ಕೊರೊನಾ ಎರಡನೇ ಅಲೆ ಅಬ್ಬರ ಜೋರಾಗಿರುವಾಗಲೇ ಮೂರನೇ ಅಲೆಯ ಭಯ ಜನರನ್ನು ಕಾಡುತ್ತಿದೆ. ಕೊರೊನಾ ಮುಂದಿನ ಅಲೆ ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರಲಿದೆ ಎನ್ನುವ ಸುದ್ದಿ ಎಲ್ಲರನ್ನೂ ಚಿಂತೆಗೀಡು ಮಾಡಿದೆ. ಹೀಗಿರುವಾಗಲೇ ಆಂಬುಲೆನ್ಸ್ ಚಾಲಕನಾಗಿರುವ ಸ್ಯಾಂಡಲ್ವುಡ್ ಹೀರೋ ಅರ್ಜುನ್ ಗೌಡ ಎಚ್ಚರಿಕೆ ಒಂದನ್ನು ನೀಡಿದ್ದಾರೆ.
ಕನ್ನಡದಲ್ಲಿ ಶಿವರಾಜ್ಕುಮಾರ್, ಪುನೀತ್ ರಾಜ್ಕುಮಾರ್, ದರ್ಶನ್ ಮುಂತಾದ ಸ್ಟಾರ್ ನಟರ ಚಿತ್ರಗಳಲ್ಲಿ ಅಭಿನಯಿಸಿರುವ ಅರ್ಜುನ್ ಗೌಡ ಅವರು ಆಂಬುಲೆನ್ಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಹಾಗೂ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ಅರ್ಜುನ್ ಗೌಡ ಹೊಸ ವಿಡಿಯೋ ಒಂದನ್ನು ಮಾಡಿ ಹಂಚಿಕೊಂಡಿದ್ದಾರೆ.
‘ಎಲ್ಲಿಗೂ ನಮಸ್ಕಾರ. ಕೊರೊನಾ ಮೂರನೇ ಅಲೆ ಬರಲಿದೆ. ಅದರಿಂದ ಮಕ್ಕಳಿಗೆ ತೊಂದರೆ ಆಗುತ್ತದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಮೂರನೇ ಅಲೆ ಬರತ್ತೆ ಎಂದು ಎಲ್ಲರೂ ಕಾಯುತ್ತಾ ಕೂತಿದೀರಾ ಅನಿಸುತ್ತೆ. ಆದರೆ, ಅದು ಈಗಲೇ ಬಂದಿದೆ. ಅಪ್ಪ-ಅಮ್ಮನಿಗೆ ಕೊರೊನಾ ಬರುತ್ತದೆ. ಈ ವೇಳೆ ಮಕ್ಕಳು ಐಸೋಲೇಟ್ ಆಗ್ತಿದಾರೆ. ಅದೇ ರೀತಿ ಅಪ್ಪ-ಅಮ್ಮ ನಿಧನ ಆಗ್ತಿದಾರೆ. ಅಂಥವರ ಮಕ್ಕಳು ಏನು ಮಾಡ್ತಾರೆ’ ಎಂದು ಅರ್ಜುನ್ ಮಾತು ಆರಂಭಿಸಿದಾರೆ.
‘ನನಗೆ ನಿತ್ಯ 25 ಫೋನ್ಗಳು ಬರುತ್ತಿವೆ. ನಮಗೆ ಕೊರೊನಾ ಬಂದಿದೆ. ನಮ್ಮ ಮಕ್ಕಳನ್ನು ಎಲ್ಲಾದರೂ ಐಸೋಲೇಷನ್ ಮಾಡಬೇಕು. ಆ ಬಗ್ಗೆ ಗೊತ್ತಾ ಎಂದು ಕೇಳುತ್ತಾರೆ. ಇನ್ನೂ ಕೆಲವರು, ನಮ್ಮ ಸಂಬಂಧಿಕರಲ್ಲಿ ಅಪ್ಪ-ಅಮ್ಮ ಇಬ್ಬರೂ ಮೃತಪಟ್ಟಿದ್ದಾರೆ. ಅವರ ಮಕ್ಕಳನ್ನು ಅಡಾಪ್ಟ್ ಮಾಡಿಕೊಳ್ಳುವವರು ಯಾರಾದಾರೂ ಸಿಕ್ತಾರ ಎಂದು ಕೇಳುತ್ತಾ ಇದಾರೆ. ಇದಕ್ಕೆಲ್ಲಾ ಹೊಣೆ ಯಾರು?’ ಎಂದು ಅರ್ಜುನ್ ಮರುಗಿದ್ದಾರೆ.
‘ಇದಕ್ಕೆ ಸಂಬಂಧಕ್ಕೆ ಪಟ್ಟ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದೇನೆ. ಒಂದೊಳ್ಳೆಯ ಔಟ್ಕಮ್ ಜತೆ ಬರುತ್ತೇನೆ. ಕೊರೊನಾ ಬರೋದಕ್ಕೂ ಮೊದಲೇ ಪ್ರಿಪೇರ್ ಆಗಿದ್ರೆ ಒಳ್ಳೆಯದು. ಇದೇ ಗಾಡಿಲೀ ತುಂಬಾ ಹೆಣಗಳನ್ನು ಸಾಗಿಸಿದೀನಿ. ಈಗ ಮಕ್ಕಳ ಹೆಣವನ್ನೂ ತೆಗೆದುಕೊಂಡು ಹೋಗಬೇಕು ಎಂದರೆ ಅದೇಕೋ ಅಷ್ಟು ಸರಿಯಾಗಿ ಕಾಣಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:
Actor Arjun Gowda: ಜನರ ಕಷ್ಟ ನೋಡಲಾಗದೇ ಆ್ಯಂಬುಲೆನ್ಸ್ ಚಾಲಕನಾದ ಕನ್ನಡ ಸಿನಿಮಾ ನಟ ಅರ್ಜುನ್ ಗೌಡ