
ಇದು ಎಲ್ಲದಕ್ಕೂ ಒಟಿಪಿ ಕೇಳುವ ಜಮಾನ. ಅನೀಶ್ ತೇಜೇಶ್ವರ್ (Aniissh Tejeshwar) ನಿರ್ದೇಶಿಸಿ, ನಟಿಸುತ್ತಿರುವ ಹೊಸ ಸಿನಿಮಾದ ಶೀರ್ಷಿಕೆಯಲ್ಲೂ ಒಟಿಪಿ ಪದ ಗಮನ ಸೆಳೆಯುತ್ತಿದೆ. ಹೌದು, ಅವರ ಹೊಸ ಚಿತ್ರಕ್ಕೆ ‘ಲವ್ ಒಟಿಪಿ’ (Love OTP) ಎಂದು ಡಿಫರೆಂಟ್ ಟೈಟಲ್ ಇಡಲಾಗಿದೆ. ಈಗ ಈ ಸಿನಿಮಾದ ಟ್ರೇಲರ್ (Love OTP Trailer) ಬಿಡುಗಡೆ ಆಗಿದೆ. ಸಿನಿಮಾದ ಕಥೆ ಏನು ಎಂಬ ಕೌತುಕಕ್ಕೂ ಉತ್ತರ ಸಿಕ್ಕಿದೆ. ಶೀರ್ಷಿಕೆಗೆ ತಕ್ಕಂತೆಯೇ ‘ಲವ್ ಒಟಿಪಿ’ ಚಿತ್ರದಲ್ಲಿ ಪಕ್ಕಾ ಲವ್ ಸ್ಟೋರಿ ಇರಲಿದೆ. ಆದರೆ ಸಿಕ್ಕಾಪಟ್ಟೆ ಟ್ವಿಸ್ಟ್ ಕೂಡ ಎದುರಾಗಲಿದೆ.
ವಿಜಯ್ ಎಂ.ರೆಡ್ಡಿ ಅವರು ಭಾವಪ್ರೀತ ಪ್ರೊಡಕ್ಷನ್ ಸಂಸ್ಥೆ ಮೂಲಕ ‘ಲವ್ ಒಟಿಪಿ’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಪುಷ್ಪ ಮುನಿರೆಡ್ಡಿ ಅವರು ಈ ಸಿನಿಮಾವನ್ನು ಅರ್ಪಿಸುತ್ತಿದ್ದಾರೆ. ಅನೀಶ್ ತೇಜೇಶ್ವರ್ ಅವರು ಮುಖ್ಯ ಭೂಮಿಕೆ ನಿಭಾಯಿಸುವುದರ ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ಅಷ್ಟಕ್ಕೂ ಈ ಸಿನಿಮಾದಲ್ಲಿ ಒಟಿಪಿ ಎಂದರೆ ಏನು? ಓವರ್ ಟಾರ್ಚರ್ ಪ್ರೆಷರ್!
‘ಲವ್ ಒಟಿಪಿ’ ಸಿನಿಮಾದ ಟ್ರೇಲರ್ನಲ್ಲಿ ಸಿನಿಮಾದ ಕಥೆಯ ಬಗ್ಗೆ ಸುಳಿವು ನೀಡಲಾಗಿದೆ. ಪ್ರೀತಿ-ಪ್ರೇಮ, ಹೊಡೆದಾಟ-ಬಡಿದಾಟ, ಅಪ್ಪ-ಮಗನ ಕಿರಿಕ್, ಕ್ರಿಕೆಟ್, ಸ್ನೇಹ, ಗಲಾಟೆ, ಫ್ಯಾಮಿಲಿ ಡ್ರಾಮಾ ಸೇರಿದಂತೆ ಹಲವು ಕಮರ್ಷಿಯಲ್ ಅಂಶಗಳು ಈ ಸಿನಿಮಾದಲ್ಲಿ ಇರಲಿವೆ ಎಂಬುದನ್ನು 2 ನಿಮಿಷ 24 ಸೆಕೆಂಡ್ ಅವಧಿಯ ಟ್ರೇಲರ್ನಲ್ಲಿ ತೋರಿಸಲಾಗಿದೆ.
ಈ ಚಿತ್ರಕ್ಕೆ ಅನೀಶ್ ತೇಜೇಶ್ವರ್ ಅವರು ಅಕ್ಷಯ್ ಎಂಬ ಪಾತ್ರ ಮಾಡಿದ್ದಾರೆ. ಕ್ರಿಕೆಟರ್ ಆಗಬೇಕು ಎಂಬುದು ಅಕ್ಷಯ್ ಕನಸು. ಕ್ರಿಕೆಟ್ ಆಡುವಾಗ ಆಟಕ್ಕಿಂತ ಜಗಳ ಮಾಡಿಕೊಂಡಿದ್ದೇ ಜಾಸ್ತಿ. ಅದಕ್ಕೆ ಕಾರಣ ಆತನ ಡಬಲ್ ಲವ್! ಅಂದರೆ, ಏಕಕಾಲಕ್ಕೆ ಇಬ್ಬರನ್ನು ಪ್ರೀತಿಸಿದ ಹುಡುಗನ ಕಿರಿಕ್ ಕಹಾನಿ ಇದು. ಒಟ್ಟಿನಲ್ಲಿ ಟ್ರೇಲರ್ ನೋಡಿದರೆ ಸಿನಿಮಾ ಬಗ್ಗೆ ಕೌತುಕ ಮೂಡುವಂತಿದೆ.
ಈ ಸಿನಿಮಾದಲ್ಲಿ ಅನೀಶ್ ತೇಜೇಶ್ವರ್ ಅವರ ಜೊತೆ ಪ್ರಮೋದಿನಿ ಮತ್ತು ಸ್ವರೂಪಿಣಿ (ಆರೋಹಿ ನಾರಾಯಣ್) ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಒಂದಷ್ಟು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿರುವ ಪ್ರಮೋದಿನಿ ಅವರು ಈಗ ‘ಲವ್ ಒಟಿಪಿ’ ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: ಯಶಸ್ಸು ಅಂದರೆ ಇದು; ರಿಷಬ್ ಶೆಟ್ಟಿಗೆ ಮುಂಬೈನಲ್ಲಿ ಸಿಕ್ತು ವಿಶೇಷ ಗೌರವ
ಈ ಚಿತ್ರದಿಂದ ನಟಿ ಆರೋಹಿ ನಾರಾಯಣ್ ಅವರು ಸ್ವರೂಪಿಣಿ ಎಂದು ಹೆಸರು ಬದಲಾಯಿಸಿಕೊಳ್ಳುತ್ತಿದ್ದಾರೆ. ಸ್ವರೂಪಿಣಿ ಎಂಬುದು ಅವರ ಮೂಲ ಹೆಸರು. ಹಾಗಾಗಿ ಅವರು ಅದೇ ಹೆಸರಿನಿಂದ ಮುಂದುವರಿಸಲಿದ್ದಾರೆ. ಸ್ವಾತಿ, ರಾಜೇವ್ ಕನಕಲ, ಕೃಷ್ಣ ಭಟ್ಮ ಜಾನ್ವಿ ಕಲಕೇರಿ, ನಾಟ್ಯ ರಂಗ, ಚೇತನ್ ಗಂಧರ್ವ ಮುಂತಾದವರು ಕೂಡ ‘ಲವ್ ಒಟಿಪಿ’ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 5:25 pm, Sun, 12 October 25