ನಟ ಧ್ರುವ ಸರ್ಜಾ ಸಿನಿಮಾ ಜೊತೆಗೆ ಸಾಮಾಜಿಕ ಕಾರ್ಯದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದೇವಸ್ಥಾನ ನಿರ್ಮಾಣ ಸೇರಿದಂತೆ ಕೆಲವು ಸಾಮಾಜಿಕ ಕಾರ್ಯಗಳಿಗೆ ಸಹಾಯ ಹಸ್ತ ಚಾಚುತ್ತಿರುತ್ತಾರೆ. ಕನ್ನಡ ಭಾಷೆಯ ಬಗ್ಗೆಯೂ ಆಗಾಗ್ಗೆ ನಿಲುವು ತಳೆಯುತ್ತಿರುತ್ತಾರೆ. ಇದೀಗ ಧ್ರುವ ಸರ್ಜಾ ಬುಡಕಟ್ಟು ಮಕ್ಕಳಿಗೆ ನೆರವಿನ ಹಸ್ತ ಚಾಚಿದ್ದಾರೆ. ಮಕ್ಕಳ ಆಟಕ್ಕೆ ಬೇಕಾದ ಕೆಲವು ಕ್ರೀಡಾ ಸಲಕರಣೆಗಳನ್ನು ಮಕ್ಕಳಿಗಾಗಿ ಕಳಿಸಿಕೊಟ್ಟಿದ್ದಾರೆ.
ಇತ್ತೀಚೆಗಷ್ಟೆ ನಟ ಧ್ರುವ ಸರ್ಜಾ ಪತ್ನಿ ಪ್ರೇರಣಾ ಮತ್ತು ಮಕ್ಕಳೊಡನೆ ನಾಗರಹೊಳೆಗೆ ಸಫಾರಿಗಾಗಿ ಬಂದಿದ್ದರಂತೆ. ಆ ಸಮಯದಲ್ಲಿ ಚಾಮರಾಜನಗರದ ಹುತ್ಕೂರು ಹಾಡಿಯ ಬುಡಕಟ್ಟು ವಸತಿ ಶಾಲೆಗೆ ಭೇಟಿ ನೀಡಿದ್ದರು. ಶಾಲಾ ಮಕ್ಕಳು ಮತ್ತು ಶಿಕ್ಷಕರೊಟ್ಟಿಗೆ ಸಮಯ ಕಳೆದ ನಟ ಧ್ರುವ ಸರ್ಜಾ ಮತ್ತು ಅವರ ಕುಟುಂಬದವರು, ಶಾಲೆಗೆ ತಾವೇನು ಸಹಾಯ ಮಾಡಬಹುದು ಎಂಬುದನ್ನು ಶಿಕ್ಷಕರಿಂದ ಕೇಳಿ ತಿಳಿದುಕೊಂಡಿದ್ದಾರೆ.
ಬಳಕ ಮೈಸೂರಿನಲ್ಲಿ ಆಟೋ ಓಡಿಸುತ್ತಿದ್ದ ತನ್ನ ಅಭಿಮಾನಿಗೆ ಕರೆ ಮಾಡಿ, ಅಂಗಡಿಯೊಂದರ ಬಳಿ ಹೋಗುವಂತೆ ಸೂಚಿಸಿದ್ದಾರೆ. ಅಲ್ಲಿ ಶಾಲೆ ಮಕ್ಕಳಿಗೆ ಬೇಕಾದ ಸಲಕರಣೆಗಳನ್ನೆಲ್ಲ ತೆಗೆದುಕೊಳ್ಳುವಂತೆ ಹೇಳಿ, ಅದಕ್ಕೆ ಹಣವನ್ನು ಧ್ರುವ ಸರ್ಜಾ ಅವರೇ ಹಾಕಿದ್ದಾರೆ. ಬಳಿಕ ಆ ಅಭಿಮಾನಿ ಕಡೆಯಿಂದ ಎಲ್ಲ ವಸ್ತುಗಳನ್ನು ಬುಡಕಟ್ಟು ವಸತಿ ಶಾಲೆಗೆ ಕಳಸಿಕೊಟ್ಟಿದ್ದಾರೆ. ಹಲವಾರು ವಾಲಿಬಾಲ್ಗಳು, ಬ್ಯಾಡ್ಮಿಂಟನ್ ಕಿಟ್, ಕ್ರಿಕೆಟ್ ಕಿಟ್, ಗ್ಲೌಸ್, ನೀ ಕ್ಯಾಪ್ ಇನ್ನೂ ಹಲವಾರು ಕಲಿಕಾ ಸಾಮಗ್ರಿಗಳನ್ನು ಧ್ರುವ ಸರ್ಜಾ ಆ ಬುಡಕಟ್ಟು ಶಾಲೆಗೆ ಕಳಿಸಿಕೊಟ್ಟಿದ್ದಾರೆ.
