‘ಹರಕೆ ಕುರಿಗೆ ಹಾರ ಹಾಕಿ ಮೆರವಣಿಗೆ ಮಾಡ್ತಾರೆ’; ಸರ್ಕಾರದ ಗ್ಯಾರಂಟಿಗಳ ಬಗ್ಗೆ ಜಗ್ಗೇಶ್ ಲೇವಡಿ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎಲ್ಲರಿಗೂ 200 ಯುನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಮಾಡಿದೆ. ಇದನ್ನು ಜಗ್ಗೇಶ್ ಅವರು ಟೀಕೆ ಮಾಡಿದ್ದಾರೆ. ಈ ಯೋಜನೆಗಳಿಂದ ಜನರಿಗೇ ನಷ್ಟ ಎಂಬ ಅರ್ಥದಲ್ಲಿ ಅವರು ಮಾತನಾಡಿದ್ದಾರೆ.  

‘ಹರಕೆ ಕುರಿಗೆ ಹಾರ ಹಾಕಿ ಮೆರವಣಿಗೆ ಮಾಡ್ತಾರೆ’; ಸರ್ಕಾರದ ಗ್ಯಾರಂಟಿಗಳ ಬಗ್ಗೆ ಜಗ್ಗೇಶ್ ಲೇವಡಿ
ಜಗ್ಗೇಶ್ ನಟನೆಯ ಸಿನಿಮಾದ ಫೋಟೋ

Updated on: Apr 04, 2024 | 11:43 AM

ನಟ ಜಗ್ಗೇಶ್ (Jaggesh) ಅವರು ಸಿನಿಮಾ ರಂಗ ಹಾಗೂ ರಾಜಕೀಯ ಬದುಕು ಎರಡನ್ನೂ ಸಮದೂಗಿಸಿಕೊಂಡು ಹೋಗುತ್ತಿದ್ದಾರೆ. ಅವರು ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗಿ ಆಗುತ್ತಾರೆ. ಇದರ ಜೊತೆಗೆ ರಾಜಕೀಯ ವಿಚಾರಗಳ ಬಗ್ಗೆಯೂ ಅವರು ಮಾತನಾಡುತ್ತಾರೆ. ಈಗ ಲೋಕಸಭೆ ಚುನಾವಣೆ ಸಮೀಪಿಸಿದೆ. ಈ ಸಂದರ್ಭದಲ್ಲಿ ಅವರು ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದಾರೆ. ರಾಜ್ಯಸಭಾ ಸದಸ್ಯರಾಗಿರುವ ಜಗ್ಗೇಶ್ ಅವರು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದಾರೆ.

ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಉಚಿತ ಬಸ್, ಎಲ್ಲರಿಗೂ ಉಚಿತ ವಿದ್ಯುತ್ ಸೇರಿ ಐದು ಗ್ಯಾರಂಟಿ ಯೋಜನೆಗಳನ್ನು ನೀಡುವುದಾಗಿ ಕಾಂಗ್ರೆಸ್ ಹೇಳಿತ್ತು. ಅಧಿಕಾರಕ್ಕೆ ಬಂದ ಬಳಿಕ ಅವರು ನುಡಿದಂತೆ ನಡೆದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎಲ್ಲರಿಗೂ 200 ಯುನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಮಾಡಿದೆ. ಇದನ್ನು ಜಗ್ಗೇಶ್ ಅವರು ಟೀಕೆ ಮಾಡಿದ್ದಾರೆ. ಈ ಯೋಜನೆಗಳಿಂದ ಜನರಿಗೇ ನಷ್ಟ ಎಂಬ ಅರ್ಥದಲ್ಲಿ ಅವರು ಮಾತನಾಡಿದ್ದಾರೆ.

‘ಕುರಿ ಬಲಿ ಕೊಡುವ ಮೊದಲು ಮೆರವಣಿಗೆ ಮಾಡುತ್ತಾರೆ. ಹರಕೆ ಕುರಿಗೆ ಹಾರ ಹಾಕಿ ಮೆರವಣಿಗೆ ಮಾಡಲಾಗುತ್ತದೆ. ಈ ಹಾರಗಳೇ ಗ್ಯಾರಂಟಿಗಳು. ಮತದಾರರನ್ನು ಬಲಿ ಹಾಕಲು ಗ್ಯಾರಂಟಿ ನೀಡಲಾಗಿದೆ. ಎಷ್ಟೇ ಫ್ರೀ ಸ್ಕೀಂ ಕೊಟ್ಟರೂ ಮೋದಿ ಗ್ಯಾರಂಟಿ ಶಾಶ್ವತ. ಫ್ರೀ ಬೀಸ್ ಇಸ್ಕೊಂಡ್ರೆ ಸ್ವಾಭಿಮಾನ ಮಾರಿಕೊಂಡಂತೆ’ ಎಂದು ಜಗ್ಗೇಶ್ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಜಗ್ಗೇಶ್-ಪರಿಮಳಾ ದಾಂಪತ್ಯಕ್ಕೆ 40 ವರ್ಷ; ಹೇಗಿತ್ತು ನೋಡಿ ಆ ವಿಶೇಷ ದಿನ

ಸಿನಿಮಾ ವಿಚಾರಕ್ಕೆ ಬರೋದಾದರೆ ಇತ್ತೀಚೆಗೆ ಜಗ್ಗೇಶ್ ನಟನೆಯ ‘ರಂಗನಾಯಕ’ ಸಿನಿಮಾ ರಿಲೀಸ್ ಆಯಿತು. ಈ ಸಿನಿಮಾ ಅಂದುಕೊಂಡ ರೀತಿಯಲ್ಲಿ ಮೂಡಿ ಬಂದಿಲ್ಲ. ಜಗ್ಗೇಶ್ ತಮ್ಮ ಜನ್ಮದಿನದಂದು ಈ ಸಿನಿಮಾ ಸೋಲಿನ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದರು. ‘ಇದು ನನ್ನ ಸೋಲಲ್ಲ. ನಿರ್ದೇಶಕರ ತಪ್ಪಿನಿಂದ ಆದ ಸೋಲು’ ಎಂದು ಆರೋಪಿಸಿದ್ದರು. ಈ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಆದರೆ, ಅವರು ಎಲ್ಲಿಯೂ ಸಿನಿಮಾ ಹೆಸರು ಉಲ್ಲೇಖಿಸಿರಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