ನಟ ಪುನೀತ್ ರಾಜ್ಕುಮಾರ್ (Puneeth Rajkumar) ನಮ್ಮೊಂದಿಗೆ ಇಲ್ಲ ಎಂಬ ನೋವು ಎಂದಿಗೂ ಮರೆ ಆಗುವಂಥದ್ದಲ್ಲ. ಅಪ್ಪು ಇಲ್ಲ ಎಂಬ ಸತ್ಯವನ್ನು ಅಭಿಮಾನಿಗಳಿಗೆ, ಆಪ್ತರಿಗೆ, ಕುಟುಂಬದವರಿಗೆ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಿನಿಮಾಗಳ ಮೂಲಕ ‘ಪವರ್ ಸ್ಟಾರ್’ ಎಂದಿಗೂ ಶಾಶ್ವತವಾಗಿ ಇರುತ್ತಾರೆ. ಕನ್ನಡ ಚಿತ್ರರಂಗ ಮಾತ್ರವಲ್ಲದೇ ಪರಭಾಷೆಯ ಅನೇಕ ಸೆಲೆಬ್ರಿಟಿಗಳ ಜೊತೆಗೂ ಪುನೀತ್ ರಾಜ್ಕುಮಾರ್ ಸ್ನೇಹ ಹೊಂದಿದ್ದರು. ಅವರನ್ನು ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು. ಅಪ್ಪು ಅವರ ನಗುಮುಖವನ್ನು ಇಷ್ಟಪಡದವರೇ ಇಲ್ಲ. ದಿಗ್ಗಜ ನಟ ಅಮಿತಾಭ್ ಬಚ್ಚನ್ (Amitabh Bachchan) ಕೂಡ ಪುನೀತ್ ರಾಜ್ಕುಮಾರ್ ಸ್ಮೈಲ್ ಬಗ್ಗೆ ಮಾತನಾಡಿದ್ದಾರೆ. ಈ ವಿಡಿಯೋವನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪುನೀತ್ ರಾಜ್ಕುಮಾರ್ ಅವರು ಬಹಳ ಪ್ರೀತಿಯಿಂದ ಮಾಡಿದ ಸಾಕ್ಷ್ಯಚಿತ್ರ ‘ಗಂಧದ ಗುಡಿ’. ಈ ಡಾಕ್ಯುಮೆಂಟರಿಯ ಕೆಲಸಗಳು ಪೂರ್ಣಗೊಳ್ಳುವುದಕ್ಕೂ ಮುನ್ನ ಅವರು ನಿಧನರಾಗಿದ್ದು ನೋವಿನ ಸಂಗತಿ. ಈ ವರ್ಷ ಅಕ್ಟೋಬರ್ 28ರಂದು ‘ಗಂಧದ ಗುಡಿ’ ರಿಲೀಸ್ ಮಾಡಲಾಯಿತು. ಅದಕ್ಕೂ ಮುನ್ನ ಅದ್ದೂರಿಯಾಗಿ ಪ್ರೀ-ರಿಲೀಸ್ ಕಾರ್ಯಕ್ರಮ ನಡೆಯಿತು. ಆ ಕಾರ್ಯಕ್ರಮಕ್ಕೆ ಅಮಿತಾಭ್ ಬಚ್ಚನ್ ಬರಬೇಕಿತ್ತು. ಕಾರಣಾಂತರಗಳಿಂದ ಬರಲು ಸಾಧ್ಯವಾಗಲಿಲ್ಲ. ಮುಂಬೈನಿಂದಲೇ ಅವರು ಒಂದು ವಿಡಿಯೋ ಸಂದೇಶ ಕಳಿಸಿದ್ದರು. ಆ ವಿಡಿಯೋ ಈಗ ವೈರಲ್ ಆಗಿದೆ.
ಅಪ್ಪು ಬಗ್ಗೆ ಅಮಿತಾಭ್ ಬಚ್ಚನ್ ಹೇಳಿದ್ದೇನು?
