ಆತ್ಮೀಯ ಗೆಳೆಯರಾಗಿದ್ದ ವಿಷ್ಣುವರ್ಧನ್-ರಾಜೇಂದ್ರ ಸಿಂಗ್ ಬಾಬು ದೂರಾಗಿದ್ದೇಕೆ?
Vishnuvardhan Friend Rajendra Singh Babu: ವಿಷ್ಣುವರ್ಧನ್ ಅವರ ಹುಟ್ಟುಹಬ್ಬ ನಾಳೆ (ಸೆಪ್ಟೆಂಬರ್ 17) ಇದೆ. ವಿಷ್ಣುವರ್ಧನ್ ನಮ್ಮನ್ನಗಲಿ ಹಲವು ವರ್ಷಗಳಾಗಿದ್ದರು ಹಲವಾರು ನೆನಪುಗಳನ್ನು ಅದ್ಭುತ ಸಿನಿಮಾಗಳನ್ನು ಅವರು ಬಿಟ್ಟು ಹೋಗಿದ್ದಾರೆ. ವಿಷ್ಣುವರ್ಧನ್ ಅವರ ಬಲು ಆಪ್ತ ಗೆಳೆಯರಾಗಿದ್ದ ರಾಜೇಂದ್ರ ಸಿಂಗ್ ಬಾಬು ಅವರು, ತಮ್ಮ ಹಾಗೂ ವಿಷ್ಣು ನಡುವೆ ಮನಸ್ತಾಪಕ್ಕೆ ಕಾರಣವಾದ ಅಂಶ ಏನೆಂದು ವಿವರಿಸಿದ್ದಾರೆ.

ವಿಷ್ಣುವರ್ಧನ್ (Vishnuvardhan) ಕನ್ನಡ ಚಿತ್ರರಂಗದ ಮೇರು ನಟ. ಕನ್ನಡ ಚಿತ್ರರಂಗಕ್ಕೆ ಹಲವಾರು ಅತ್ಯುತ್ತಮ ಸಿನಿಮಾಗಳನ್ನು ನೀಡಿದ್ದಾರೆ. ಅದ್ಭುತ ನಟ ಆಗಿರುವ ಜೊತೆಗೆ ತಮ್ಮ ವ್ಯಕ್ತಿತ್ವದಿಂದಲೂ ಹಲವರಿಗೆ ಸ್ಪೂರ್ತಿ ತುಂಬಿದ್ದಾರೆ. ವಿಷ್ಣುವರ್ಧನ್ ಅವರು ಕಾಲವಾಗಿ 16 ವರ್ಷಗಳಾಗಿದೆ. ಸೆಪ್ಟೆಂಬರ್ 18 ಅವರು ಹುಟ್ಟಿದ ದಿನ, ವಿಷ್ಣುವರ್ಧನ್ ಬದುಕಿದ್ದಿದ್ದರೆ ಈ ವರ್ಷ 75 ವರ್ಷಗಳಾಗಿರುತ್ತಿತ್ತು. ಅವರು ಇಲ್ಲದಿದ್ದರೂ ಹಲವಾರು ನೆನಪುಗಳನ್ನು ಅವರು ಬಿಟ್ಟು ಹೋಗಿದ್ದಾರೆ. ಅವರ ಆಪ್ತ ಗೆಳೆಯರು ವಿಷ್ಣುವರ್ಧನ್ ಅವರೊಟ್ಟಿಗಿನ ಹಲವು ನೆನಪುಗಳನ್ನು ಹಂಚಿಕೊಂಡಿದ್ದಾರೆ.
ವಿಷ್ಣುವರ್ಧನ್ ಅವರ ಬಲು ಆಪ್ತ ಗೆಳೆಯರಲ್ಲಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸಹ ಒಬ್ಬರು. ವಿಷ್ಣುವರ್ಧನ್ ಅವರಿಗೆ ಹಲವು ಸೂಪರ್-ಡೂಪರ್ ಹಿಟ್ ಸಿನಿಮಾಗಳನ್ನು ರಾಜೇಂದ್ರ ಸಿಂಗ್ ಬಾಬು ನೀಡಿದ್ದಾರೆ. ವಿಷ್ಣುವರ್ಧನ್, ಅಂಬರೀಶ್ ಹಾಗೂ ರಾಜೇಂದ್ರ ಸಿಂಗ್ ಬಾಬು ಮೂವರು ಕನ್ನಡ ಚಿತ್ರರಂಗದ ಬಲು ಆಪ್ತ ಗೆಳೆಯರಾಗಿದ್ದರು. ಪರಸ್ಪರರ ಸುಖ-ದುಃಖಗಳಲ್ಲಿ ಆಗಿದ್ದವರು. ಆದರೆ ವಿಷ್ಣುವರ್ಧನ್ ಹಾಗೂ ರಾಜೇಂದ್ರ ಸಿಂಗ್ ಬಾಬು ನಡುವೆ ಮನಸ್ತಾಪ ಬೆಳೆದು ಇಬ್ಬರೂ ಒಟ್ಟಿಗೆ ಕೆಲಸ ಮಾಡದಂತೆ ಆಗಿಬಿಟ್ಟಿತ್ತು. ಆ ಬಗ್ಗೆ ರಾಜೇಂದ್ರ ಸಿಂಗ್ ಬಾಬು ಮಾತನಾಡಿದ್ದಾರೆ.
ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶಕರ ಸಂಘದ ಅಧ್ಯಕ್ಷರಾಗಿದ್ದಾಗ ವಿಷ್ಣುವರ್ಧನ್ ಅವರು ಯಾವುದೋ ಸಂದರ್ಭದಲ್ಲಿ ನೀಡಿದ ಹೇಳಿಕೆಯೊಂದು ದೊಡ್ಡ ವಿವಾದವಾಗಿ ಭುಗಿಲೆದ್ದಿತು. ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ನಿರ್ದೇಶಕರಿಲ್ಲ ಎಂಬರ್ಥದ ಮಾತುಗಳನ್ನು ವಿಷ್ಣುವರ್ಧನ್ ಹೇಳಿದ್ದರಂತೆ. ನಿರ್ದೇಶಕರ ಸಂಘದಲ್ಲಿ ಸಭೆಯಲ್ಲಿ ವಿಷ್ಣುವರ್ಧನ್ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಯ್ತಂತೆ. ರಾಜೇಂದ್ರ ಸಿಂಗ್ ಬಾಬು ಹೇಳಿರುವಂತೆ, ಅವರು ಆ ವಿರೋಧವನ್ನು ಹತ್ತಿಕ್ಕಲು ಬಹಳ ಪ್ರಯತ್ನಪಟ್ಟರಂತೆ. ವಿಷ್ಣು ಹೇಳಿಬಿಟ್ಟರೆ ಆಗಿಬಿಡುತ್ತಾ ಹಾಗೆಲ್ಲ ಏನೂ ಇಲ್ಲ, ವಿಷ್ಣು ಹಾಗೆ ಹೇಳಿರಲಿಕ್ಕಿಲ್ಲ ಎಂದೆಲ್ಲ ಹೇಳಿದರಂತೆ.
ಇದನ್ನೂ ಓದಿ:ವಿಷ್ಣುವರ್ಧನ್ ಹುಟ್ಟುಹಬ್ಬ ಆಚರಣೆ, ವೀರಕಪುತ್ರ ಶ್ರೀನಿವಾಸ್ ಮಾಹಿತಿ
ಆದರೆ ನಿರ್ದೇಶಕರ ಸಂಘದ ಸದಸ್ಯರು ಪಟ್ಟು ಬಿಡದೆ, ನಮ್ಮ ಸಂಘದಿಂದ ವಿಷ್ಣುವರ್ಧನ್ ಅವರಿಗೆ ಖಾರವಾಗಿ ಪತ್ರ ಬರೆಯಬೇಕು ಎಂದರಂತೆ. ಪಟ್ಟಿಗೆ ಮಣಿದ ರಾಜೇಂದ್ರ ಸಿಂಗ್ ಬಾಬು ಅವರು ವಿಷ್ಣುವರ್ಧನ್ ಅವರಿಗೆ ಖಾರವಾಗಿಯೇ ಪತ್ರ ಬರೆಯಬೇಕಾಯ್ತಂತೆ. ಆ ಪತ್ರದಿಂದ ವಿಷ್ಣುವರ್ಧನ್ ಅವರಿಗೂ ಬೇಸರವಾಯ್ತಂತೆ. ಇಬ್ಬರ ನಡುವೆ ಗೆಳೆತನಕ್ಕೂ ಮುಕ್ಕು ಬಂದಿತಂತೆ. ಇಬ್ಬರ ನಡುವೆ ಮನಸ್ತಾಪವೂ ಉಂಟಾಗಿ, ಇಬ್ಬರೂ ಸಹ ಒಟ್ಟಿಗೆ ಸಿನಿಮಾಗಳಲ್ಲಿ ಸಹ ಕೆಲಸ ಮಾಡದ ಸನ್ನಿವೇಶವಾಯ್ತಂತೆ.
ಈ ಬಗ್ಗೆ ನೆನಪಿಸಿಕೊಂಡಿರುವ ರಾಜೇಂದ್ರ ಸಿಂಗ್ ಬಾಬು, ಆ ಒಂದು ಪತ್ರದಿಂದ ಒಟ್ಟಿಗೆ ಇನ್ನಷ್ಟು ಸಿನಿಮಾ ಮಾಡುವ ಅವಕಾಶಗಳನ್ನು ನಾನು ಹಾಗೂ ವಿಷ್ಣುವರ್ಧನ್ ಇಬ್ಬರೂ ಕಳೆದುಕೊಂಡೆವು ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:54 pm, Wed, 17 September 25




