
ವಿಷ್ಣುವರ್ಧನ್ (Vishnuvardhan) ಜನ್ಮದಿನ ಸಮೀಪಿಸುತ್ತಿದ್ದಂತೆ ಹಲವು ವಿವಾದಗಳು ಕೂಡ ಸೃಷ್ಟಿ ಆಗಿವೆ. ಈ ಮೊದಲು ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಸಮಾಧಿಯನ್ನು ನೆಲಸಮ ಮಾಡುವ ಕೆಲಸ ಮಾಡಲಾಯಿತು. ಆ ಬಳಿಕ ವಿಷ್ಣು ಸಮಾಧಿ ಜಾಗವನ್ನು ತಮಗೆ ನೀಡುವಂತೆ ಅಭಿಮಾನಿಗಳು ಬೇಡಿಕೆ ಇಟ್ಟರೂ ಯಾವುದೇ ಪ್ರಯೋಜನ ಆಗಿಲ್ಲ. ಮತ್ತೊಂದು ಕಡೆ ಸಮಾಧಿ ಜಾಗದಲ್ಲಿ ಬರ್ತ್ಡೇ ಆಚರಿಸಬಾರದು ಎಂದು ಸ್ವತಃ ಕೋರ್ಟ್ ಆದೇಶ ನೀಡಿದೆ. ಹೀಗಿರುವಾಗಲೇ ಅನಿರುದ್ಧ್ ಅವರು ಒಂದು ಎಚ್ಚರಿಕೆ ನೀಡಿದ್ದಾರೆ.
‘ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ನಮ್ಮ ಕುಟುಂಬದ ವಿರುದ್ಧ ನಕಾರಾತ್ಮಕ ಕಾಮೆಂಟ್‌ಗಳು ಬರುತ್ತಿವೆ. ನಾನು ಹಿಂದೆ ಕೂಡ ಅಭಿಮಾನಿಗಳ ಸಮ್ಮುಖದಲ್ಲಿ, ಮಾಧ್ಯಮದ ಎದುರು ಎಚ್ಚರಿಕೆ ನೀಡಿದ್ದೆ. ಇದೇ ತರಹದ ಕಾಮೆಂಟ್‌ಗಳು ಬರುತ್ತಿದ್ದರೆ ಅಂಥವರ ವಿರುದ್ಧ ದೂರು ದಾಖಲಿಸುತ್ತೇನೆ ಎಂದಿದ್ದೆ. ಆದರೂ ಕೂಡ ಈ ಕಾಮೆಂಟ್‌ಗಳು ನಿಲ್ಲುತ್ತಿಲ್ಲ’ ಎಂದು ಅನಿರುದ್ಧ್ ಹೇಳಿದ್ದಾರೆ.
‘ಸೆಪ್ಟೆಂಬರ್ 16ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದೇನೆ. ಇದನ್ನು ಮತ್ತೆ ಮುಂದುವರಿಸಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಇನ್ನೊಂದು ಬಾರಿ ಕೈ ಮುಗಿದು ಕಳಕಳಿಯಿಂದ ಕೇಳಿಕೊಳ್ಳುತ್ತೇನೆ. ಸಾಮಾಜಿಕ ಜಾಲತಾಣದಲ್ಲಿ, ವೇದಿಕೆ ಮೇಲೆ ಈ ರೀತಿ ಕಮೆಂಟ್ ಮಾಡಿ ಸಮಸ್ಯೆ ತಂದುಕೊಳ್ಳಬೇಡಿ’ ಎಂದು ಅವರು ಕೋರಿದ್ದಾರೆ.
ಅಭಿಮಾನದ ಮುಖವಾಡ ಹಾಕಿಕೊಂಡ ಕೆಲವರು ಕೆಟ್ಟ ಕೆಲಸ ಮಾಡುತ್ತಿದ್ದಾರೆ, ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಬರೆಯುತ್ತಿದ್ದಾರೆ ಎಂದು ಅನಿರುದ್ಧ್ ಅವರು ಈ ಮೊದಲು ಹೇಳಿದ್ದರು.
ಇದನ್ನೂ ಓದಿ: ವಿಷ್ಣುವರ್ಧನ್ ಹುಟ್ಟುಹಬ್ಬ ಆಚರಣೆಗೆ ಅನುಮತಿ ನಿರಾಕರಣೆ: ಅಡಚಣೆ ಯಾರಿಂದ?
ಸೆಪ್ಟೆಂಬರ್ 18ರಂದು ವಿಷ್ಣುವರ್ಧನ್ ಜನ್ಮದಿನ. ಅವರು ಬದುಕಿದ್ದರೆ 75ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಈ ವಿಶೇಷ ಸಂದರ್ಭದಲ್ಲಿ ‘ಯಜಮಾನರ ಅಮೃತ ಮಹೋತ್ಸವ’ವನ್ನಾಗಿ ಆಚರಿಸಲು ನಿರ್ಧರಸಲಾಗಿತ್ತು. ಆದರೆ, ಆ ಬಳಿಕ ಯಾವುದೇ ಅಪ್ಡೇಟ್ ಕೂಡ ಬಂದಿಲ್ಲ. ಇದನ್ನು ಆಚರಿಸೋದು ಬಹುತೇಕ ಅನುಮಾನ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.