ನಟಿ ಹಾಗೂ ರಾಜಕಾರಣಿ ರಮ್ಯಾ ಸದ್ಯ ಯಾವುದೇ ಕ್ಷೇತ್ರದಲ್ಲೂ ಆ್ಯಕ್ಟಿವ್ ಆಗಿಲ್ಲ. ನಟನೆ ತೊರೆದ ನಂತರದಲ್ಲಿ ಅವರು ರಾಜಕೀಯಕ್ಕೆ ಕಾಲಿಟ್ಟರು. ಈಗ ರಮ್ಯಾ ರಾಜಕೀಯವನ್ನೂ ತೊರೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಆಗಿರುವ ಅವರು, ಅಭಿಮಾನಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ಈ ಮಧ್ಯೆ ಬೆಂಗಳೂರಿನ ಮರಗಳನ್ನು ಉಳಿಸುವ ಆಂದೋಲನವನ್ನು ರಮ್ಯಾ ಬೆಂಬಲಿಸಿದ್ದಾರೆ.
ಹೆಬ್ಬಾಳ-ನಾಗವಾರ ಕಣಿವೆ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಿದೆ. ಈ ಯೋಜನೆ ಅಡಿಯಲ್ಲಿ ಯಲಹಂಕದ ಸಿಂಗನಾಯಕನಹಳ್ಳಿ ಕೆರೆ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆ ಮುಂದಾಗಿದೆ. ಈ ಯೋಜನೆಗೆ 6 ಸಾವಿರಕ್ಕೂ ಅಧಿಕ ಮರಗಳನ್ನು ಕತ್ತರಿಸಲಾಗುತ್ತಿದೆ. ಇದು ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮರ ಕಡಿಯುವುದು ಏಕೆ? ಇದರಿಂದ ಪರಿಸರ ಮತ್ತಷ್ಟು ಹಾಳಾಗಲಿದೆ ಎನ್ನುವ ಮಾತುಗಳನ್ನು ಪರಿಸರವಾದಿಗಳು ಹೇಳಿದ್ದಾರೆ.
ಇನ್ನು, ಈ ಕ್ರಮದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಂದೋಲನ ನಡೆಯುತ್ತಿದೆ. ಪರಿಸರ ಪರ ಕಾಳಜಿ ಹೊಂದಿರುವ ಅನೇಕರು ಮರವನ್ನು ಕತ್ತರಿಸುವುದಕ್ಕೆ ವಿರೋಧಿಸಿ ಸಹಿ ಸಂಗ್ರಹಿಸುತ್ತಿದ್ದಾರೆ. ಇದನ್ನು ರಮ್ಯಾ ಬೆಂಬಲಿಸಿದ್ದಾರೆ. ಅಲ್ಲದೆ, ಅಭಿಮಾನಿಗಳ ಬಳಿ ಸಹಿ ಹಾಕುವಂತೆ ಕೋರಿದ್ದಾರೆ.
ರಮ್ಯಾ ಕನ್ನಡ ಚಿತ್ರರಂಗದ ಬೇಡಿಕೆಯ ನಟಿ ಆಗಿದ್ದರು. ನಂತರ ಅವರು ಚಿತ್ರರಂಗ ತೊರೆದು ಕಾಂಗ್ರೆಸ್ ಸೇರಿದರು. ರಮ್ಯಾ ಕಾಂಗ್ರೆಸ್ನಿಂದ ಸಂಸದೆ ಕೂಡ ಆದರು. ಈಗ ಅವರು ರಾಜಕೀಯದಿಂದ ದೂರ ಉಳಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಇತ್ತೀಚೆಗೆ ಆಸ್ಕ್ ಮಿ ಎನಿಥಿಂಗ್ ಸೆಶನ್ ನಡೆಸಿದ್ದರು. ಆಗ ಕೆಲವರು ಅವರಿಗೆ ನಟನೆಗೆ ಮತ್ತೆ ಬರುವಂತೆ ಬೇಡಿಕೆ ಇಟ್ಟಿದ್ದರು. ಆದರೆ, ರಮ್ಯಾ ಮತ್ತೆ ನಟನೆಗೆ ಬರುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದರು. ಇದು ಅಭಿಮಾನಿಗಳಿಗೆ ಬೇಸರ ಉಂಟು ಮಾಡಿತ್ತು.
ಇದನ್ನೂ ಓದಿ: Ramya: ಮೋದಿ ಪ್ರಧಾನಿ ಹುದ್ದೆಗೆ ರಿಸೈನ್ ಮಾಡಲಿ ಎಂದ ನಟಿ ರಮ್ಯಾ; ಅಭಿಮಾನಿಗಳು ಕೊಟ್ಟ ಉತ್ತರ ಏನು?
ರಾಹುಲ್ ಗಾಂಧಿ ಜನ್ಮದಿನಕ್ಕೆ ಒಂದೇ ವಾಕ್ಯದಲ್ಲಿ ರಮ್ಯಾ ವಿಶ್; ಆ ಮಾತು ನೀವು ಒಪ್ಪುತ್ತೀರಾ?