‘ರಾಜಾಹುಲಿ’, ‘ಕಲ್ಪನಾ 2’, ‘ಸಂತ’, ‘ಕಲಾಸಿಪಾಳ್ಯ’ ಸೇರಿದಂತೆ ಇನ್ನೂ ಕೆಲವು ಕನ್ನಡ ಸಿನಿಮಾಗಳಲ್ಲಿ (Kannada Movie) ನಟಿಸಿದ್ದ ಪ್ರತಿಭಾವಂತ ನಟ ಪ್ರಕಾಶ್ ಹೆಗ್ಗೋಡು ನಿಧನ ಹೊಂದಿದ್ದಾರೆ. ಅವರಿಗೆ 58 ವರ್ಷ ವಯಸ್ಸಾಗಿತ್ತು. ಪ್ರಕಾಶ್ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ರಾತ್ರಿ ಪ್ರಕಾಶ್ ಹೆಗ್ಗೋಡು ನಿಧನ ಹೊಂದಿದ್ದಾರೆ. ರಂಗಕರ್ಮಿಯೂ ಆಗಿದ್ದ ಏಸು ಪ್ರಕಾಶ್ ಅವರನ್ನು ಪ್ರಕಾಶ್ ಹೆಗ್ಗೋಡು ಎಂದೂ ಸಹ ಕರೆಯಲಾಗುತ್ತಿತ್ತು.
ಪ್ರಕಾಶ್ ಹೆಗ್ಗೋಡು, ಶಿವಮೊಗ್ಗ ಜಿಲ್ಲೆಯ, ಸಾಗರ ತಾಲೂಕಿನ ಪುರಪ್ಪೆಮನೆಯವರಾಗಿದ್ದಾರೆ. ಇಂದು (ಮಾರ್ಚ್ 31) ಅವರ ಅಂತಿಮ ದರ್ಶನವನ್ನು ಅವರ ಸ್ವಗೃಹವಾದ ಪುರಪ್ಪೆಮನೆಯಲ್ಲಿ ಏರ್ಪಡಿಸಲಾಗಿದೆ. ಕುಟುಂಬಸ್ಥರು, ಆತ್ಮೀಯರು, ರಂಗಕರ್ಮಿಗಳು, ಸಿನಿಮಾ ನಟರು, ಅಭಿಮಾನಿಗಳು ಹಾಗೂ ಊರಿನ ಜನರು ಅಂತಿಮ ದರ್ಶನ ಪಡೆಯಬಹುದಾಗಿದೆ.
ಇದನ್ನೂ ಓದಿ:ಗೆಳೆಯ ಡ್ಯಾನಿಯಲ್ಗೆ ವಿದಾಯ ಹೇಳಿದ ನಟ ಕಿಶೋರ್
ಪ್ರಕಾಶ್ ಅವರು ಸಿನಿಮಾ ನಟನೆಯ ಜೊತೆಗೆ ರಂಗಭೂಮಿಯಲ್ಲಿಯೂ ಸಕ್ರಿಯರಾಗಿದ್ದರು. ಹಲವು ನಾಟಕಗಳಲ್ಲಿ ನಟಿಸಿದ್ದರು. ನಾಟಕ ಶಿಬಿರಗಳನ್ನು ಆಯೋಜಿಸಿದ್ದರು. ಹೊಸ ನಾಟಕಗಳನ್ನು ಮಾಡಿಸಿದ್ದರು. ರಂಗಭೂಮಿ, ನಟನೆಯ ಹೊರತಾಗಿ ಸಾಮಾಜಿಕ ಹೋರಾಟಗಾರರು ಸಹ ಆಗಿದ್ದ ಪ್ರಕಾಶ್ ಹೆಗ್ಗೋಡು. ಹಲವು ಸಾಮಾಜಿಕ ಹೋರಾಟಗಳಲ್ಲಿ ಭಾಗಿಯಾಗಿದ್ದ ಪ್ರಕಾಶ್, ದಮನಿತರ ಪರವಾಗಿ ದನಿ ಎತ್ತುತ್ತಿದ್ದರು, ಅವರ ಪರ ನ್ಯಾಯಕ್ಕಾಗಿ ಹೋರಾಡುತ್ತಿದ್ದರು.
‘ರಾಜಾಹುಲಿ’, ‘ಕಲ್ಪನಾ 2’, ‘ಸಂತ’, ‘ಕಲಾಸಿಪಾಳ್ಯ’, ‘ಭಾಗ್ಯದ ಬಳೆಗಾರ’, ‘ಮಾರ್ಡರ್ನ್ ಮಹಾಭಾರತ’, ಇನ್ನೂ ಕೆಲವು ಸಿನಿಮಾಗಳಲ್ಲಿ ಪ್ರಕಾಶ್ ನಟಿಸಿದ್ದಾರೆ. ಕೆಲವು ಸಿನಿಮಾಗಳಲ್ಲಿ ಮುಖ್ಯ ವಿಲನ್ ಆಗಿಯೂ ಸಹ ಪ್ರಕಾಶ್ ನಟನೆ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