ವಿಷ್ಣುವರ್ಧನ್-ರಜನಿಕಾಂತ್ ಒಟ್ಟಾಗಿ ನಟಿಸಿದ್ದ ಸಿನಿಮಾದ ಅಪರೂಪದ ದೃಶ್ಯ ನೆನಪಿದೆಯೇ?
ವಿಷ್ಣುವರ್ಧನ್ ಅವರ ಜನ್ಮದಿನದ ಸಂದರ್ಭದಲ್ಲಿ, ಅವರ ಮತ್ತು ರಜನಿಕಾಂತ್ ಅವರ ನಡುವಿನ ಆತ್ಮೀಯ ಬಾಂಧವ್ಯವನ್ನು ತೋರಿಸುವ ಅಪರೂಪದ ವೀಡಿಯೊ ವೈರಲ್ ಆಗಿದೆ. 'ವಿಡುದಲೈ' ಚಿತ್ರದ ಈ ದೃಶ್ಯವು ಇಬ್ಬರ ಅದ್ಭುತ ಗೆಳೆತನವನ್ನು ಪ್ರತಿಬಿಂಬಿಸುತ್ತದೆ. ಇದರ ಜೊತೆಗೆ, ಇಬ್ಬರೂ ‘ಸಹೋದರರ ಸವಾಲ್’, ‘ಗಲಾಟೆ ಸಂಸಾರ’ ಮುಂತಾದ ಚಿತ್ರಗಳಲ್ಲೂ ಒಟ್ಟಾಗಿ ನಟಿಸಿದ್ದಾರೆ.

ವಿಷ್ಣುವರ್ಧನ್ (Vishnuvardhan) ಜನ್ಮದಿನ ಸಮೀಪಿಸಿದೆ. ಸೆಪ್ಟೆಂಬರ್ 18ರಂದು ಅವರ ಜನ್ಮದಿನ. ಈ ವೇಳೆ ಅವರ ಬಗೆಗಿನ ಅಪರೂಪದ ಮಾಹಿತಿಗಳು ವೈರಲ್ ಆಗುತ್ತಿವೆ. ಇದರಲ್ಲಿ ವಿಷ್ಣುವರ್ಧನ್ ಹಾಗೂ ರಜನಿಕಾಂತ್ ನಡುವಿನ ಒಳ್ಳೆಯ ಗೆಳೆತನ ಕೂಡ ಒಂದು. ಇಬ್ಬರು ಬೆಸ್ಟ್ ಫ್ರೆಂಡ್ಸ್. ವಿಷ್ಣು ಕಂಡರೆ ರಜನಿಕಾಂತ್ಗೆ ಎಲ್ಲಿಲ್ಲದ ಪ್ರೀತಿ. ಇವರ ಗೆಳೆತನ ವಿವರಿಸುವ ಅಪರೂಪದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ತಮಿಳಿನ ‘ವಿಡುದಲೈ’ ಸಿನಿಮಾದ ದೃಶ್ಯ. ಈ ವಿಡಿಯೋನ ಅಭಿಮಾನಿಗಳು ರೀ-ಶೇರ್ ಮಾಡಿಕೊಳ್ಳುತ್ತಿದ್ದಾರೆ. ವಿಷ್ಣು ದಾದಾ ಬರ್ತ್ಡೇ ವೇಳೆ ಅವರ ನೆನಪು ಅಭಿಮಾನಿಗಳಿಗೆ ಅತಿಯಾಗಿ ಕಾಡುತ್ತಿದೆ ಎನ್ನಬಹುದು.
1986ರಲ್ಲಿ ತೆರೆಗೆ ಬಂದ ‘ವಿಡುದಲೈ’ ಸಿನಿಮಾದಲ್ಲಿ ವಿಷ್ಣುವರ್ಧನ್ ಹಾಗೂ ರಜನಿಕಾಂತ್ ಒಟ್ಟಾಗಿ ನಟಿಸಿದ್ದರು. ಈ ಚಿತ್ರ ಯಶಸ್ಸು ಕಂಡಿತ್ತು. ಶಿವಾಜಿ ಗಣೇಶನ್, ರಜನಿಕಾಂತ್, ವಿಷ್ಣುವರ್ಧನ್ ಈ ಚಿತ್ರದಲ್ಲಿ ನಟಿಸಿದ್ದರು. ಕೆ. ವಿಜಯನ್ ನಿರ್ದೇಶನ ಈ ಚಿತ್ರಕ್ಕೆ ಇತ್ತು. ಈ ಸಿನಿಮಾದ ಒಂದು ದೃಶ್ಯ ಎಲ್ಲರ ಗಮನ ಸೆಳೆಯುತ್ತಿದೆ.
