ಪ್ರಿಯಾಂಕಾ ಉಪೇಂದ್ರ ಮಾಡಿದ ಒಂದೇ ತಪ್ಪಿನಿಂದ ಆಯ್ತು ಮೊಬೈಲ್ ಹ್ಯಾಕ್
ಸೈಬರ್ ವಂಚಕರು ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಹ್ಯಾಕ್ ಮಾಡಿ ತೊಂದರೆ ನೀಡಿದ್ದಾರೆ. ಪ್ರಿಯಾಂಕಾರ ಆಪ್ತರಿಗೆ ಸಂದೇಶ ಕಳಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಘಟನೆ ಬಗ್ಗೆ ಪ್ರಿಯಾಂಕಾ ಪ್ರತಿಕ್ರಿಯಿಸಿದ್ದಾರೆ. ‘ಎಲ್ಲರೂ ಹುಷಾರಾಗಿರಿ. ಮೊಬೈಲ್ ಸರಿಯಾಗಿ ಇಟ್ಟುಕೊಳ್ಳಿ’ ಎಂದು ಪ್ರಿಯಾಂಕಾ ಕಿವಿಮಾತು ಹೇಳಿದ್ದಾರೆ.

ನಟಿ ಪ್ರಿಯಾಂಕಾ ಉಪೇಂದ್ರ (Priyanka Upendra) ಅವರ ಮೊಬೈಲ್ಗೆ ಒಂದು ಕೋಡ್ ಬಂದಿದೆ. ಅದನ್ನು ಕಳಿಸಿದ್ದು ಸೈಬರ್ ವಂಚಕರು (Cyber Fraud) ಎಂಬುದು ಪ್ರಿಯಾಂಕಾಗೆ ತಿಳಿಯಲಿಲ್ಲ. ಆ ಕೋಡ್ ಡಯಲ್ ಮಾಡುತ್ತಿದ್ದಂತೆಯೇ ಅವರ ಮೊಬೈಲ್ ಹ್ಯಾಕ್ (Mobile Hack) ಆಯಿತು. ಬಳಿಕ ವಾಟ್ಸಪ್ ಕೂಡ ಸೈಬರ್ ಖದೀಮರ ನಿಯಂತ್ರಣಕ್ಕೆ ಹೋಯಿತು. ಹ್ಯಾಕಿಂಗ್ ಲಿಂಗ್ ಗುರುತಿಸುವಲ್ಲಿ ಪ್ರಿಯಾಂಕಾ ಉಪೇಂದ್ರ ಎಡವಿದರು. ಅದೇ ಅವರು ಮಾಡಿದ ತಪ್ಪು. ಈಗ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಟಿವಿ9 ಜೊತೆ ಮಾತನಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
‘ತುಂಬಾ ಬೇಜಾರು ಆಗುತ್ತಿದೆ. ಬೆಳಗ್ಗಿನಿಂದ ಬಹಳ ಜನರು ದುಡ್ಡು ಕಳಿಸಿದ್ದಾರೆ. ಐಟಂ ಡೆಲಿವರಿ ನೆಪದಲ್ಲಿ ನಮಗೆ ಫೋನ್ ಮಾಡಿ ಒಬ್ಬರು ಒಂದು ಕೋಡ್ ಕಳಿಸಿದರು. ಅದನ್ನು ಸೇವ್ ಮಾಡಿಕೊಂಡೆ. ಅದು ಹ್ಯಾಕಿಂಗ್ ಲಿಂಕ್ ಅಂತ ನನಗೆ ಗೊತ್ತಾಗಲಿಲ್ಲ. ಹಾಗಾಗಿ ಇದು ನನ್ನದೇ ತಪ್ಪು. ಅಷ್ಟೊಂದು ತಂತ್ರಜ್ಞಾನ ನನಗೆ ಗೊತ್ತಿಲ್ಲ. ಇತ್ತೀಚೆಗೆ ನಾನು ಯುಪಿಐ ಬಳಕೆ ಮಾಡಲು ಶುರು ಮಾಡಿದ್ದು. ನಮಗೆ ಏನೂ ಗೊತ್ತಾಗಲಿಲ್ಲ. ನನ್ನ ವಾಟ್ಸಪ್ ಹ್ಯಾಕ್ ಮಾಡಿ ಬೇರೆಯವರಿಗೆ ಮೆಸೇಜ್ ಕಳಿಸಿದ್ದಾರೆ. ನನ್ನ ತಮ್ಮ ಕೊಲ್ಕತ್ತಾದಿಂದ ಕರೆ ಮಾಡಿ ಈ ವಿಚಾರ ತಿಳಿಸಿದ. ತಕ್ಷಣ ನಾವು ಬಂದು ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ’
‘ನಾನು ಯಾವೆಲ್ಲ ವಾಟ್ಸಪ್ ಗ್ರೂಪ್ಗಳಲ್ಲಿ ಅಡ್ಮಿನ್ ಆಗಿದ್ದೆನೋ ಆ ಗ್ರೂಪ್ಗಳಲ್ಲಿ ಕೆಲವರನ್ನು ಹ್ಯಾಕರ್ಗಳು ತೆಗೆದುಹಾಕಿದ್ದಾರೆ. ಆನ್ಲೈನ್ನಲ್ಲಿ ನಾವು ಹಲವಾರು ವಸ್ತುಗಳನ್ನು ತರಿಸುತ್ತೇವೆ. ಈ ಬಾರಿ ಹೀಗೆ ಆಗಿರುವುದು ಕಾಕತಾಳೀಯ. ಅವರು ನಂಬರ್ ಬದಲು ಕೋಡ್ ಕೊಟ್ಟಾಗಲೇ ನನಗೆ ಅನುಮಾನ ಬಂತು. ಆದರೂ ಆ ನಂಬರ್ ಡಯಲ್ ಮಾಡಿದೆ. ಅಲ್ಲೇ ನಾನು ತಪ್ಪು ಮಾಡಿದ್ದು’ ಎಂದು ಪ್ರಿಯಾಂಕಾ ಅವರು ಹೇಳಿದ್ದಾರೆ.
