ಅಂಬರೀಷ್ ಇಲ್ಲದೆ ಅನುಭವಿಸಿದ ನೋವು ನನಗೆ ಮಾತ್ರ ಗೊತ್ತು; ಭಾವುಕರಾದ ಸುಮಲತಾ ಅಂಬರೀಷ್
Rebel Star Ambareesh: ಶನಿವಾರ (ಮೇ 29) ರೆಬೆಲ್ ಸ್ಟಾರ್ ಅಂಬರೀಷ್ ಜನ್ಮದಿನ. ಪರಿಸ್ಥಿತಿ ಸರಿಯಿದ್ದು, ಅವರು ನಮ್ಮೊಂದಿಗೆ ಇದ್ದಿದ್ದರೆ ಅಭಿಮಾನಿಗಳ ಜತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಕೇಕ್ ಕತ್ತರಿಸಿ ಸಂಭ್ರಮಿಸುತ್ತಿದ್ದರು. ಆದರೆ, ಅಂಬರೀಷ್ ಈಗ ನಮ್ಮೊಂದಿಗಿಲ್ಲ. ಈ ವಿಶೇಷ ದಿನದಂದು ಸುಮಲತಾ ಅವರು ಟಿವಿ9 ಕನ್ನಡದ ಜತೆಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆ ಸಂದರ್ಶನದ ಭಾಗ ಇಲ್ಲಿದೆ..
ಎಲ್ಲವೂ ಸುಸ್ಥಿತಿಯಲ್ಲಿದ್ದರೆ ಅಂಬಿ ಜನ್ಮದಿನವನ್ನು ಅಭಿಮಾನಿಗಳು ಅದ್ದೂರಿಯಾಗಿ ಆಚರಿಸುತ್ತಿದ್ದರು. ಅನೇಕ ಕಡೆಗಳಲ್ಲಿ ಅನ್ನಸಂತರ್ಪಣೆ ನಡೆಯುತ್ತಿತ್ತು. ಕೆಲವು ಕಡೆಗಳಲ್ಲಿ ಅಂಬಿ ಕಟೌಟ್ ಹಾಕಿ ಹಾಲಿನ ಅಭಿಷೇಕ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಸರ್ಕಾರ ಕೊವಿಡ್ ನಿಯಂತ್ರಣಕ್ಕೆ ಲಾಕ್ಡೌನ್ ಘೋಷಣೆ ಮಾಡಿದೆ. ಯಾರೊಬ್ಬರೂ ಮನೆಯಿಂದ ಹೊರ ಬರೋಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಯಾರೂ ಅಂಬರೀಷ್ ಜನ್ಮದಿನ ಆಚರಣೆ ಮಾಡುವುದು ಬೇಡ ಎಂದು ಸುಮಲತಾ ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಸುಮಲತಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ‘ನಾಳೆ ನಮ್ಮೆಲ್ಲರ ಪ್ರೀತಿಯ ಅಂಬರೀಷ್ ಅವರ 69ನೇ ಜನ್ಮ ಜಯಂತಿ ಸಂಭ್ರಮದಿಂದ ಆಚರಿಸಲು ನೀವೆಲ್ಲರೂ ಕಾಯುತ್ತಿರುತ್ತೀರಿ. ಆದರೆ ಕರೊನಾ ತಡೆಯಲು ದೇಶವೆಲ್ಲ ಶ್ರಮಿಸುತ್ತಿರುವಾಗ ನಾವು ಯಾವುದೇ ಸಾರ್ವಜನಿಕ ಆಚರಣೆ ಅಥವಾ ಸಮಾರಂಭ ಮಾಡುವುದು ಬೇಡವೆಂದು ನನ್ನ ವಿನಮ್ರ ಮನವಿ. ಈ ವರ್ಷ ಅವರನ್ನು ನಮ್ಮ ಮನಸ್ಸು ಮನೆಗಳಲ್ಲೇ ಆಚರಿಸೋಣ. #staysafe’ ಎಂದು ಬರೆದುಕೊಂಡಿದ್ದಾರೆ.
(MP and Actress Sumalatha Ambareesh Special Interview ahead of Ambareesh Birthday)