
ಎರಡೂವರೆ ದಶಕಗಳಿಗೂ ಹೆಚ್ಚು ಕಾಲ ನಟ ಜಗ್ಗೇಶ್ ಅವರ ಕಾರು ಚಾಲಕನಾಗಿ (Jaggesh Car Driver) ಕೆಲಸ ಮಾಡಿದ್ದ ಪದ್ಮನಾಭ ಅವರು ನಿಧನರಾಗಿದ್ದಾರೆ. ಈ ವಿಷಯವನ್ನು ಜಗ್ಗೇಶ್ ಅವರು ಸೋಶಿಯಲ್ ಮೀಡಿಯಾ ಮೂಲಕ ಖಚಿತಪಡಿಸಿದ್ದಾರೆ. ಪದ್ಮನಾಭ ಅವರಿಗೆ 54 ವರ್ಷ ವಯಸ್ಸಾಗಿತ್ತು. ಹೃದಯ ಸ್ತಂಭನದಿಂದ (Cardiac Arrest) ಅವರು ಕೊನೆಯುಸಿರು ಎಳೆದಿದ್ದಾರೆ ಎಂಬುದು ತಿಳಿದು ಬಂದಿದೆ. ಮೃತರ ಆತ್ಮಕ್ಕೆ ಜಗ್ಗೇಶ್ ಅವರು ಶಾಂತಿ ಕೋರಿದ್ದಾರೆ. ಪದ್ಮನಾಭ ಅವರ ಅಂತ್ಯಕ್ರಿಯೆಯಲ್ಲಿ ಜಗ್ಗೇಶ್ (Jaggesh) ಭಾಗಿ ಆಗಿದ್ದಾರೆ. ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಕಂಬನಿ ಮಿಡಿದ್ದಾರೆ.
‘ಒಂದು ದಿನ ಇದ್ದದ್ದು ಮತ್ತೊಂದು ದಿನ ಇಲ್ಲವಾಗುತ್ತೆ. ನಶ್ವರ ಈ ಜಗತ್ತು. ಶ್ರೀ ಕೃಷ್ಣನ ಮಾತು. ನನ್ನ ಚಾಲಕ ಪದ್ಧ (ಪದ್ಮನಾಭ) 28 ವರ್ಷ ನನ್ನ ಚಾಲಕನಾಗಿ ಕಾರ್ಯ ನಿರ್ವಹಿಸಿದ್ದ. ನಮ್ಮ ಮನೆಯಲ್ಲಿ ಹೆಂಡತಿ, ಮಕ್ಕಳು, ಮೊಮ್ಮಗನಿಗೆ ಹಾಗು ನಮ್ಮ ಮನೆಯ ಸದಸ್ಯರು ಶ್ವಾನ (ಅರ್ಜುನ, ಪಿಂಟು, ಸೂರಜ್, ಸೂರ್ಯ) ಆತ್ಮೀಯನಾಗಿದ್ದ’ ಎಂದು ಜಗ್ಗೇಶ್ ಪೋಸ್ಟ್ ಮಾಡಿದ್ದಾರೆ.
‘ನನಗಿಂತ ಹೆಚ್ಚು ಮೊಬೈಲ್ ಕರೆ ಇವನಿಗೆ ಬರುತ್ತಿತ್ತು. ಸಿನಿಮಾ ಹಾಗು ರಾಜಕೀಯದ ನನ್ನ ಸ್ನೇಹಿತರು ಇವನಿಗೆ ಕರೆಮಾಡಿ ನನಗೆ ವಿಷಯ ಮುಟ್ಟಿಸುತ್ತಿದ್ದರು. ಕಾರಣ ನಾನು ಮೊಬೈಲ್ ಬಳಸೋಲ್ಲ. ಆ ಕಾರಣ ನನ್ನ ಬಲ್ಲ ಎಲ್ಲರಿಗೂ ತಿಳಿದಿದೆ (ಸಾಮಾಜಿಕ ಜಾಲತಾಣ ಮಾತ್ರ)’ ಎಂದು ಜಗ್ಗೇಶ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯಸಭೆಯಲ್ಲಿ ಪೈರಸಿ ವಿರುದ್ಧ ಧ್ವನಿ ಎತ್ತಿದ ಜಗ್ಗೇಶ್; ಕನ್ನಡ ಚಿತ್ರರಂಗದ ಬೆಂಬಲ ಇಲ್ವಾ?
‘ಕೇವಲ 54 ವರ್ಷ ವಯಸ್ಸಿಗೆ ಹೃದಯ ಸ್ತಂಭನವಾಗಿ ಕೊನೆ ಉಸಿರು ನಿಲ್ಲಿಸಿದ. ಅವನ ಮೇಲಿನ ಪ್ರೀತಿ ಹಾಗೂ ಸೇವೆಯ ಋಣಕ್ಕೆ ಅವನ ಕೊನೆಯ ಕ್ಷಣದವರೆಗೂ ಜೊತೆಗಿದ್ದು ವಿದಾಯ ಹೇಳಿಬಂದೆ. ಮನಸ್ಸಿಗೆ ತುಂಬಾ ದುಃಖವಾಯಿತು. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಪದ್ದ. ಹೋಗಿ ಬಾ’ ಎಂದು ಜಗ್ಗೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.