ಇದನ್ನೂ ಓದಿ:ನಾವು ಸಿನಿಮಾ ಹೀರೋ, ಇವರೇ ನಿಜವಾದ ಹೀರೋ: ಹೆಮ್ಮೆಯ ಕನ್ನಡತಿ ಬಗ್ಗೆ ಧ್ರುವ ಸರ್ಜಾ ಮಾತು
ಧ್ರುವ ಸರ್ಜಾ ಕಳಿಸಿರುವ ವಸ್ತುಗಳನ್ನು ಸ್ವೀಕರಿಸಿರುವ ವಿದ್ಯಾರ್ಥಿಗಳು ಧ್ರುವ ಸರ್ಜಾಗೆ ಧನ್ಯವಾದ ಹೇಳಿದ್ದಾರೆ. ಧ್ರುವ ಸರ್ಜಾ ಮಾಡಿರುವ ಸೇವೆಯ ಬಗ್ಗೆ ಸ್ಥಳೀಯ ವ್ಯಕ್ತಿಯೊಬ್ಬ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದು, ಈ ಶಾಲೆಗೆ ಹಲವು ರಾಜಕಾರಣಿಗಳು, ಕೆಲ ಸಿನಿಮಾ ಸೆಲೆಬ್ರಿಟಿಗಳು ಬಂದು ಹೋಗಿದ್ದಾರೆ ಆದರೆ ಯಾರೂ ಸಹ ಧ್ರುವ ರೀತಿ ಸಹಾಯ ಮಾಡಿರಲಿಲ್ಲ, ಧ್ರುವ ಅವರ ಸೇವೆಯಿಂದ ಮಕ್ಕಳಿಗೆ ಸಹಾಯ ಆಗಿದೆ ಎಂದು ಹೇಳಿದ್ದಾರೆ.
ಧ್ರುವ ಸರ್ಜಾ ಪ್ರಸ್ತುತ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರೇಮ್ ನಿರ್ದೇಶನದ ‘ಕೆಡಿ’ ಸಿನಿಮಾದಲ್ಲಿ ಧ್ರುವ ಸರ್ಜಾ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಸಂಜಯ್ ದತ್ ಸೇರಿದಂತೆ ಹಲವು ಬಹು ಭಾಷಾ ತಾರೆಯರು, ಕನ್ನಡದ ರಮೇಶ್ ಅರವಿಂದ್ ಸೇರಿದಂತೆ ಇನ್ನೂ ಕೆಲವು ದಿಗ್ಗಜ ನಟರು ನಟಿಸುತ್ತಿದ್ದಾರೆ. ಸಿನಿಮಾಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿದೆ. ಸಿನಿಮಾದ ಚಿತ್ರೀಕರಣ ತುರುಸುನಿಂದ ಸಾಗಿದ್ದು, ಏಪ್ರಿಲ್ ವೇಳೆಗೆ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