಂಟ್ ಇದ್ರೆ ಖಾಲಿ ತಟ್ಟೆನೇ ಗಟ್ಟಿ ಆಗಿಬಿಡುತ್ತದೆ. ಪ್ರಪಂಚ ವಿಶಾಲವಾಗಿದೆ. ಆರಾಮಗಿ ಹೋಗಿ ಬದುಕಿಕೋ’ ಎನ್ನುತ್ತಾರೆ ಉಪ್ಪಿ. ಆ ಕ್ಷಣವೇ ಬಾಲಕ ಓಡಿ ಹೋಗುತ್ತಾನೆ.
ಇದನ್ನೂ ಓದಿ: ‘ಯುಐ’ ಚಿತ್ರ ರಿಲೀಸ್ ಬೆನ್ನಲ್ಲೇ ಪ್ರೇಕ್ಷಕರಿಗೆ ಸವಾಲು ಹಾಕಿದ ಉಪೇಂದ್ರ; ಚಾಲೆಂಜ್ ಸ್ವೀಕರಿಸುತ್ತೀರಾ?
ಈ ವೇಳೆ ಉಪೇಂದ್ರ ಒಂದು ಮಾತು ಹೇಳುತ್ತಾರೆ. ‘ಈ ಹುಡುಗ ಓಡ್ತಿರೋ ಸ್ಪೀಡ್ ನೋಡಿದ್ರೆ ಸುಭಾಷ್ ಚಂದ್ರ ಬೋಸ್ ಆಗಬಹುದು’ ಎನ್ನುತ್ತಾರೆ. ಈಗ ಹುಡುಗ ದೊಡ್ಡವನಾಗಿ ಉಪ್ಪಿ ಎದುರು ಬಂದಿದ್ದಾರೆ. ‘ಯುಐ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಈ ವ್ಯಕ್ತಿ, ‘ಎ ಚಿತ್ರದಲ್ಲಿ ಇರೋ ಹುಡುಗ ನಾನೇ’ ಎಂದು ಅವರು ಪರಿಚಯಿಸಿಕೊಂಡರು. ಇದನ್ನು ಕೇಳಿ ಉಪ್ಪಿ ಶಾಕ್ ಆದರು, ‘ಅಲ್ಲಿ ಓಡಿ ಹೋದ ನೀವು, ಈಗ ಬಂದಿದ್ದೀರಾ’ ಎಂದು ಕೇಳಿ ನಕ್ಕರು ಉಪ್ಪಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:48 am, Fri, 20 December 24