‘ಪುನೀತ್ ರಾಜ್ಕುಮಾರ್ ಅವರನ್ನು ನಾವೆಲ್ಲರೂ ಅಪ್ಪು ಅಂತ ಪ್ರೀತಿಯಿಂದ ಕರೆಯುತ್ತಿದ್ವಿ. ಅವರ ಬಗ್ಗೆ ಭೂತಕಾಲದಲ್ಲಿ ಮಾತನಾಡಲು ಕಷ್ಟ ಆಗುತ್ತದೆ’ ಎಂದು ಬಿಗ್ ಬಿ ಮಾತು ಆರಂಭಿಸಿದ್ದಾರೆ. ‘ಅವರು ಚಿಕ್ಕ ಬಾಲಕನಾಗಿದ್ದಾಗ ನಾನು ಮೊದಲ ಬಾರಿ ಭೇಟಿ ಮಾಡಿದೆ. ಯಾವಾಗ ಭೇಟಿ ಆದರೂ ಕೂಡ ಅವರ ಮುಖದಲ್ಲಿ ಸುಂದರವಾದ ನಗು ಇರುತ್ತಿತ್ತು. ನಮ್ಮಲ್ಲರಿಗೂ ಅವರು ಹತ್ತಿರವಾಗಲು ಆ ನಗುವೇ ಕಾರಣ ಅಂತ ನಾನು ನಂಬಿದ್ದೇನೆ’ ಎಂದಿದ್ದಾರೆ ಅಮಿತಾಭ್ ಬಚ್ಚನ್.
‘ಗಂಧದ ಗುಡಿ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಅವರು ನಟಿಸಿಲ್ಲ. ಅವರು ತಾವಾಗಿಯೇ ಕಾಣಿಸಿಕೊಂಡಿದ್ದಾರೆ. ಸಮೃದ್ಧವಾದ ಕರ್ನಾಟಕದ ಕಾಡನ್ನು ಎಲ್ಲರಿಗೂ ಪರಿಚಯಿಸಿದ್ದಾರೆ. ಅಪ್ಪು ಅವರ ಮ್ಯಾಜಿಕಲ್ ಜರ್ನಿಯಲ್ಲಿ ಎಲ್ಲರೂ ಭಾಗವಹಿಸಿ. ಪರಿಸರದ ಜೊತೆ ಸಾಮರಸ್ಯದಿಂದ ಬದುಕುವ ಬಗ್ಗೆ ಪುನೀತ್ ಅವರು ಈ ಸಾಕ್ಷ್ಯಚಿತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ನಮ್ಮ ಮಕ್ಕಳಿಗಾಗಿ ಇರುವ ಚಿತ್ರ ಇದು. ನಾವೆಲ್ಲರೂ ನಮ್ಮ ಅರಣ್ಯ ಸಂಪತ್ತಿನ ಬಗ್ಗೆ ಹೆಮ್ಮೆ ಪಡುವಂತಹ ಚಿತ್ರ. ಗಂಧದ ಗುಡಿಗೆ ಯಶಸ್ಸು ಸಿಗಲಿ’ ಎಂದು ಅಮಿತಾಭ್ ಬಚ್ಚನ್ ಹೇಳಿದ್ದಾರೆ.
ಶ್ರೀ. ಅಮಿತಾಭ್ ಬಚ್ಚನ್ ಅವರೇ, ನಿಮ್ಮ ಈ ಭಾವನಾತ್ಮಕ ಮಾತುಗಳಿಗೆ ಮತ್ತು ವಿಶೇಷ ಸಂದೇಶಕ್ಕೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.
.
Thank you for your gracious words and overwhelming gesture @SrBachchan sir.
We are humbled by your expression.#DrPuneethRajkumar #GandhadaGudi #GGMovie #PowerInU pic.twitter.com/M5wSDtwN1J— Ashwini Puneeth Rajkumar (@Ashwini_PRK) November 9, 2022
ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಅಮಿತಾಭ್ ಬಚ್ಚನ್ ಅವರಿಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಧನ್ಯವಾದ ಸಲ್ಲಿಸಿದ್ದಾರೆ. ‘ಅಮಿತಾಭ್ ಬಚ್ಚನ್ ಅವರೇ, ನಿಮ್ಮ ಈ ಭಾವನಾತ್ಮಕ ಮಾತುಗಳಿಗೆ ಮತ್ತು ವಿಶೇಷ ಸಂದೇಶಕ್ಕೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು’ ಎಂದು ಅಶ್ವಿನಿ ಪೋಸ್ಟ್ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.