ರೇಣುಕಾಸ್ವಾಮಿ ಪತ್ನಿ ಸಹನಾಗೆ ಸಿಗಲಿದೆ ಸರ್ಕಾರಿ ಕೆಲಸ; ಶಾಸಕನ ಭರವಸೆ
ರೇಣುಕಾಸ್ವಾಮಿ ಅವರ ಆಕಸ್ಮಿಕ ಮರಣದಿಂದಾಗಿ ಅವರ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅವರು ಕುಟುಂಬಕ್ಕೆ ಒಂದು ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡಿ, ರೇಣುಕಾಸ್ವಾಮಿ ಅವರ ಪತ್ನಿ ಸಹನಾಗೆ ಸರ್ಕಾರಿ ಕೆಲಸ ಕೊಡಿಸುವ ಭರವಸೆ ನೀಡಿದ್ದಾರೆ. ಮಠಗಳಲ್ಲಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಸಾವಿನಿಂದ ಅವರ ಕುಟುಂಬಕ್ಕೆ ಆಧಾರ ಆಗಿದ್ದವರೇ ಈಗ ಇಲ್ಲದಂತೆ ಆಗಿದೆ. ಇದರಿಂದ ಅವರ ಕುಟುಂಬಕ್ಕೆ ಜೀವನ ನಡೆಸೋದು ಅವರಿಗೆ ಕಷ್ಟ ಆಗುತ್ತಿದೆ. ಈಗ ರೇಣುಕಾಸ್ವಾಮಿ ಪತ್ನಿ ಸಹನಾಗೆ ಸರ್ಕಾರಿ ಕೆಲಸ ಕೊಡಿಸೋದಾಗಿ ಚಳ್ಳಕೆರೆ ಕೈ ಶಾಸಕ ಟಿ ರಘುಮೂರ್ತಿ ಭರವಸೆ ನೀಡಿದ್ದಾರೆ. ಇದರಿಂದ ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯ ಆಗಲಿ ಎಂಬುದು ರಘಮೂರ್ತಿ ಅವರ ಆಲೋಚನೆ.
ನಟ ದರ್ಶನ್ ಹಾಗೂ ಗ್ಯಾಂಗ್ ಮೇಲೆ ರೇಣುಕಾಸ್ವಾಮಿಯನ್ನು ಕೊಂದ ಆರೋಪ ಇದೆ. ಈ ಪ್ರಕರಣ ಕೋರ್ಟ್ನಲ್ಲಿ ಇದೆ. ಆಗಸ್ಟ್ 15ರಂದು ‘ಟಿವಿ9 ಕನ್ನಡ’ ರೇಣುಕಾಸ್ವಾಮಿ ಕುಟುಂಬದ ಸ್ಥಿತಿ ಗತಿ ಬಗ್ಗೆ ವರದಿ ಮಾಡಿತ್ತು. ಈ ಬೆನ್ನಲ್ಲೇ ರೇಣುಕಾಸ್ವಾಮಿ ಮನೆಗೆ ಚಳ್ಳಕೆರೆ ಕೈ ಶಾಸಕ ಟಿ ರಘುಮೂರ್ತಿ ಭೇಟಿ ನೀಡಿದ್ದಾರೆ. ರಘುಮೂರ್ತಿಗೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಾಬುರೆಡ್ಡಿ, ರವಿಕುಮಾರ್, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಲಿಂಗರಾಜ್ ಸಾಥ್ ನೀಡಿದ್ದಾರೆ.
ರೇಣುಕಾಸ್ವಾಮಿ ಕುಟುಂಬಕ್ಕೆ ರಘುಮೂರ್ತಿ ಆತ್ಮಸ್ಥೈರ್ಯ ಹೇಳಿದ್ದಾರೆ. ಸದ್ಯ ಕುಟುಂಬಕ್ಕೆ 1 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿದ್ದಾರೆ. ಇದೇ ವೇಳೆ ರೇಣುಕಾಸ್ವಾಮಿ ಪತ್ನಿ ಸಹನಾಗೆ ಕೆಲಸ ಕೊಡಿಸುವ ಭರವಸೆ ನೀಡಿದ್ದಾರೆ.
ಮುರುಘಾಮಠದ ಆಡಳಿತಾಧಿಕಾರಿ ಶಿವಯೋಗಿ ಕಳಸದ್ ಅವರಿಗೆ ಕರೆ ಮಾಡಿ ಮಠದ ಸಂಸ್ಥೆಯಲ್ಲಿ ಸಹನಾಗೆ ಕೆಲಸ ನೀಡಲು ಮನವಿ ಮಾಡಿದ್ದಾರೆ. ಸಿರಿಗೆರೆ ತರಳಬಾಳು ಮಠದ ಸಂಸ್ಥೆಯಲ್ಲೂ ಪ್ರಯತ್ನಕ್ಕೆ ಸಲಹೆ ನೀಡಿದ್ದಾರೆ. ಇನ್ನು, ಕೊನೆಯ ಪಕ್ಷ ಸರ್ಕಾರಿ ಅನುದಾನಿತ ಸಂಸ್ಥೆಯಲ್ಲಿ ಕ್ಲರ್ಕ್ ಪೋಸ್ಟ್ ಕೊಡಿಸೋದಾಗಿ ಭರವಸೆ ಕೊಟ್ಟಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ವಿಷ ಕೊಡಿ ಎಂದ ದರ್ಶನ್ ಬಿಗ್ ರಿಲೀಫ್ ನೀಡಿದ ಕೋರ್ಟ್
ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ‘ಟಿವಿ9 ವರದಿ ಪರಿಣಾಮ ಶಾಸಕ ರಘುಮೂರ್ತಿ ಮನೆಗೆ ಬಂದಿದ್ದರು. ಅವರು ನಮ್ಮ ಕಷ್ಟ ಕೇಳಿದ್ದಾರೆ. ರಘುಮೂರ್ತಿ 1ಲಕ್ಷ ರೂ. ಆರ್ಥಿಕ ನೆರವು ನೀಡಿದ್ದಾರೆ. ಸೊಸೆ ಸಹನಾಗೆ ಕೆಲಸ ಕೊಡಿಸುವ ಭರವಸೆ ನೀಡಿದ್ದಾರೆ. ಅವರಿಗೆ ಹಾಗೂ ಟಿವಿ9ಗೆ ಧನ್ಯವಾದ’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








