ಕನ್ನಡ ಚಿತ್ರರಂಗಕ್ಕೆ ಬಂದ ಶಿಮ್ಲಾ ಸುಂದರಿ ರೂಪಾಲಿ ಸೂದ್; ‘ವೆಂಕ್ಯಾ’ ಚಿತ್ರಕ್ಕೆ ನಾಯಕಿ
ಸಾಗರ್ ಪುರಾಣಿಕ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ವೆಂಕ್ಯಾ’ ಚಿತ್ರತಂಡಕ್ಕೆ ನಟಿ ರೂಪಾಲಿ ಸೂದ್ ಅವರು ಸೇರ್ಪಡೆ ಆಗಿದ್ದಾರೆ. ರೂಪಾಲಿ ಅವರು ಶಿಮ್ಲಾ ಮೂಲದವರು ಎಂಬುದು ವಿಶೇಷ. ‘ವೆಂಕ್ಯಾ’ ಸಿನಿಮಾ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..
ನಿರ್ದೇಶಕ ಸಾಗರ್ ಪುರಾಣಿಕ್ (Sagar Puranik) ಅವರು ಈ ಮೊದಲು ‘ಡೊಳ್ಳು’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುವ ಮೂಲಕ ಗಮನ ಸೆಳೆದಿದ್ದರು. ಆ ಸಿನಿಮಾ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿತ್ತು. ಈಗ ಸಾಗರ್ ಪುರಾಣಿಕ್ ಅವರು ಹೊಸ ಸಿನಿಮಾದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ‘ವೆಂಕ್ಯಾ’ (Venkya) ಎಂಬುದು ಈ ಸಿನಿಮಾದ ಶೀರ್ಷಿಕೆ. ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ವಿಶೇಷ ಏನೆಂದರೆ, ಈ ಸಿನಿಮಾಗೆ ಸಾಗರ್ ಪುರಾಣಿಕ್ ಅವರು ನಿರ್ದೇಶನ ಮಾಡುವುದರ ಜೊತೆಗೆ ಹೀರೋ ಆಗಿಯೂ ಬಣ್ಣ ಹಚ್ಚಿದ್ದಾರೆ. ಈ ಚಿತ್ರತಂಡದಿಂದ ಒಂದು ಅಪ್ಡೇಟ್ ನೀಡಲಾಗಿದೆ. ನಾಯಕಿ ಆಯ್ಕೆಯ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ರೂಪಾಲಿ ಸೂದ್ (Rupali Sood) ಅವರು ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಹೌದು, ‘ವೆಂಕ್ಯಾ’ ಚಿತ್ರತಂಡಕ್ಕೆ ರೂಪಾಲಿ ಸೂದ್ ಸೇರ್ಪಡೆ ಆಗಿದ್ದಾರೆ. ಇವರು ಶಿಮ್ಲಾ ಸುಂದರಿ ಎಂಬುದು ವಿಶೇಷ. ‘ವೆಂಕ್ಯಾ’ ಸಿನಿಮಾ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿ ಆಗಿದ್ದಾಗಲೇ ರೂಪಾಲಿ ಅವರು ಮಾಡೆಲಿಂಗ್ನಲ್ಲಿ ಗುರುತಿಸಿಕೊಂಡಿದ್ದರು. ಮಾಡೆಲಿಂಗ್ ಮಾಡುತ್ತಲೇ ಅನೇಕ ಮ್ಯೂಸಿಕ್ ಆಲ್ಬಂಗಳಲ್ಲಿ ಅವರು ನಟಿಸಿದರು. ಹಾರ್ಡಿ ಸಂಧು ಅವರ ಜೊತೆ ‘ಹಾರ್ನ್ ಬ್ಲೋ’ ಸೂಪರ್ ಹಿಟ್ ಹಾಡಿನಲ್ಲಿ ಅವರು ಡ್ಯಾನ್ಸ್ ಮಾಡಿ ಗಮನ ಸೆಳೆದರು. ಈಗ ಅವರು ‘ವೆಂಕ್ಯಾ’ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡುತ್ತಿದ್ದಾರೆ.
ಇದನ್ನೂ ಓದಿ: ‘ಉತ್ತರಕಾಂಡ’ ಚಿತ್ರಕ್ಕೆ ‘ಶೈತಾನ್’ ಸಿನಿಮಾ ಸಂಗೀತ ಸಂಯೋಜಕ; ಕನ್ನಡಕ್ಕೆ ಬಂದ ಅಮಿತ್ ತ್ರಿವೇದಿ
ಹಿಮಾಚಲದ ಪಹಾಡಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರೂಪಾಲಿ ಸೂದ್ ಅವರು ‘ವೆಂಕ್ಯಾ’ ಸಿನಿಮಾದ ಚಿತ್ರೀಕರಣದಲ್ಲಿ ಈಗಾಗಲೇ ಪಾಲ್ಗೊಂಡಿದ್ದಾರೆ. ಚಿತ್ರೀಕರಣದ ಅನುಭವವನ್ನು ಹಂಚಿಕೊಂಡಿರುವ ಅವರು, ‘ಇತ್ತೀಚೆಗೆ ನಾವು ಮನಾಲಿಯ ಮುಂದೆ ಕೈಲಾಂಗ್ನಲ್ಲಿ ಪರ್ವತಗಳ ನಡುವೆ ಸುಂದರ ಲೊಕೇಷನ್ನಲ್ಲಿ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿದ್ದೇವೆ. ನನ್ನ ವೃತ್ತಿಜೀವನಕ್ಕೆ ಇದು ಅದ್ಭುತ ಪ್ರಾರಂಭ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಿಷಿಯ ‘ರಾಮನ ಅವತಾರ’ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿ
ರಾಷ್ಟ್ರ ಪ್ರಶಸ್ತಿ ಪಡೆದ ‘ಡೊಳ್ಳು’ ಚಿತ್ರಕ್ಕೆ ಬಂಡವಾಳ ಹೂಡಿದ್ದ ಪವನ್ ಒಡೆಯರ್ ಅವರು ‘ವೆಂಕ್ಯಾ’ ಚಿತ್ರಕ್ಕೂ ಸಾಥ್ ನೀಡಿದ್ದಾರೆ. ‘ಒಡೆಯರ್ ಫಿಲ್ಮ್ಸ್’ ಮೂಲಕ ಮೂಡಿಬರುತ್ತಿರುವ ಈ ಸಿನಿಮಾಗೆ ಅವಿನಾಶ್ ವಿ. ರೈ ಹಾಗೂ ಮೋಹನ್ ಲಾಲ್ ಮೆನನ್ ಅವರು ಸಹ ಹಣ ಹಾಕಿದ್ದಾರೆ. ಉತ್ತರ ಕರ್ನಾಟಕ ಭಾಗದ ಕಥೆಯನ್ನು ಆಧರಿಸಿ ಈ ಸಿನಿಮಾ ಮೂಡಿಬರುತ್ತಿದೆ. ‘ವೆಂಕ್ಯಾ’ ಚಿತ್ರಕ್ಕೆ ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಶ್ರೀನಿಧಿ ಡಿ.ಎಸ್. ಅವರು ಬರೆದಿದ್ದಾರೆ. ಪ್ರಣವ್ ಮುಲೆ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಹೇಮಂತ್ ಜೋಯಿಸ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕೆ ಇರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.