ಸಿನಿಮಾದಲ್ಲಿ ಬರೋ ದೃಶ್ಯವು ಹೀಗೆ ಇದೆ. ವಿಷ್ಣುವರ್ಧನ್ ಮೇಲೆ ಯಾರೋ ಗೂಂಡಾಗಳು ದಾಳಿ ಮಾಡಿರುತ್ತಾರೆ ಮತ್ತು ಇದರಿಂದ ಅವರು ಆಸ್ಪತ್ರೆ ಸೇರುತ್ತಾರೆ. ಆ ಸಂದರ್ಭದಲ್ಲಿ ವಿಷ್ಣುನ ನೋಡಿಕೊಳ್ಳೋದು ರಜನಿಕಾಂತ್. ವಿಷ್ಣು ಸಂಪೂರ್ಣವಾಗಿ ಚೇತರಿಕೆಕಂಡ ನಂತರದಲ್ಲಿ ರಜನಿ ಸಿಗರೇಟ್ ಹಚ್ಚುತ್ತಾರೆ. ಒಂದು ಬಾರಿ ಅದನ್ನು ಸೇದಿ ವಿಷ್ಣು ಬಾಯಿಗೆ ಇಡುತ್ತಾರೆ. ಈ ವಿಡಿಯೋನ ಈಗ ವೈರಲ್ ಮಾಡಲಾಗುತ್ತಿದೆ.
ವಿಷ್ಣು ಹಾಗೂ ರಜನಿ ಇದೋಂದೇ ಸಿನಿಮಾದಲ್ಲಿ ಒಟ್ಟಿಗೆ ನಟಿಸಿಲ್ಲ. 1977ರಲ್ಲಿ ತೆರೆಗೆ ಬಂದ ‘ಸಹೋದರರ ಸವಾಲ್’, ‘ಗಲಾಟೆ ಸಂಸಾರ’, ‘ಕಿಲಾಡಿ ಕಿಟ್ಟು’ (1978) ಚಿತ್ರಗಳಲ್ಲೂ ಇವರು ಒಟ್ಟಿಗೆ ನಟಿಸಿದ್ದರು. ಈ ಕಾರಣಕ್ಕೆ ವಿಷ್ಣುವರ್ಧನ್ ಹಾಗೂ ರಜನಿ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಬೆಳೆಯಿತು.
ಇದನ್ನೂ ಓದಿ: ವಿಷ್ಣು, ರಾಜ್, ಅಂಬಿ; ಒಂದೇ ವೇದಿಕೆ ಮೇಲೆ ಅಪೂರ್ವ ಸಂಗಮದ ಕ್ಷಣವಿದು
ವಿಷ್ಣುವರ್ಧನ್ ಅವರು ಕೇವಲ ಕನ್ನಡಕ್ಕೆ ಮಾತ್ರ ಸೀಮಿತ ಆಗಿರಲಿಲ್ಲ. ಅವರು ಹಿಂದಿ, ತಮಿಳು, ತೆಲುಗು ಸಿನಿಮಾಗಳಲ್ಲೂ ಗುರುತಿಸಿಕೊಂಡಿದ್ದರು. ‘ಅಲೈಗಳ್’, ‘ಶ್ರೀ ರಾಘವೇಂದ್ರ’ ಮೊದಲಾದ ತಮಿಳು ಸಿನಿಮಾಗಳಲ್ಲೂ ಅವರು ನಟಿಸಿದ್ದರು.
(ವಿಶೇಷ ಸೂಚನೆ: ಧೂಮಪಾನ ಆರೋಗ್ಯಕ್ಕೆ ಹಾನಿಕರ. ಟಿವಿ9 ಕನ್ನಡ ಧೂಮಪಾನ ಮಾಡುವುದನ್ನು ಪ್ರಚೋದಿಸುವುದಿಲ್ಲ.)
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:52 am, Tue, 16 September 25







