ನಟ ದಿಗಂತ್ ಮಂಚಾಲೆಗೆ (Diganth Manchale) ಈ ವರ್ಷ ಸಖತ್ ವಿಶೇಷ ಎನಿಸಿಕೊಂಡಿದೆ. 2024ರಲ್ಲಿ ಅವರ ನಟನೆಯ ‘ಬ್ಯಾಚುಲರ್ ಪಾರ್ಟಿ’ ಹಾಗೂ ‘ಮಾರಿಗೋಲ್ಡ್’ ಸಿನಿಮಾ ರಿಲೀಸ್ ಆಗಿದೆ. ಇದರ ಜೊತೆಗೆ ಅವರು ಹೊಸ ಸಿನಿಮಾಗಳನ್ನು ಘೋಷಣೆ ಮಾಡುತ್ತಿದ್ದಾರೆ. ಬಹುನಿರೀಕ್ಷಿತ ‘ಉತ್ತರಕಾಂಡ’ ಸಿನಿಮಾದಲ್ಲಿ ದೂದ್ಪೇಡಾ ನಟಿಸುತ್ತಿದ್ದಾರೆ. ಹಾಗಂತ ಅವರ ಪಾತ್ರ ಪೇಡೆಯಷ್ಟು ಸ್ವೀಟ್ ಇಲ್ಲ. ಸಖತ್ ರಗಡ್ ಆಗಿ ಅವರ ಪಾತ್ರ ಇರಲಿದೆ. ಈ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು, ಗಮನ ಸೆಳೆಯುತ್ತಿದೆ.
‘ಉತ್ತರಕಾಂಡ’ ಸಿನಿಮಾದಲ್ಲಿ ಡಾಲಿ ಧನಂಜಯ್, ಶಿವಣ್ಣ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಈ ಚಿತ್ರದ ಟೀಸರ್ ರಿಲೀಸ್ ಆಗಿ ಗಮನ ಸೆಳೆದಿದೆ. ಇದರ ಜೊತೆಗೆ ಸಿನಿಮಾದ ಪಾತ್ರವರ್ಗ ಹಿರಿದಾಗುತ್ತಿದೆ. ದಿಗಂತ್ ಅವರು ತಂಡ ಸೇರಿಕೊಂಡಿದ್ದಾರೆ. ಮಿರ್ಚಿ ಮಲ್ಲಿಗೆ ಎಂಬ ಪಾತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಪೋಸ್ಟರ್ನಲ್ಲಿ ಖಡಕ್ ಲುಕ್ ಮೂಲಕ ಕುತೂಹಲ ಕೆರಳಿಸಿದ್ದಾರೆ.
ಇದನ್ನೂ ಓದಿ: ‘ಉತ್ತರಕಾಂಡ’ ಚಿತ್ರಕ್ಕೆ ‘ಶೈತಾನ್’ ಸಿನಿಮಾ ಸಂಗೀತ ಸಂಯೋಜಕ; ಕನ್ನಡಕ್ಕೆ ಬಂದ ಅಮಿತ್ ತ್ರಿವೇದಿ
‘ಲವ್ ಮತ್ತ್ ಗುಟ್ಕಾ ಜೀವಕ್ಕ್ ಅನಾಹುತ ಹೆಂಗ ಹಂಗಾ ದೂದ್ ಪೇಡಾ ದಿಗಂತ್ ಇಗ್ ಮಿರ್ಚಿ ಮಲ್ಲಿಗಿ ಉತ್ತರಕಾಂಡ ಪಿಚ್ಚರದಾಗ’ ಎಂದು ನಿರ್ಮಾಣ ಸಂಸ್ಥೆ ಕೆಆರ್ಜಿ ಸ್ಟುಡಿಯೋಸ್ ಪೋಸ್ಟ್ ಮಾಡಿದೆ. ದಿಗಂತ್ ಅವರು ಸಾಫ್ಟ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಆದರೆ, ಈ ಬಾರಿ ಅವರ ಲುಕ್ ಬದಲಾಗಿದೆ. ಕೈಯಲ್ಲಿ ಪಾನ್ ಪರಾಗ್ ಪ್ಯಾಕ್ ಇದೆ. ಪೋಸ್ಟರ್ ನೋಡಿದವರು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ಬೆಂಕಿ ಲುಕ್ ರೀ ಆರ್ಎಂಡಿ ಭಾಯ್’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
‘ಉತ್ತರಕಾಂಡ’ ಪಕ್ಕಾ ಆ್ಯಕ್ಷನ್ ಡ್ರಾಮಾ ಚಿತ್ರವಾಗಿರಲಿದೆ. ಈ ಸಿನಿಮಾದಲ್ಲಿ ಶಿವರಾಜ್ಕುಮಾರ್ ಮತ್ತು ಡಾಲಿ ಧನಂಜಯ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೊದಲು ‘ಟಗರು’ ಸಿನಿಮಾದಲ್ಲಿ ಈ ಕಾಂಬಿನೇಷನ್ ಗಮನ ಸೆಳೆದಿತ್ತು. ‘ಉತ್ತರಕಾಂಡ’ ಚಿತ್ರಕ್ಕೆ ರೋಹಿತ್ ಪದಕಿ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಈ ಚಿತ್ರವನ್ನು ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಅವರು ‘ಕೆಆರ್ಜಿ’ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