‘ಹ್ಯಾಕರ್ಗಳು ಹಿಂದಿಯಲ್ಲಿ ಮಾತನಾಡುತ್ತಿದ್ದರು. ನಾವು ಫರ್ನೀಚರ್ ಆರ್ಡರ್ ಮಾಡಿದ್ದು ಹೊರ ರಾಜ್ಯಗಳಿಂದ. ಹಾಗಾಗಿ ಅವರು ಹಿಂದಿಯಲ್ಲಿ ಮಾತನಾಡಿದರೂ ನನಗೆ ಅನುಮಾನ ಬರಲಿಲ್ಲ. ಗಾಯತ್ರಿ, ಚೇತನಾ ಎಂಬ ನನ್ನ ಇಬ್ಬರು ಸ್ನೇಹಿತೆಯರು ಹಣ ಕಳೆದುಕೊಂಡಿದ್ದಾರೆ. ಆಯುಷ್ ಕೂಡ ಹಣ ಕಳೆದುಕೊಂಡಿದ್ದಾನೆ. ಎಲ್ಲರದ್ದೂ ಸೇರಿ 1.60 ಲಕ್ಷ ರೂಪಾಯಿ ಹೋಗಿದೆ. ಈಗ ಬ್ಯಾಂಕ್ ವ್ಯವಹಾರ ಸ್ಥಗಿತಗೊಳಿಸಲು ಪ್ರಯತ್ನಿಸುತ್ತಿದ್ದೇನೆ’ ಎಂದಿದ್ದಾರೆ ಪ್ರಿಯಾಂಕಾ ಉಪೇಂದ್ರ.
‘ಬಾಂಬೆ ಸೈಬರ್ ಪೊಲೀಸ್ ಮುಖ್ಯಸ್ಥರ ಜೊತೆ ಮಾತನಾಡಿದ್ದೇನೆ. ಸದಾಶಿವನಗರ ಪೊಲೀಸರು ಬಹಳ ಸಹಾಯ ಮಾಡುತ್ತಿದ್ದಾರೆ. ಹ್ಯಾಕರ್ಗಳು ಉಪೇಂದ್ರಗೆ ಫೋನ್ ಬರದಂತೆ ಬ್ಲಾಕ್ ಮಾಡಿದ್ದಾರೆ. ಕೆಲಸದ ಕಾರಣ ನಾನು ಎಲ್ಲರ ಕರೆ ಸ್ವೀಕರಿಸುತ್ತೇನೆ. ಆದರೆ ಯಾವತ್ತೂ ಈ ರೀತಿ ಆಗಿರಲಿಲ್ಲ. ಹ್ಯಾಕರ್ಗಳು ಕೋಡ್ ಹಾಕಿ ನನ್ನ ಫೋನ್ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ ಎಂಬುದು ನನಗೆ ತಿಳಿದಿರಲಿಲ್ಲ’ ಎಂದು ಪ್ರಿಯಾಂಕಾ ಹೇಳಿದ್ದಾರೆ.
ಇದನ್ನೂ ಓದಿ: ಉಪೇಂದ್ರ ಮೊಬೈಲ್ ಹ್ಯಾಕ್: ಲಕ್ಷಾಂತರ ರೂಪಾಯಿ ಎಗರಿಸಿದ ವಿಚಿತ್ರ ನಂಬರ್ ಇದು
‘ಈ ರೀತಿ ಆದಾಗ ನಮ್ಮ ಆಪ್ತರಿಗೆ ಆತಂಕ ಆಗಿದೆ. ನನ್ನ ವಾಟ್ಸಪ್ ಬ್ಲಾಂಕ್ ಆಗಿತ್ತು. ಹ್ಯಾಕರ್ಗಳಿಗೆ ನನ್ನ ನಂಬರ್ ಹೇಗೆ ಸಿಕ್ಕಿತೋ ಗೊತ್ತಿಲ್ಲ. ಒಂದೇ ಗಂಟೆಯಲ್ಲಿ ಇಷ್ಟೆಲ್ಲ ತೊಂದರೆ ಆಯಿತು. ನಮಗೆ ಇದು ಒಂದು ಪಾಠ. ತುಂಬ ಜನ ಯುಪಿಐ ಬಳಸುತ್ತೇವೆ. ಆದರೆ ಯಾರನ್ನೂ ನಂಬಬೇಡಿ. ಎಐ ಮೂಲಕ ವಾಯ್ಸ್ ರೆಕಾರ್ಡ್ ಮಾಡಿಯೂ ಮೋಸ ಮಾಡುತ್ತಾರೆ. ನಾವು ಹುಷಾರಾಗಿ ಇರಬೇಕು’ ಎಂದಿದ್ದಾರೆ ಪ್ರಿಯಾಂಕಾ ಉಪೇಂದ್ರ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



