ಮಲವಳ್ಳಿ ಹುಚ್ಚೇಗೌಡ ಅಮರನಾಥ್ ಎಂದಿದ್ದವರು ನಂತರ ಅಂಬರೀಷ್ (Ambareesh) ಎಂದು ಫೇಮಸ್ ಆದರು. ಇಂದು ಅವರು ನಮ್ಮೊಂದಿಗೆ ಇಲ್ಲ. ಆದರೆ, ಅವರು ತೋರಿಸಿ ಹೋದ ಗತ್ತು, ಅವರು ಸಲುಗೆಯಿಂದ ಬಯ್ಯುತ್ತಿದ್ದುದು, ಅವರ ಸಿನಿಮಾಗಳು ಜನರ ಮನಸ್ಸಿನಲ್ಲಿ ಸದಾ ಹಸಿರಾಗಿದೆ. ಅಂಬರೀಷ್ ಅವರು ಜನಿಸಿದ್ದು 1952ರ ಮೇ 29ರಂದು. ಇಂದು ಅವರು ಇದ್ದಿದ್ದರೆ 72 ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದರು. ಅಂಬರೀಷ್ ಅವರು ನಡೆದು ಬಂದ ಹಾದಿಯನ್ನು ಇಲ್ಲಿ ನೆನಪಿಸಿಕೊಳ್ಳೋಣ.
ಅಂಬರೀಷ್ ಅವರು 20ನೇ ವಯಸ್ಸಿಗೆ ಚಿತ್ರರಂಗಕ್ಕೆ ಬಂದರು. ವಿಷ್ಣುವರ್ಧನ್ ನಟನೆಯ ‘ನಾಗರಹಾವು’ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿ ಗಮನ ಸೆಳೆದರು. ಆ ಬಳಿಕ ಅವರಿಗೆ ಹಲವು ಆಫರ್ಗಳು ಬರುತ್ತಾ ಹೋದವು. ವಿಲನ್ ಆಗಿ, ಹೀರೋ ಆಗಿ, ಪೊಲೀಸ್ ಅಧಿಕಾರಿಯಾಗಿ ಅವರು ಮಿಂಚಿದರು. ಅವರು ಮಾಡಿದ ಪಾತ್ರಗಳು ಗಮನ ಸೆಳೆದಿವೆ. 2019ರಲ್ಲಿ ರಿಲೀಸ್ ಆದ ‘ಕುರುಕ್ಷೇತ್ರ’ ಅವರ ನಟನೆಯ ಕೊನೆಯ ಸಿನಿಮಾ.
ಅಂಬರೀಷ್ ಅವರು 1994ರಲ್ಲಿ ರಾಜಕೀಯ ಬದುಕನ್ನೂ ಆರಂಭಿಸಿದರು. ಅವರು ಕಾಂಗ್ರೆಸ್ ಸೇರಿದರು. ಆದರೆ, ಅವರಿಗೆ ಟಿಕೆಟ್ ಸಿಗಲಿಲ್ಲ. ಹೀಗಾಗಿ 1998ರಲ್ಲಿ ಜನತಾದಳ ಸೇರಿ, ಮಂಡ್ಯದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿ ಗೆದ್ದರು. 1999ರಲ್ಲಿ ಅವರು ಮತ್ತೆ ಕಾಂಗ್ರೆಸ್ ಸೇರಿದರು. ಆ ಬಳಿಕ ಕೆಲವು ಚುನಾವಣೆಗಳನ್ನು ಎದುರಿಸಿದರು. ಅವರು ರಾಜ್ಯ ಸರ್ಕಾರದಲ್ಲಿ ಸಚಿವರೂ ಆಗಿದ್ದರು.
ಇದನ್ನೂ ಓದಿ: ‘ನನಗೂ ಅಂಬರೀಷ್ ಬೈಯ್ದಿದ್ದರು’: ಆ ದಿನಗಳನ್ನು ನೆನಪಿಸಿಕೊಂಡ ನಟ ತಬಲಾ ನಾಣಿ
ಅಂಬರೀಷ್ ಅವರು ಮಂಡ್ಯದ ಗಂಡು ಎಂದೇ ಫೇಮಸ್ ಆದವರು. ಅವರಿಗೆ ಮಂಡ್ಯದ ಗಂಡು ಎಂದು ಟೈಟಲ್ ನೀಡಿದ್ದು ರೈತ ಹೋರಾಟಗಾರ, ಮಾಜಿ ಸಂಸದ ಜಿ.ಮಾದೇಗೌಡ ಅವರು. ಅಂಬರೀಷ್ ಅವರು ಗುರು ಎನಿಸಿಕೊಂಡಿದ್ದ ಅವರು, ಅಂಬರೀಷ್ಗೆ ಮಂಡ್ಯದ ಗಂಡು’ ಎಂದು ಬಿರುದು ಕೊಟ್ಟಿದ್ದರು. ಈ ವಿಚಾರವನ್ನು ಮಾದೇಗೌಡ ಅವರೇ ರಿವೀಲ್ ಮಾಡಿದ್ದರು. 1994ರಲ್ಲಿ ಅಂಬರೀಷ್ ಅವರು ‘ಮಂಡ್ಯದ ಗಂಡು’ ಸಿನಿಮಾ ಮಾಡಿದರು. ಅಂಬಿ ಜೊತೆ ಬಿರುದು ಸೇರಿಕೊಳ್ಳಲು ಈ ಸಿನಿಮಾ ಕೂಡ ಕಾರಣ ಆಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:39 am, Wed, 29 May 24